Advertisement

ಹೀಗೂ ಕೆಲಸ‌ಮಾಡಬಹುದು : ಸಭೆ‌ ಮುಗಿದ 4 ತಾಸಿನೊಳಗೆ ಆದೇಶ!

11:19 AM Feb 23, 2022 | Team Udayavani |

ಶಿರಸಿ: ಸ್ಪೀಕರ್, ಸಚಿವರ‌ ನೇತೃತ್ವದ ಸಭೆಯ ತೀರ್ಮಾನದ ಫಲವಾಗಿ‌ ಸಭೆ ನಡೆದ ಕೇವಲ 4 ತಾಸಿನಲ್ಲಿ ಗೊಂದಲ ಮಾಡಿದ ನಿಗಮವೇ ಪರಿಹಾರ ಸೂಚಿಸಿದ ಆದೇಶ ಜಾರಿಗೊಳಿಸಿದ ಘಟನೆ ನಡೆದಿದೆ.

Advertisement

ಸರಕಾರದಲ್ಲಿ ಹೀಗೂ ಆಗುತ್ತದೆ ಎಂಬುದಕ್ಕೆ ದೊಡ್ಡ ಉದಾಹರಣೆಯೂ ಸಿಕ್ಕಂತಾಗಿದೆ! ಮಂಗಳವಾರ‌ ನಡೆದ‌ ಸಭೆಯ ಬಳಿಕ ವಸತಿ‌ ನಿಗಮದ‌ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ಅವರು ತಕ್ಷಣ ಈ ತಿದ್ದುಪಡಿ ಆದೇಶ ಜಾರಿಗೆ ತಂದಿದ್ದಾರೆ.

ಏನಿದು?:

ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಬಡ ಕುಟುಂಬಗಳಿಗೆ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ರಾಜೀವಗಾಂಧಿ ವಸತಿ ನಿಗಮದ ವತಿಯಿಂದ ಹೊರಡಿಸಿದ್ದ ಆದೇಶದಲ್ಲಿ ಉಂಟಾಗುವ ಗೊಂದಲದ ಕುರಿತಂತೆ ಮಂಗಳವಾರ ವಸತಿ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ನಡೆಸಿದ ಸಭೆ ಫಲಪ್ರದವಾಗಿದೆ.

ರಾಜೀವಗಾಂಧಿ ವಸತಿ ನಿಗಮವು 2021ರ ಜು.28ರಂದು ಆದೇಶವೊಂದನ್ನು ಹೊರಡಿಸಿ, ವಸತಿ ಸೌಕರ್ಯ ಪಡೆಯಲು ಫಲಾನುಭವಿಗಳು ಸ್ವಂತ ನಿವೇಶನ ಹೊಂದಿದ್ದು, ಅದಕ್ಕೆ ಸಂಬಂಧಿಸಿದಂತೆ, ಪತ್ರ, ಕ್ರಯಪತ್ರ,ದಾನಪತ್ರ, ಉಡುಗೊರೆ ಪತ್ರ, ಖಾತಾ ಪತ್ರಗಳನ್ನು ಹೊಂದಿರಬೇಕು ಎಂದು ತಿಳಿಸಿತ್ತು. ಇದರಿಂದಾಗಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿ, ನಿವೇಶನ ಹಾಗೂ ವಸತಿರಹಿತ ಬಡಜನರು ಯೋಜನೆಯಿಂದ ವಂಚಿತರಾಗುವತಾಗಿತ್ತು.

Advertisement

ಸಭೆ‌ ಮಹತ್ವದ್ದಾಯ್ತು:

ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ವಸತಿ ಸಚಿವರ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್, ಹಾಗೂ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ  ರಾಜೀವಗಾಂಧಿ ವಸತಿ ನಿಗಮದ ವತಿಯಿಂದ ಹೊರಡಿಸಿರುವ ನೂತನ ಆದೇಶದಲ್ಲಿ ಉತ್ತರಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವಸತಿ ರಹಿತರಿಗೆ ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡುವುದಕ್ಕೆ ಉಲ್ಬಣಿಸಿರುವ ಸಮಸ್ಯೆ ಕುರಿತು ವಿಸ್ತೃತವಾಗಿ ವಿವರಿಸಿದ್ದರು.

ಅರಣ್ಯದಲ್ಲಿ ವಾಸವಾಗಿರುವ ಬಡ ಕುಟುಂಬಗಳಿಗೆ ಸೂರು ಕಲ್ಪಿಸುವುದಕ್ಕೆ ನೂತನ ಆದೇಶದಲ್ಲಿ ನಿಯಮಗಳನ್ನು ಸಡಿಲಿಕರಣಗೊಳಿಸುವಂತೆ ವಸತಿ ಸಚಿವರಿಗೆ ಮನವಿ ಮಾಡಿದ್ದರು.

4 ತಾಸೊಳಗೆ ಆದೇಶ!:

ಸಭೆ ನಡೆದ ಕೆಲ ಕ್ಷಣದಲ್ಲೇ ರಾಜೀವಗಾಂಧಿ ವಸತಿ ನಿಗಮದಿಂದ ಮರು ಆದೇಶ ಹೊರಡಿಸಲಾಗಿದೆ, ಈ ಹಿಂದಿನ ಆದೇಶದಲ್ಲಿ ತಿಳಿಸಿರುವಂತೆ ಹಲವಾರು ವರ್ಷಗಳಿಂದ ಅರಣ್ಯ ಜಾಗದಲ್ಲಿ ಕಚ್ಛಾ ಮನೆ, ಗುಡಿಸಲು ನಿರ್ಮಿಸಿ ವಾಸ್ತವ್ಯ ಹೊಂದಿರುವ, ಈಗಾಗಲೇ ಗ್ರಾಮ ಪಂಚಾಯತಿಯಿಂದ ಮನೆ ನಂಬರ್ ಹೊಂದಿದ್ದು, ಗ್ರಾಮ ಪಂಚಾಯತಿಗೆ ಮನೆ ತೆರಿಗೆ ಪಾವತಿಸುತ್ತಿರುವ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯವನ್ನು ಈಗಾಗಲೇ ಪಡೆದುಕೊಂಡಿರುವ ಫಲಾನುಭವಿಗಳಿಗೆ ವಸತಿ ಇಲಾಖೆಯಿಂದ ವಿವಿಧ ವಸತಿ ಯೋಜನೆಗಳಡಿ ಸಹಾಯಧನವನ್ನು ನೀಡಲು ಪರಿಗಣಿಸಬೇಕು ಎಂದು ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕ್ರಮಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಸವರಾಜು ಎಸ್. ಸೂಚಿಸಿದ್ದಾರೆ

ಆಹಾ…ಕೃತಜ್ಞತೆ!:

ರಾಜೀವಗಾಂಧಿ ವಸತಿ ನಿಗಮದ ವತಿಯಿಂದ ಹೊರಡಿಸಿದ್ದ ಆದೇಶದಿಂದಾಗಿ ಗೊಂದಲ ಹಾಗೂ ಸಮಸ್ಯೆ ಕೂಡ ಉದ್ಭವಿಸಿತ್ತು. ಎಲ್ಲರಿಗೂ ಸೂರು ಒದಗಿಸಬೇಕೆಂಬ ಆಶಯದಂತೆ ಸಚಿವರೊಂದಿಗೆ ಸಭೆ ನಡೆಸಿ, ನಿಗಮದಿಂದ ಮರು ಆದೇಶ ಹೊರಡಿಸಲಾಗಿದೆ.

ಇದರಿಂದಾಗಿ ವಸತಿ ರಹಿತ ಬಡಜನರಿಗೆ ಅನುಕೂಲವಾಗಲಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಆದೇಶದಿಂದ ಉಂಟಾಗಿದ್ದ ಗೊಂದಲ ನಿವಾರಣೆಗೆ ಸಹಕರಿಸಿದವರಿಗೆ ಸಚಿವ ಹೆಬ್ಬಾರ್ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next