Advertisement
ಗ್ರೀನ್ ಕಾರಿಡಾರ್ ಅಪರಾಹ್ನ 3.30ಕ್ಕೆ ಮಣಿಪಾಲದಿಂದ ಆ್ಯಂಬುಲೆನ್ಸ್‌ನಲ್ಲಿ ಅಂಗಾಂಗಗಳನ್ನು ಕೊಂಡೊಯ್ಯಲಾಯಿತು. ಈ ಸಂದರ್ಭ ಪೊಲೀಸರು ರಸ್ತೆಯುದ್ದಕ್ಕೂ ಇತರ ವಾಹನಗಳ ಓಡಾಟವನ್ನು ನಿರ್ಬಂಧಿಸಿ ‘ಗ್ರೀನ್ ಕಾರಿಡಾರ್’ ವ್ಯವಸ್ಥೆಗೊಳಿಸಿದ್ದರು. ಬೆಂಗಳೂರಿಗೆ ಹೋಗಬೇಕಾದ ಹೃದಯದ ಕವಾಟಗಳನ್ನು ಒಂದು ಆ್ಯಂಬುಲೆನ್ಸ್‌ನಲ್ಲಿಯೂ ಮಂಗಳೂರು ಕೆಎಂಸಿಗೆ ಕೊಂಡೊಯ್ಯಬೇಕಾಗಿದ್ದ ಕಿಡ್ನಿಯನ್ನು ಇನ್ನೊಂದು ಆ್ಯಂಬುಲೆನ್ಸ್‌ನಲ್ಲಿಯೂ ಸಾಗಿಸಲಾಯಿತು.
ನಿರ್ಮಲಾ ಭಟ್ ಅವರು ಜೂ. 22ರಂದು ರಾತ್ರಿ 7.30ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದು ಗಾಯಗೊಂಡಿದ್ದರು. ಅವರನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ಆದರೆ ಜೂ.25ರಂದು ಮಧ್ಯಾಹ್ನ 12.30ಕ್ಕೆ ಅವರ ಮಿದುಳು ನಿಷ್ಕ್ರಿಯವಾಗಿರುವುದನ್ನು ವೈದ್ಯರ ತಂಡ ಘೋಷಿಸಿತು. ಅವರ ಪತಿ ವಾಸುದೇವ ಭಟ್ ಹಾಗೂ ಕುಟುಂಬದ ಸದಸ್ಯರು ಅಂಗಾಂಗ ದಾನಕ್ಕೆ ಇಚ್ಛೆ ವ್ಯಕ್ತಪಡಿಸಿದರು. ಅದರಂತೆ ಟ್ರಾನ್ಸ್‌ಪ್ಲಾಂಟ್ ಅಥಾರಿಟಿಯವರ ಉಪಸ್ಥಿತಿಯಲ್ಲಿ ಅಂಗಾಂಗ ದಾನಕ್ಕೆ ವ್ಯವಸ್ಥೆ ಮಾಡಲಾಯಿತು. ನಮಿಸಿ ಬೀಳ್ಕೊಟ್ಟ ಮನೆಮಂದಿ
ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆದು ನಿಂತಿದ್ದ ಪತಿ ವಾಸುದೇವ ಭಟ್, ಪುತ್ರ ಅಶ್ವಿನ್ ಭಟ್ ಹಾಗೂ ಮನೆಮಂದಿ ಅಂಗಾಂಗಗಳನ್ನು ಆ್ಯಂಬುಲೆನ್ಸ್‌ನಲ್ಲಿ ಒಯ್ಯುವಾಗ ಆ್ಯಂಬುಲೆನ್ಸ್ ಸನಿಹಕ್ಕೆ ಬಂದು ನಮಿಸಿ ಬೀಳ್ಕೊಟ್ಟರು. ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು, ವೈದ್ಯರು ಸ್ಥಳದಲ್ಲಿದ್ದರು.
Related Articles
ಹೃದಯದ ಕವಾಟಗಳನ್ನು ಸಾಗಿಸುವುದಕ್ಕಾಗಿ 3 ಗಂಟೆಯ ಸುಮಾರಿಗೆ ಆದಿ ಉಡುಪಿ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್ ಬಂದಿತ್ತು. ಆದರೆ ಮಳೆಯ ಕಾರಣ ಹೆಲಿಕಾಪ್ಟರ್ ಹಾರಾಟ ಅಸಾಧ್ಯ ಎಂಬ ಮಾಹಿತಿ ನೀಡಲಾಯಿತು. ಕೆಲವು ಸಮಯದ ಬಳಿಕ ಹೆಲಿಕಾಪ್ಟರ್ ವಾಪಸಾಯಿತು.
Advertisement
ಏಳು ಮಂದಿಗೆ ಜೀವದಾನ ಅಂಗಾಂಗಗಳನ್ನು ನೀಡಿರುವುದರಿಂದ 7 ಮಂದಿಯ ಜೀವ ಉಳಿಸಿದಂತಾಗಿದೆ. ಕಳೆದ 15 ದಿನಗಳ ಹಿಂದೆ ಕೂಡ ಇದೇ ರೀತಿ ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಅಂಗಾಂಗ ರವಾನಿಸಲಾಗಿತ್ತು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಹೇಳಿದ್ದಾರೆ. ಅಮ್ಮ ದೇಹದಾನಕ್ಕೆ ಅಂದೇ ನಿರ್ಧರಿಸಿದ್ದಳು’
ಅಮ್ಮ ತನ್ನ ದೇಹದಾನಕ್ಕೆ ಅಂದೇ ನಿರ್ಧರಿಸಿದ್ದಳು. ಅದಕ್ಕೆ ಅರ್ಜಿಫಾರಂಗಳನ್ನು ಕೂಡ ಸಿದ್ಧಪಡಿಸಿದ್ದಳು. ಈ ಬಗ್ಗೆ ಒಮ್ಮೆ ನನ್ನ ಬಳಿ ಹೇಳಿದ್ದಳು ಕೂಡ. ಆದರೆ ಇಷ್ಟು ಬೇಗ ನಮ್ಮನ್ನು ಅಗಲುತ್ತಾಳೆ ಎಂದು ಗೊತ್ತಿರಲಿಲ್ಲ ಎನ್ನುತ್ತಿದ್ದಂತೆಯೇ ಪುತ್ರ ಅಶ್ವಿನ್ ಅವರ ದುಃಖದ ಕಟ್ಟೆಯೊಡೆಯಿತು. ವೈದ್ಯರು ತಾಯಿಯ ದೇಹದ ಅಂಗಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯುವ ಪ್ರಕ್ರಿಯೆಯಲ್ಲಿ ತೊಡಗಿದ್ದಾಗ ಹೊರಗಡೆ ದುಃಖವನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಅಶ್ವಿನ್ ‘ತಾಯಿಯಿಂದ ಹಲವರಿಗೆ ಜೀವ ಸಿಗುತ್ತಿದೆ…’ ಎಂದು ಮೌನವಾದರು. ಅಶ್ವಿನ್ ಭಟ್ ಇತ್ತೀಚೆಗಷ್ಟೇ ಉದ್ಯೋಗಕ್ಕೆ ಸೇರಿದ್ದಾರೆ. ತಂಗಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. – ಒಂದು ಹೃದಯದ ಕವಾಟ ಬೆಂಗಳೂರು ನಾರಾಯಣ ಹೃದಯಾಲಯದ ಮಗುವಿಗೆ, ಇನ್ನೊಂದು ಅದೇ ಆಸ್ಪತ್ರೆಯ ಬೇರೊಬ್ಬ ವ್ಯಕ್ತಿಗೆ. – ಒಂದು ಕಿಡ್ನಿ ಮಂಗಳೂರು ಕೆಎಂಸಿ ರೋಗಿಗೆ, ಇನ್ನೊಂದು ಕಿಡ್ನಿ ಮಣಿಪಾಲ ಕೆಎಂಸಿ ರೋಗಿಗೆ. – ಕಣ್ಣುಗುಡ್ಡೆಗಳು (ಕಾರ್ನಿಯಾ) ಮಣಿಪಾಲ ಕೆಎಂಸಿಯ ಇಬ್ಬರು ರೋಗಿಗಳಿಗೆ – ಒಂದು ಲಿವರ್ ಬೆಂಗಳೂರು ಬಿಜಿಎಸ್ ಆಸ್ಪತ್ರೆ ರೋಗಿಗೆ.