Advertisement

ಸಾಲಿಗ್ರಾಮದಲ್ಲಿ ಸದ್ದಿಲ್ಲದೆ ನಡೆಯುವ ಸಾವಯವ ತರಕಾರಿ ಸಂತೆ

04:49 PM May 07, 2019 | sudhir |

ಕೋಟ: ಕೃಷಿ ಸಂಬಂಧಿತ ಇಲಾಖೆಗಳು ನಗರ ಪ್ರದೇಶಗಳಲ್ಲಿ ಸಾವಯವ ಸಂತೆ ಅನುಷ್ಠಾನಕ್ಕೆ ತರಲು ಸಾಕಷ್ಟು ಶ್ರಮಿಸುತ್ತದೆ. ಆದರೆ ಸಾಲಿಗ್ರಾಮದ ರಥಬೀದಿಯಲ್ಲಿ ಯಾವುದೇ ಪ್ರಚಾರ, ಖರ್ಚುಗಳಿಲ್ಲದೆ ಹಲವಾರು ದಶಕಗಳಿಂದ ಪ್ರತಿ ಶನಿವಾರ ಸಾವಯವ ತರಕಾರಿ ಸಂತೆ ನಡೆಯುತ್ತಾ ಬಂದಿದೆ. ಕೃಷಿಕರು ತಮ್ಮ ತೋಟದಲ್ಲಿ ತಾವೇ ಬೆಳೆದ ತರಕಾರಿಗಳನ್ನು ನೇರವಾಗಿ ಈ ಮಾರುಕಟ್ಟೆಗೆ ತಂದು ಮಾರಾಟ ನಡೆಸುತ್ತಾರೆ. ಇಲ್ಲಿ ಮಧ್ಯವರ್ತಿಗಳು,ದಲ್ಲಾಳಿಗಳ ಹಸ್ತಕ್ಷೇಪವಿಲ್ಲದೆ ರೈತರು ನೇರ ಲಾಭಗಳಿಸುತ್ತಾರೆ.

Advertisement

ಸಾವಯವ ತರಕಾರಿಗಳು
ಪಾರಂಪಳ್ಳಿ,ಕೋಡಿ, ಸಾಲಿಗ್ರಾಮ, ಮಣೂರು, ಕೋಟ ಸೇರಿದಂತೆ ದೂರದ ಕೊಕ್ಕರ್ಣೆ ಆಸುಪಾಸಿನ ತನಕದ ಹತ್ತಾರು ರೈತರು ತಮ್ಮ ತೋಟದಲ್ಲಿ ಸಾವಯವ ಗೊಬ್ಬರಗಳನ್ನು ಹಾಕಿ ಬೆಳೆಸಿದ ಬಸಳೆ, ಹರಿವೆ, ಹೀರೆ, ನುಗ್ಗೆ, ಬೆಂಡೆಕಾಯಿ, ಗೆಣಸು ಮುಂತಾದ ತರಕಾರಿ ಹಾಗೂ ಹಣ್ಣು ಹಂಪಲುಗಳನ್ನು ಕೊಯ್ದು ಶನಿವಾರ ಬೆಳಗ್ಗೆ ಬೇಗನೆ ಇಲ್ಲಿನ ಆಂಜನೇಯ ದೇವಸ್ಥಾನದ ಎದುರಿನ ರಥಬೀದಿಗೆ ತಂದಿಟ್ಟುಕೊಂಡು ಮಾರಾಟ ಆರಂಭಿಸುತ್ತಾರೆ. ಅಂದು ದೇಗುಲಕ್ಕೆ ಆಗಮಿಸುವ ಸಾವಿರಾರು ಮಂದಿ ಇಲ್ಲಿ ತರಕಾರಿ ಖರೀದಿಸುತ್ತಾರೆ. ಹೀಗೆ ಸಂಜೆಯ ತನಕ ಸಾವಿರಾರು ರೂ ವಹಿವಾಟು ನಡೆಯುತ್ತದೆ.

ನೇರ ಮಾರುಕಟ್ಟೆ ವ್ಯವಸ್ಥೆ
ಮಾರುಕಟ್ಟೆಯಲ್ಲಿನ ತರಕಾರಿ ಧಾರಣೆಯನ್ನು ಗಮನದಲ್ಲಿಟ್ಟುಕೊಂಡು ರೈತರು ತಾವು ಬೆಳೆದ ತರಕಾರಿಗಳಿಗೆ ತಾವೇ ದರ ನಿಗದಿಪಡಿಸುತ್ತಾರೆ. ವ್ಯಾಪಾರಿಗಳ ಜತೆ ಪರಸ್ಪರ ಸಮನ್ವಯದಿಂದ ಚರ್ಚಿಸಿ ವ್ಯವಹಾರ ಮಾಡುತ್ತಾರೆ. ನೇರವಾಗಿ ಗ್ರಾಹಕರಿಗೆ ಸಿಗುವುದರಿಂದ ಬೆಲೆ ಕಡಿಮೆ ಇರುತ್ತದೆ ಹಾಗೂ ಮಧ್ಯವರ್ತಿಗಳು, ದಲ್ಲಾಳಿಗಳ ಹಾವಳಿ ಇಲ್ಲದ ಮುಕ್ತ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದೆ ಆದಾಗ ನೇರವಾಗಿ ಇಲ್ಲಿಗೆ ತಂದು ಮಾರಾಟ ಮಾಡುವ ಕ್ರಮವಿದೆ.

ಹೈಬ್ರಿಡ್‌ ತರಕಾರಿಗೆ ಪೈಪೋಟಿ
ಇದೀಗ ಎಲ್ಲ ಕಡೆಗಳಲ್ಲೂ ಹೈಬ್ರಿಡ್‌ ತರಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತದೆ. ಇಲ್ಲಿಯೂ ಕೂಡ ಹಲವು ಮಂದಿ ಹೈಬ್ರಿಡ್‌ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಾರೆ. ಆದರೆ ಸಾವಯವ ತರಕಾರಿಗಳಿಗೆ ಹೆಚ್ಚು ಬೇಡಿಕೆ ಇದ್ದು ಬೇಗನೆ ವ್ಯಾಪಾರವಾಗುತ್ತದೆ.

ತರಕಾರಿ ಬೆಳೆಯುವವರು ಕಡಿಮೆಯಾದ್ದರಿಂದ ಹಿನ್ನಡೆ
ಹಿಂದೆ 25ರಿಂದ 40ಮಂದಿ ಇಲ್ಲಿ ವ್ಯಾಪಾರ ನಡೆಸುತ್ತಿದ್ದರು. ಆದರೆ ಇದೀಗ ತರಕಾರಿ ಬೆಳೆಯುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ವ್ಯಾಪಾರ ಮಾಡುವವರ ಸಂಖ್ಯೆ ಕೂಡ ಸ್ವಲ್ಪ ಮಟ್ಟಿಗೆ ಕ್ಷೀಣಿಸಿದೆ.

Advertisement

ಸೌಕರ್ಯ ನೀಡಿದರೆ ಅಭಿವೃದ್ಧಿ ಸಾಧ್ಯ
ಈ ಪಾರಂಪರಿಕ ಸಾವಯವ ಸಂತೆಗೆ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಒಂದಷ್ಟು ಮೂಲ ಸೌಕರ್ಯಗಳನ್ನು ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಕರ್ಷಿಸುವಂತೆ ವ್ಯವಸ್ಥೆ ಮಾಡಬೇಕು. ಇದರಿಂದ ತೋಟಗಾರಿಕೆಗೆ ಸ್ವಲ್ಪ ಅನುಕೂಲವಾಗಲಿದೆ ಮತ್ತು ಪಾರಂಪರಿಕ ಸೊಗಡು ಉಳಿಯಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಸಾವಯವ ತರಕಾರಿ ಸಂತೆಯ ವಿಶೇಷತೆ
– ರೈತರು ಬೆಳೆದ ತರಕಾರಿಗಳ ನೇರ ಮಾರಾಟ
– ರೈತರಿಂದಲೇ ದರ ನಿಗದಿ
– ಹೈಬ್ರಿàಡ್‌ ತರಕಾರಿಗಳಿಗೆ ಪೈಪೋಟಿ ನೀಡುವ ಹಳ್ಳಿಯ ಹೀರೆ, ಬಸಳೆೆ
– ಮಧ್ಯವರ್ತಿ ಕಾಟವಿಲ್ಲ; ದಲ್ಲಾಳಿಗಳ ಹಾವಳಿ ಇಲ್ಲ
– ಹೆಚ್ಚು ಲಾಭ ಗಳಿಕೆಗೆ ಅವಕಾಶ, ಹತ್ತಾರು ದಶಕಗಳಿಂದ ನಡೆದು ಬಂದ ವ್ಯವಹಾರ
– ಪ್ರತಿ ಶನಿವಾರ ರಥಬೀದಿಯಲ್ಲಿ ವ್ಯಾಪಾರ.

  • ರಾಜೇಶ್ ಗಾಣಿಗ ಅಚ್ಲ್ಯಾದಿ
Advertisement

Udayavani is now on Telegram. Click here to join our channel and stay updated with the latest news.

Next