Advertisement

ಸಾವಯವ ಸಂಪತ್ತು ಅನಾವರಣಕ್ಕೆ ವೇದಿಕೆ

11:45 AM Mar 12, 2017 | |

ಬೆಂಗಳೂರು: ರೈತರು ಮತ್ತು ಸ್ಥಳೀಯ ಮಾರಾಟಗಾರರು ಹಾಗೂ ಖರೀದಿದಾರರ ನಡುವೆ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯು ಏಪ್ರಿಲ್‌ 28ರಿಂದ 30ರವರೆಗೆ ನಗರದ ಅರಮನೆ ಮೈದಾನದಲ್ಲಿ “ಸಾವಯವ ಮತ್ತು ಸಿರಿಧಾನ್ಯಗಳ ರಾಷ್ಟ್ರೀಯ ವ್ಯಾಪಾರ ಮೇಳ-2017′ ಹಮ್ಮಿಕೊಂಡಿದೆ. 

Advertisement

ಮೂರು ದಿನಗಳ ಈ ಮೇಳವು ರಾಜ್ಯದ ಸಾವಯವ ಸಂಪತ್ತು, ವೈವಿಧ್ಯತೆ ಹಾಗೂ ರೈತರ ಸಾಧನೆಗಳಿಗೆ ವೇದಿಕೆಯಾಗಲಿದೆ. ಮತ್ತೂಂದೆಡೆ ವಿವಿಧ ರಾಜ್ಯಗಳಿಂದ ಬರುವ ರೈತರು ಮತ್ತು ಕೃಷಿಕ ತಂಡಗಳ ಸಾಧನೆ-ಸಾಮರ್ಥ್ಯಗಳು ಇಲ್ಲಿ ಅನಾವರಣಗೊಳ್ಳಲಿವೆ. ಸುಮಾರು ಹತ್ತು ಸಾವಿರ ಜನ ಇದಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. 

ಮಾರುಕಟ್ಟೆ-ರೈತರನ್ನು ಸಮನ್ವಯಗೊಳಿಸುವ ಮೇಳ: ರಾಷ್ಟ್ರಮಟ್ಟದ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳದ ಅಂಗವಾಗಿ ಶನಿವಾರ ನಗರದ ಕ್ಯಾಪಿಟಲ್‌ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಮೇಳವನ್ನು  ಕೃಷಿ ಸಚಿವ ಕೃಷ್ಣ ಬೈರೇಗೌಡ ಅನಾವರಣಗೊಳಿಸಿದರು. 

ನಂತರ ಮಾತನಾಡಿದ ಅವರು, “ರೈತರು ಸಾವಯವ ಉತ್ಪನ್ನಗಳನ್ನು ಬೆಳೆಯಲು ತಯಾರಿದ್ದಾರೆ. ಅದಕ್ಕೆ ಮಾರುಕಟ್ಟೆ ಇಲ್ಲ ಎಂಬ ಆತಂಕ ಒಂದೆಡೆ ಕಾಡುತ್ತದೆ. ಆದರೆ, ಮತ್ತೂಂದೆಡೆ ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ಸಮರ್ಪಕ ಪೂರೈಕೆ ಇಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ. ಅಂತರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರೈತರು, ಸ್ಥಳೀಯ ಮಾರಾಟಗಾರರು ಮತ್ತು ಖರೀದಿದಾರರ ನಡುವೆ ಈ ಮೇಳ ಸಂಪರ್ಕ ಕೊಂಡಿ ಆಗಲಿದೆ,” ಎಂದು ತಿಳಿಸಿದರು. 

ರೈತರು ಬೆಳೆದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಪ್ರಾಂತೀಯ ಒಕ್ಕೂಟಗಳನ್ನು ರಚಿಸಲಾಯಿತು. ಈಗ ಇಲ್ಲಿಂದ ವ್ಯಾಪಾರಿಗಳಿಗೆ ಉತ್ಪನ್ನ ಪೂರೈಕೆಯಾಗುತ್ತಿದೆ. ಮೇಳದಲ್ಲಿ ಈ ಸ್ಥಳೀಯ ಮಾರಾಟಗಾರರಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಅದೇ ರೀತಿ, ಬೇರೆ ಬೇರೆ ರಾಜ್ಯಗಳಿಂದ ಬರುವ ಖರೀದಿದಾರರಿಗೂ ಅವಕಾಶ ಕಲ್ಪಿಸಲಾಗುವುದು. ಇದರಿಂದ ನಮ್ಮಲ್ಲಿನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬರಲಿದೆ ಎಂದರು. 

Advertisement

160ಕ್ಕೂ ಹೆಚ್ಚು ಮಳಿಗೆಗಳು: ಐಸಿಒವಿಎ ಕಾರ್ಯನಿರ್ವಹಣಾ ನಿರ್ದೇಶಕ ಮನೋಜ್‌ ಮೆನನ್‌ ಮಾತನಾಡಿ, ಮೇಳದ ವಸ್ತುಪ್ರದರ್ಶನದಲ್ಲಿ 60ಕ್ಕೂ ಹೆಚ್ಚು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಾಗೂ ರೈತ ಸಮೂಹಗಳ ಪೆವಿಲಿಯನ್‌ಗಳು ಇರಲಿವೆ. ನೂರಕ್ಕೂ ಅಧಿಕ ಖಾಸಗಿ ಪ್ರದರ್ಶಕರು ಭಾಗವಹಿಸಲಿದ್ದಾರೆ. ವಿವಿಧ ವಿಷಯಗಳ ಕುರಿತು ರೈತ ಕಾರ್ಯಾಗಾರ, ಸಾವಯವ ಕೃಷಿ ಮತ್ತು ಮಾರಾಟಕ್ಕೆ ಇರುವ ಅವಕಾಶಗಳ ಕುರಿತು ಗೋಷ್ಠಿಗಳು ನಡೆಯಲಿವೆ ಎಂದು ವಿವರಿಸಿದರು. 

ಮೇಳದ ಅನಾವರಣ ಕಾರ್ಯಕ್ರಮದಲ್ಲಿ ರಾಜ್ಯ ಸಾವಯವ ಕೃಷಿ ಮಿಷನ್‌ ಅಧ್ಯಕ್ಷ ಬಿ. ಸೋಮಶೇಖರ್‌, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಮಹೇಶ್ವರರಾವ್‌, ಜಲಾನಯನ ಇಲಾಖೆ ಆಯುಕ್ತ ರಾಜೀವ್‌ ರಂಜನ್‌, ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್‌, ತೋಟಗಾರಿಕೆ ಇಲಾಖೆ ಆಯುಕ್ತ ಪಿ.ಸಿ. ರೇ ಉಪಸ್ಥಿತರಿದ್ದರು. 

ಬೆಂಗಳೂರು ಸಾವಯವ ಹಬ್‌!
ಕೃಷಿ ಆಯುಕ್ತ ಜಿ. ಸತೀಶ್‌ ಮಾತನಾಡಿ, ದೇಶದಲ್ಲೇ ಅತಿ ಹೆಚ್ಚು 125ಕ್ಕೂ ಅಧಿಕ ಸಾವಯವ ಮಳಿಗೆಗಳು ನಗರದಲ್ಲಿವೆ. ಬೆಂಗಳೂರು ಇತ್ತೀಚಿನ ದಿನಗಳಲ್ಲಿ “ಸಾವಯವ ವ್ಯಾಪಾರ ಕೇಂದ್ರ’ವಾಗಿ ಬೆಳೆಯುತ್ತಿದೆ. ಮೈಸೂರು ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಮತ್ತಷ್ಟು ಉತ್ತೇಜನ ನೀಡಲು ಈ ಮೇಳ ವೇದಿಕೆಯಾಗಲಿದೆ ಎಂದರು. ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕೇಂದ್ರ ಕೃಷಿ ಸಚಿವ ರಾಧಮೋಹನ್‌ ಸಿಂಗ್‌ ಭಾಗವಹಿಸಲಿದ್ದಾರೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next