ಬನ್ನೂರು: ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಸಾವಯವ ಬೆಲ್ಲವನ್ನೂ ತಯಾರು ಮಾಡಿ ಅದನ್ನು ರಾಜ್ಯದ ಮೂಲೆ, ಮೂಲೆಗೂ ತಲುಪಿಸುವ ಮಹತ್ವದ ಯೋಜನೆ ಹಮ್ಮಿಕೊಂಡಿರುವುದಾಗಿ ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ತಿಳಿಸಿದರು.
ಪಟ್ಟಣದ ಸಮೀಫದ ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈಗ, ತಯಾರಾಗುತ್ತಿರುವ ಬೆಲ್ಲ ವಿಷಕಾರಕ ಎಂಬ ಅಂಶವನ್ನು ವಿಜಾnನ ದೃಢಪಡಿಸಿದೆ.
ನಾವು ತಿನ್ನುವ ಆಹಾರ ಪದಾರ್ಥಗಳು ವಿಷವಾಗುತ್ತ ಸಾಗಿದರೆ ಮನುಷ್ಯನ ಸಂತತಿಯೇ ವಿನಾಶ ಹೊಂದುವ ಲಕ್ಷಣಗಳಿವೆ. ಸಕ್ಕರೆಯಿಂದ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಆಗುತ್ತಿದೆ. ಇದನ್ನು ಮನಗಂಡು ಗ್ರಾಮದ ಜನರಿಗೆ ಉದ್ಯೋಗ ಒದಗಿಸುವ ದೃಷ್ಟಿಯಿಂದ ಹಾಗೂ ರೈತರು ಬೆಳೆಯುವ ಕಬ್ಬಿಗೆ ಸೂಕ್ತವಾದ ಬೆಲೆ ಒದಗಿಸಿಕೊಡುವ ಉದ್ದೇಶದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸಾವಯವ ಬೆಲ್ಲ ತಯಾರಿಸುವ ಯೋಜನೆ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮ ಹಾದಿಯಲ್ಲಿ ಸಾಗಿದೆ. ಇದನ್ನು ಮತ್ತಷ್ಟು ಅಭಿವೃದ್ಧಿ ಮಾಡುವ ಮಹಾದಾಸೆ ತಮಗೆ ಇದ್ದು, ಮುಂದಿನ ದಿನಗಳಲ್ಲಿ ಮಹದೇವ ಪ್ರಸಾದರ ಖಾಲಿ ಸಭಾಂಗಣವನ್ನು ಉಪಯೋಗಿಸಿಕೊಂಡು ಗ್ರಾಮದ ಜನರಿಗೆ ಉದ್ಯೋಗ ಕಲ್ಪಿಸಿಕೊಡಲು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಿಇಒ ಕ್ಯಾತೇಗೌಡ, ಆಯವ್ಯಯವನ್ನು ಮಂಡಿಸಿ ಸಂಘದ ಸದಸ್ಯರ ಒಪ್ಪಿಗೆ ಪಡೆದುಕೊಂಡರು. ಮುಂದಿನ ಸಾಲಿನ ಆಯವ್ಯಯದ ಯೋಜನೆಯನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವೈ.ಎಂ.ಚಂದ್ರು, ನಿರ್ದೇಶಕರಾದ ವೈ.ಕೆ. ಬೋರೇಗೌಡ, ವೈ.ಜಿ.ಮಹೇಂದ್ರ, ವೈ.ಎಂ.ಮಲ್ಲೇಶ್, ಬಿ.ಎಂ. ಶಿವಕುಮಾರ್, ಚೆನ್ನಶೆಟ್ಟಿ, ಲಕ್ಷ್ಮಮ್ಮ ಸಿದ್ದೇಗೌಡ, ಮಂಗಳಮ್ಮ, ಸೋಮಶೇಖರ್, ಎನ್. ಆರ್.ರಂಗನಾಥ್, ಪುಟ್ಟರಾಜು, ನಂಜುಂಡೇಗೌಡ, ಸಿದ್ದೇಗೌಡ, ವೈ.ಜಿ.ಮಹದೇವು, ವೈ.ಕೆ.ಸಿದ್ದಯ್ಯ, ಲೋಕೇಶ್, ವೈ.ಎನ್.ಮಹದೇವು, ವೈ.ಎನ್.ಕೃಷ್ಣಪ್ಪ, ವೈ.ಕೆ.ಪ್ರಸನ್ನ, ಕರಿಪುಟ್ಟಶೆಟ್ಟಿ ಮತ್ತಿತರರಿದ್ದರು.
ನಬಾರ್ಡ್ ಜೊತೆಯಲ್ಲಿ ಈಗಾಗಲೇ ಮಾತುಕತೆ ನಡೆಸಿರುವಂತೆ 100 ಮಂದಿ ಫಲಾನುಭವಿಗಳಿಗೆ ರಾಸುಗಳನ್ನು ಕೊಳ್ಳಲು ಸಬ್ಸಿಡಿಯೊಂದಿಗೆ ಸಾಲ ನೀಡುವ ಯೋಜನೆ ಹಮ್ಮಿಕೊಂಡಿದ್ದು, ಗ್ರಾಮಸ್ಥರು ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು.
-ವೈ.ಎನ್.ಶಂಕರೇಗೌಡ, ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ