ಮಣಿಪಾಲ: ರಸ್ತೆ ಅಪಘಾತಗೊಂಡು ಮೆದುಳು ನಿಷ್ಕ್ರಿಯಗೊಂಡ ಅನಂತರ ಅಂಗದಾನದ ಮೂಲಕ ಎಂಐಟಿ ವಿದ್ಯಾರ್ಥಿ ಆಂಧ್ರಪ್ರದೇಶದ ವೆಮುಲಾ ಸುದರ್ಶನ್ ಚೌಧರಿ(19) ಸಾರ್ಥಕತೆ ಮೆರೆದಿದ್ದಾರೆ.
ಇವರಿಗೆ ಮಣಿಪಾಲ – ಉಡುಪಿ ರಸ್ತೆಯಲ್ಲಿ ಅ.9ರಂದು ರಾತ್ರಿ 8.40ಕ್ಕೆ ರಸ್ತೆ ಅಪಘಾತ ಸಂಭವಿಸಿತ್ತು. ತೀವ್ರ ಗಾಯಗೊಂಡ ಇವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯ ವೈದ್ಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಈ ವೇಳೆ ಅವರ ತಂದೆ ಮತ್ತು ಅವರ ಕುಟುಂಬ ಸದಸ್ಯರು ಸೇರಿ ವೆಮುಲಾ ಸುದರ್ಶನ್ ಅವರ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆ ವ್ಯಕ್ತಪಡಿಸಿದರು. ಮಾನವ ಅಂಗಾಂಗ ಕಸಿ ಕಾಯ್ದೆ 1994 ರ ಅನುಸಾರ ವೆಮುಲಾ ಸುದರ್ಶನ್ ಚೌಧರಿ ಅವರನ್ನು 6 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದರು.
ನಿಯಮಾನುಸಾರ ನೋಂದಾಯಿತ ರೋಗಿಗಳಿಗೆ, ಯಕೃತ್ತು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ, ಶ್ವಾಸಕೋಶ ಬೆಂಗಳೂರಿನ ಆಸ್ಪತ್ರೆಗೆ, ಒಂದು ಮೂತ್ರಪಿಂಡವನ್ನು ಎಜೆ ಆಸ್ಪತ್ರೆ ಮಂಗಳೂರಿಗೆ ಕಳುಹಿಸಿಕೊಡಲಾಯಿತು. ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳು, ಒಂದು ಮೂತ್ರಪಿಂಡ ಮತ್ತು ಚರ್ಮವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರೋಗಿಗಳಿಗೆ ಬಳಸಲಾಯಿತು.
ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದ.ಕ.ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಮತ್ತು ಬೆಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಶ್ರೇಷ್ಠ ಕೆಲಸ
ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಠವಾದ ಕೆಲಸವಾಗಿದ್ದು, ಅತ್ಯಂತ ಮಹತ್ವ ಪಡೆದಿದೆ. ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಲ್ಲಿ ದಿನದಿಂದ ದಿನಕ್ಕೆ ಜಾಗೃತಿ ಹೆಚ್ಚಾಗುತ್ತಿರುವುದು ಒಳ್ಳೆಯ ಸಂಗತಿಯಾಗಿದೆ.
-ಡಾ| ಅವಿನಾಶ್ ಶೆಟ್ಟಿ ,
ವೈದ್ಯಕೀಯ ಅಧೀಕ್ಷಕರು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ
ಪುಣ್ಯದ ಕೆಲಸ
ಅಂಗದಾನ ಒಂದು ಪುಣ್ಯದ ಕೆಲಸ. ಸುದರ್ಶನ್ ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.
-ವೆಮೂಲ ಅಲೇಖಾ ಪ್ರಸಾದ್,
ಮೃತನ ತಂದೆ