Advertisement

ಸೋಂಕು ಮೂಲ ಪತ್ತೆಗೆ ಆದೇಶ: ಶ್ರೀನಿವಾಸ ಪೂಜಾರಿ

01:07 AM May 07, 2020 | Sriram |

ಮಂಗಳೂರು: ಫಸ್ಟ್‌ ನ್ಯೂರೋ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್‌- 19 ಪ್ರಕರಣಗಳ ಮೂಲವನ್ನು ಪತ್ತೆಹಚ್ಚಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬುಧವಾರ ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ ಮೂರು ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಅವರು ತುರ್ತು ಸಭೆ ನಡೆಸಿದರು. ಆದರೆ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಸೋಂಕು ದೃಢಪಟ್ಟು ಅಲ್ಲಿನ ಸಂಪರ್ಕದಿಂದ ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ಜನರನ್ನು ಸೋಂಕು ಬಾಧಿಸಿದ ಬಳಿಕ ಬಹಳ ತಡವಾಗಿ ಜಿಲ್ಲಾ ಉಸ್ತುವಾರಿ ಸಚಿವರೇ ಜಿಲ್ಲಾಧಿಕಾರಿಯವರಿಗೆ ಈ ರೀತಿ ತನಿಖೆಗೆ ಆದೇಶ ನೀಡಿರುವುದು ಅಚ್ಚರಿಯ ಜತೆಗೆ ಹಲವು ರೀತಿಯ ಅನುಮಾನಗಳಿಗೂ ಎಡೆಮಾಡಿದೆ.

ಫಸ್ಟ್‌ ನ್ಯೂರೋ ಆಸ್ಪತ್ರೆಯ ಕೋವಿಡ್‌- 19 ಸೋಂಕಿನ ಮೂಲದ ಬಗ್ಗೆ ಸಮಗ್ರ ತನಿಖೆ ನಡೆಸಿ ಸರಕಾರಕ್ಕೆ ವರದಿ ನೀಡಬೇಕು. ಇದರಿಂದಾಗಿ ಕೋವಿಡ್‌- 19 ಸೋಂಕು ಜಿಲ್ಲೆಯಲ್ಲಿ ಎಲ್ಲಿಂದ ಆರಂಭವಾಯಿತು ಎಂಬ ಸಾರ್ವಜನಿಕ ಸಂಶಯ ನಿವಾರಣೆಯಾಗಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಿದರು.

ತನಿಖೆ ಪ್ರಗತಿಯಲ್ಲಿ
ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ ಮಾತನಾಡಿ, ಫಸ್ಟ್‌ ನ್ಯೂರೋ ಆಸ್ಪತ್ರೆಯ ವಿವಿಧ ರೋಗಿಗಳ ಸಂಪರ್ಕವನ್ನು ಈಗಾಗಲೇ ಪಡೆಯಲಾಗಿದೆ. ತನಿಖೆ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದರು.

ವೆನ್ಲಾಕ್‌  ಕೋವಿಡ್‌- 19 ಪ್ರಯೋಗಾಲಯದ ಬಗ್ಗೆ ಮಾಹಿತಿ ಒದಗಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷಾ ಪ್ರಕರಣಗಳು ಬರುತ್ತಿರುವ ಹಿನ್ನೆಲೆಯಲ್ಲಿ ವರದಿ ವಿಳಂಬವಾಗಿದೆ. ಯಾವುದೇ ಕಾರಣಕ್ಕೂ ಪ್ರಯೋಗಾಲಯದ ಕಾರ್ಯಾಚರಣೆ ಸ್ಥಗಿತವಾಗಿಲ್ಲ ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಚಿವ ಕೋಟ, ಕೋವಿಡ್‌-19 ನಿಯಂತ್ರಿಸಲು ಎಲ್ಲರೂ ಸಹಕಾರ ನೀಡಬೇಕು, ರಾಜಕೀಯಕ್ಕೆ ಇದನ್ನು ಬಳಸಬಾರದು ಎಂದು ವಿನಂತಿಸಿದರು.

ಉಚಿತ ಬಸ್‌: ಇಂದು ಕೊನೆಯ ದಿನ
ಜಿಲ್ಲೆಯಿಂದ ಇದುವರೆಗೆ 433 ಬಸ್‌ಗಳಲ್ಲಿ ಸುಮಾರು 11 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಬಾಗಲಕೋಟೆ ಸಹಿತ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಚಿತವಾಗಿ ಹೊರ ಜಿಲ್ಲೆಗೆ ಪ್ರಯಾಣಿಸಲು ಗುರುವಾರ (ಮೇ 7) ಕೊನೆಯ ದಿನವಾಗಿದ್ದು, ಎಲ್ಲ ವಲಸೆ ಕಾರ್ಮಿಕರನ್ನು ಮಂಗಳೂರು ಲಾಲ್‌ಬಾಗ್‌ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ ಹೊರ ಜಿಲ್ಲೆಗೆ ಪ್ರಯಾಣ ಮಾಡಲು ಅನುಕೂಲವಾಗುವಂತೆ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ದ.ಕ.ದ ಕಾರ್ಮಿಕರನ್ನು ಕರೆತರಲು ವ್ಯವಸ್ಥೆ
ದ.ಕ. ಜಿಲ್ಲೆಯ ಕೂಲಿ ಕಾರ್ಮಿಕರು ಕಾಸರಗೋಡಿನಲ್ಲಿ ಆತಂಕದಲ್ಲಿದ್ದಾರೆಂಬ ಎಂಬ ಬಗ್ಗೆ ಕೇರಳ ಸರಕಾರ, ಕಾಸರಗೋಡಿನ ಜಿಲ್ಲಾಧಿಕಾರಿ ಜತೆ ಮಾತನಾಡಿ,ಇಲ್ಲಿಗೆ ಕರೆಸಿಕೊಳ್ಳುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಮುಜರಾಯಿ ದೇವಸ್ಥಾನಗಳಲ್ಲಿ ದೈನಂದಿನ ಪೂಜೆಗಳು ಅರ್ಚಕರ ಸಮಕ್ಷಮದಲ್ಲಿ ಇಂದಿಗೂ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next