Advertisement

ಸಾವಯವ ಕೃಷಿಯಲ್ಲಿದೆ ನೆಮ್ಮದಿ

12:31 PM Jul 26, 2017 | |

ಧಾರವಾಡ: ಸಾವಯವ ಕೃಷಿಯಿಂದ ರೈತರು ಮಾತ್ರವಲ್ಲ, ಪ್ರಕೃತಿ, ಪ್ರಾಣಿ-ಪಕ್ಷಿಗಳು ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ರೈತರು ಸಾವಯವ ಕೃಷಿಯತ್ತ ಇನ್ನಾದರೂ ಹೆಜ್ಜೆ ಹಾಕಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಸಲಹೆ ನೀಡಿದರು. 

Advertisement

ಇಲ್ಲಿನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆ, ಜಿಪಂ ಹಾಗೂ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಅಭಿಯಾನ ಮತ್ತು ಸಾವಯವ, ಸಿರಿಧಾನ್ಯ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇವಲ ಎರಡು ದಶಕದಲ್ಲಿ ಧಾರವಾಡ ಜಿಲ್ಲೆಯ ಕೃಷಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದು ಹೋಗಿವೆ.

ಇದೀಗ ಎಲ್ಲರೂ ಯಂತ್ರಾಧಾರಿತ ಕೃಷಿ ಮಾತ್ರ ಮಾಡುತ್ತಿದ್ದಾರೆ. ಅನವಶ್ಯಕ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳ ಬಳಕೆಯಿಂದ ಭೂಮಿ ಮಾತ್ರವಲ್ಲ ಆಹಾರವೇ ಕಲ್ಮಶವಾಗಿ ಆರೋಗ್ಯ ಸಮಸ್ಯೆಗಳು ಎಲ್ಲರನ್ನು ಬಾಧಿಸುತ್ತಿದೆ. ಹೀಗಾಗಿ ಮತ್ತೆ ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿಯೇ ಸಾವಯವ ಕೃಷಿ ಮಾಡುವ ಅಗತ್ಯವಿದೆ. 

ಪ್ರತಿಯೊಬ್ಬ ರೈತರು ಕೃಷಿಯೊಂದಿಗೆ ಹೈನುಗಾರಿಕೆ ಮಾಡಲೇಬೇಕು. ಅಂದಾಗ ಮಾತ್ರ ಬದುಕಲು ಸಾಧ್ಯ. ಕೇವಲ ವಾಣಿಜ್ಯ ಬೆಳೆಯ ಬೆನ್ನು ಹತ್ತಿದರೆ ಹಣ ಗಳಿಸಬಹುದು, ಆದರೆ ಆರೋಗ್ಯ-ನೆಮ್ಮದಿ ಸಾಧ್ಯವಿಲ್ಲ ಎಂದರು. 

ರೈತರಿಗೆ ಸಲಹೆಗಳು: ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರಿಗೆ ಸಚಿವ ವಿನಯ್‌ ಕೃಷಿ ಸಂಬಂಧಿ ಸಲಹೆಗಳನ್ನು ನೀಡಿದರು. ರೈತರು ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಕಲಿಯಬೇಕು. ಚಟಗಳಿಂದ ದೂರವಾಗಿ, ಗ್ರಾಮೀಣ ಬದುಕಿಗೆ ಹೊಂದುವಂತೆ ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಎಂತಹದೆ ಕಷ್ಟ ಬಂದರೂ ಸ್ವಾಭಿಮಾನಿಯಾಗಿ ಬದುಕಬೇಕು ಎಂದು ಹೇಳಿದರು. 

Advertisement

ಹಸುಕಟ್ಟಿ ಮಾತಾಡಿ: ರೈತರು ಕಾಲು ಮುರಿದ ಎತ್ತು, ಎಮ್ಮೆ, ದನಗಳನ್ನು ಮಾರಾಟ ಮಾಡುವುದರಲ್ಲಿ ತಪ್ಪೇನು ಇಲ್ಲ. ಕೆಲವರು ಬರೀ ಗೋ ಸಂರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ್ಯಾರೂ ಮನೆಯಲ್ಲಿ ಆಕಳು ಸಾಕುವುದಿಲ್ಲ. ಈ ಕುರಿತು ನಾನು ಅವರಿಗೆ ಸವಾಲು ಹಾಕುತ್ತೇನೆ. ಗೋರಕ್ಷಣೆ ಬಗ್ಗೆ ಮಾತನಾಡುವವರ ಮನೆಯಲ್ಲಿ ಇಂದಿಗೂ ಒಂದೇ ಒಂದು ಗೋವು ಸಾಕಿಲ್ಲ.

ಅವರು ಮಾತಾಡೋದಾದ್ರೆ ಮೊದಲು ನಾಲ್ಕು ಗೋವು ಸಾಕಲಿ ಎಂದು ವಿನಯ್‌ ಸವಾಲು ಹಾಕಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ. ರುದ್ರೇಶಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ರೈತರು ಬರೀ ಮಳೆಯನ್ನೆ ನಂಬಿಕೊಂಡು ಕೃಷಿ ಮಾಡುತ್ತಿದ್ದಾರೆ.

ಆದರೆ, ಕಡಿಮೆ ಮಳೆಯಾದರೂ ಉತ್ತಮ ಫಸಲು ಬರುವ ಸಿರಿಧಾನ್ಯ ಕೃಷಿಯತ್ತ ಹೆಚ್ಚಿನ ಗಮನ ಹರಿಸಬೇಕು. ಅದನ್ನು ಉತ್ತೇಜಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಜಿಪಂ ಸದಸ್ಯ ಚೆನ್ನಬಸಪ್ಪ ಮಟ್ಟಿ, ಕಲ್ಲಪ್ಪ ಪುಡಕಲಕಟ್ಟಿ, ಬಸಪ್ಪ ಮಾದರ, ನಿಂಗಪ್ಪ ಘಾಟೀನ ಸೇರಿದಂತೆ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next