Advertisement

ಮತಗಟ್ಟೆ ದುರಸ್ತಿಗೊಳಿಸಿ ವರದಿ ಸಲ್ಲಿಸಲು ಆದೇಶ

12:26 PM Feb 23, 2018 | Team Udayavani |

ಬೀದರ: ಎಲ್ಲ ಮತಗಟ್ಟೆಗಳನ್ನು ದುರಸ್ತಿಗೊಳಿಸಿ, ಅವುಗಳ ಭಾವಚಿತ್ರೊಂದಿಗೆ ಫೆ.27ರೊಳಗೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌.ಮಹಾದೇವ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

Advertisement

ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮತಗಟ್ಟೆಗಳ ಪರಿಶೀಲನೆ ಮತ್ತು ದುರಸ್ತಿ, ಮತಗಟ್ಟೆಗಳ ಡಿಜಿಟಲ್‌ ನಕ್ಷೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. 

ಮತಗಟ್ಟೆಗಳ ದುರಸ್ತಿಯು ಮಂದಗತಿಯಲ್ಲಿ ನಡೆಯುತ್ತಿದ್ದರ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಮತಗಟ್ಟೆ ದುರಸ್ತಿಯನ್ನು ವೇಗವಾಗಿ ನಡೆಸಬೇಕು. ಮತಗಟ್ಟೆಗಳ ಬಾಗಿಲು, ಕಿಡಕಿ, ವಿದ್ಯುತ್‌ ಸೌಕರ್ಯ, ಕುಡಿವ ನೀರಿನ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಬೇಕು. ಆದ್ಯತೆಯ ಮೇರೆಗೆ ಈ ಕೆಲಸವನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್‌ ರಾಜ್ಯ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ನಗರ ಪ್ರದೇಶದಲ್ಲಿರುವ ಮತಗಟ್ಟೆಗಳ ದುರಸ್ತಿ ಕೂಡ ಸರಿಯಾಗಿ ನಡೆಯಲು ನೋಡಿಕೊಳ್ಳಲು ಆಯುಕ್ತರು ಹಾಗೂ ಪುರಸಭೆ, ನಗರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಸೆಕ್ಟರ್‌ ಅಧಿಕಾರಿಗಳು ಮತಗಟ್ಟೆಗಳ ದುರಸ್ತಿ ಬಗ್ಗೆ ಪರಿಶೀಲಿಸಿ, ದುರಸ್ತಿಯಾದ ಬಗ್ಗೆ ಆಯಾ ತಹಶೀಲ್ದಾರ ಅವರಿಂದ ದೃಢೀಕರಿಸಿದ ಪ್ರತಿಯೊಂದಿಗೆ ಮಾ.2ರೊಳಗೆ ವರದಿ ಸಲ್ಲಿಸಬೇಕು. ಪ್ರತಿ ತಾಲೂಕಿಗೆ ಆರು ಹೋಬಳಿಯಿದ್ದು, ಹೋಬಳಿವಾರು ಪರಿಶೀಲನೆ ಮಾಡಲು ತಾಲೂಕುಮಟ್ಟದ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಅವರು ಪುನಃ ಪರಿಶೀಲನೆ ಮಾಡಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಮತದಾನ ದಿನಾಂಕ ನಿಗದಿಪಡಿಸಿದ ವಾರ ಮುಂಚಿತವಾಗಿ ಪ್ರತಿಯೊಂದು ಮತಗಟ್ಟೆಗೆ ಖುದ್ದಾಗಿ ಭೇಟಿ ನೀಡಿ, ಪರಿಶೀಲಿಸಿ ವರದಿ ನೀಡಬೇಕು ಎಂದು ಸಹಾಯಕ ಆಯುಕ್ತರು, ತಹಶೀಲ್ದಾರಗಳು ಮತ್ತು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.

Advertisement

ಚುನಾವಣಾಧಿಕಾರಿಗಳ ನಿರ್ದೇಶನದಂತೆ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿಯವರ ಅನುಮತಿಯಿಲ್ಲದೇ ದಿಧೀರ್ಘಾವಧಿ ವರೆಗೆ ರಜೆ ಹಾಗೂ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಯಾವುದೇ ಸಮಯದಲ್ಲಿ ಚುನಾವಣಾ ಕೆಲಸಕ್ಕಾಗಿ ನೇಮಕ ಮಾಡಲಾಗುವುದು. ಸಭೆಯನ್ನು ಕೂಡ ಕರೆಯಲಾಗುವುದು ಎಂದು ಇದೆ ವೇಳೆ ಅಧಿಕಾರಿಗಳಿಗೆ ತಿಳಿಸಲಾಯಿತು. ಎಲ್ಲ ಮತಗಟ್ಟೆ ನಕ್ಷೆಗಳ ಡಿಜಟಲೀಕರಣ ಕಾರ್ಯ ಪೂರ್ಣಗೊಂಡಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ತೋರಿಸಲಾಯಿತು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್‌.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಡಾ| ಡಿ.ಷಣ್ಮುಖ, ಸಹಾಯಕ ಆಯುಕ್ತರು, ಸೆಕ್ಟರ್‌ ಅಧಿಕಾರಿಗಳು, ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next