ಮೂಡಬಿದಿರೆ: ಶ್ರೀ ಮಹಾವೀರ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಮತ್ತು ಲಯನ್ಸ್ ಕ್ಲಬ್, ಮಂಗಳೂರು ನೇತ್ರಾವತಿ ಇವುಗಳ ಜಂಟಿ ಆಶ್ರಯದಲ್ಲಿ ದೇಹದ ಅಂಗಾಂಗ ದಾನದ ಮಹತ್ವ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ಶ್ರೀ ಮಹಾವೀರ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿ, ಎ.ಜೆ. ಶೆಟ್ಟಿ ಆಸ್ಪತ್ರೆಯ ನಿರ್ದೇಶಕ ಡಾ| ಪ್ರಶಾಂತ್ ಮಾರ್ಲ ಮಾತನಾಡಿ, ಅಂಗಾಂಗ ದಾನಿಗಳ ಕೊರತೆಯಿಂದಾಗಿ ಭಾರತದಲ್ಲಿ ಪ್ರತಿ ವರ್ಷವೂ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದು, ಅಂಗಾಂಗ ದಾನದ ಮಹತ್ತ್ವದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಅಪಘಾತ ಸಂದರ್ಭ ವ್ಯಕ್ತಿಯ ಮಿದುಳು ನಿಷ್ಕ್ರಿಯವಾದಲ್ಲಿ, ವ್ಯಕ್ತಿಯ ಅಂಗಾಂಗಳನ್ನು ಅವರ ಸಂಬಂಧಿಕರ ಒಪ್ಪಿಗೆ ಪಡೆದು, ನಿಯಮಗಳ ಪ್ರಕಾರ, ಅಂಗಾಂಗ ವೈಫಲ್ಯದ ವ್ಯಕ್ತಿಗಳಿಗೆ ದಾನ ಮಾಡಬಹುದು ಎಂದು ತಿಳಿಸಿದರು. ಕೆಡಾವರಿಕ್ ಅಂಗಾಂಗ ದಾನದ ಬಗ್ಗೆ ಸವಿವರ ಮಾಹಿತಿ ನೀಡಿದ ಅವರು, ಈ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದವನ್ನು ನಡೆಸಿದರು.
ಆರೋಗ್ಯ ಕಾಪಾಡಿಕೊಳ್ಳಿ
ಆರೋಗ್ಯ ಅರಿವು ಬಗ್ಗೆ ಸಂಪನ್ಮೂಲ ವ್ಯಕ್ತಿ ಡಾ| ಶಿಲ್ಪಾ ಮೂಲ್ಕಿ ಮಾತನಾಡಿ, ಜಂಕ್ ಫುಡ್ ಕೈಬಿಡಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿರಿ. ಒಂದೇ ಸಲ ಬಹಳ ತಿನ್ನುವ ಬದಲು ಆಗಾಗ ಸ್ವಲ್ಪ ಸ್ವಲ್ಪ ತಿನ್ನುವುದು ಉತ್ತಮ. ವ್ಯಾಯಾಮ, ವಾಕಿಂಗ್ ಮಾಡಿರಿ, ಈ ಜೀವನ ಶೈಲಿಯಿಂದ ದೈಹಿಕ, ಮಾನಸಿಕ ಆರೋಗ್ಯವೂ ಉತ್ತಮವಾಗುತ್ತದೆ. ಓದಿನಲ್ಲಿ ಏಕಾಗ್ರತೆಯೂ ಲಭಿಸುತ್ತದೆ ಎಂದರು.
ಮಹಾವೀರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ಚಂದ್ರಶೇಖರ ದೀಕ್ಷಿತ್ ಅಧ್ಯಕ್ಷತೆ ವಹಿಸಿದ್ದರು. ಮಹಾವೀರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ಧರಮೇಶ್ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ| ಹರೀಶ್, ರೆಡ್‌ಕ್ರಾಸ್ ಅಧಿಕಾರಿ ಡಾ| ಜಯಲಕ್ಷ್ಮೀ, ಲಯನ್ಸ್ ಸದಸ್ಯರಾದ ಮಂದಾಕಿನಿ ಉಪಾಧ್ಯಾಯ, ಗೀತಾ ಕಲ್ಯಾಣಪುರ ಮತ್ತು ವಿದ್ಯಾರ್ಥಿ ನಾಯಕ ಅಶ್ವಿತ್ ಜೀವನ್ ರಾಡ್ರಿಗಸ್ ಉಪಸ್ಥಿತರಿದ್ದರು. ನೇತ್ರಾವತಿ ಮಂಗಳೂರು ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಸಬಿತಾ ಶೆಟ್ಟಿ ಪ್ರಾಸ್ತಾವನೆಗೈದರು. ಸ್ನೋವಾ ಸ್ವಾಗತಿಸಿ, ಶೈನಿ ವಂದಿಸಿದರು. ರೆಡ್‌ಕ್ರಾಸ್ ಘಟಕದ ಕಾರ್ಯದರ್ಶಿ ಕೇಲ್ರೊಯ್ ಪೇಟ್ರಿಕ್ ಕಾರ್ಯಕ್ರಮ ನಿರೂಪಿಸಿದರು.