ಬೆಂಗಳೂರು: ತಡರಾತ್ರಿವರೆಗೆ ಹೋಟೆಲ್ ತೆರೆದಿದ್ದಕ್ಕೆ ಆಕ್ರೋಶಗೊಂಡ ಜೆ.ಸಿ.ನಗರ ಎಸಿಪಿ ಮಂಜುನಾಥ್ ಬಾಬು ಆರ್.ಟಿ.ನಗರದ ದಿನ್ನೂರಿನಲ್ಲಿರುವ ಶೆಟ್ಟಿ ಲಂಚ್ ಹೋಮ್ ಮಾಲೀಕರು ಮತ್ತು ಸಿಬ್ಬಂದಿ ಮೇಲೆ ಲಾಠಿ ಪ್ರಹಾರ ನಡೆಸಿದ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಡಿಸಿಪಿ ಚೇತನ್‌ಸಿಂಗ್ ರಾಥೋಡ್‌ಗೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಆದೇಶಿಸಿದ್ದಾರೆ.
ನ.9ರಂದು ಜೆ.ಸಿ.ನಗರದ ಉಪವಿಭಾಗದ ಎಸಿಪಿ ಮಂಜುನಾಥ್ ಬಾಬು ರಾತ್ರಿ ಪಾಳಿಯ ರೌಂಡ್ಸ್‌ನಲ್ಲಿ ಇದ್ದರು. ಈ ವೇಳೆ ದಿನ್ನೂರು ರಸ್ತೆಯಲ್ಲಿ ಶೆಟ್ಟಿ ಲಂಚ್ ಹೋಂ ಹೋಟೆಲ್ ಮಧ್ಯರಾತ್ರಿ 12 ಗಂಟೆಯಾಗಿದ್ದರೂ ಮುಚ್ಚಿರಲಿಲ್ಲ. ಇದಕ್ಕೆ ಅಸಮಾಧಾನಗೊಂಡ ಎಸಿಪಿ, ಹೋಟೆಲ್ ಪ್ರವೇಶಿಸಿ ಮಾಲೀಕನನ್ನು ಪ್ರಶ್ನಿಸಿ, ರಾಜೀವ ಶೆಟ್ಟಿ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಈ ದೃಶ್ಯಗಳು ಹೋಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ದೃಶ್ಯಗಳು ಮಾಧ್ಯಮಗಳಲ್ಲಿ ವೈರಲ್ ಆದ ಪರಿಣಾಮ ಘಟನೆ ಸಂಬಂಧ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತರು ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್ ಅವರಿಗೆ ಸೂಚಿಸಿದ್ದಾರೆ.
ಏನಿದು ಘಟನೆ?: ರಾಜೀವ್ ಶೆಟ್ಟಿ ಎಂಬುವರು ಶೆಟ್ಟಿ ಲಂಚ್ ಹೋಮ್’ ಎಂಬ ಹೋಟೆಲ್ ನಡೆಸುತ್ತಿದ್ದರು. ನಿತ್ಯ ರಾತ್ರಿ 12.30 ಗಂಟೆಯಾದರೂ ಹೋಟೆಲ್ ಮುಚ್ಚುತ್ತಿರಲಿಲ್ಲ. ನ.9 ರಂದು ಜೆ.ಸಿ.ನಗರ ಎಸಿಪಿ ಮಂಜುನಾಥ್ ಬಾಬು ಅವರು ರಾತ್ರಿ ಗಸ್ತಿನಲ್ಲಿದ್ದರು.
ಗಸ್ತಿನಲ್ಲಿದ್ದ ಪೇದೆ ಹೋಟೆಲ್ ಮುಚ್ಚುವಂತೆ ಸೂಚಿಸಿದ್ದರು. ಇದನ್ನು ಲೆಕ್ಕಿಸದ ಮಾಲೀಕ ರಾಜೀವ್ ಶೆಟ್ಟಿ ಪೇದೆ ನಿಂದಿಸಿ ಕಳುಹಿಸಿದ್ದ. ಇದರಿಂದ ಕೋಪಗೊಂಡ ಎಸಿಪಿ ರಾಜೇಶ್ ಶೆಟ್ಟಿ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಇತ್ತ ಪೇದೆ ಕೂಡ ಸಿಬ್ಬಂದಿಯನ್ನು ಹೊರಗೆ ಕಳುಹಿಸಿದ್ದಾರೆ. ಈ ದೃಶ್ಯಗಳು ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿವೆ. ಇತರೆ ಹೋಟೆಲ್ ಮಾಲೀಕರು ಸರಿಯಾಗಿ ಬಂದ್ ಮಾಡಿದರೂ, ರಾಜೀವ್ ಶೆಟ್ಟಿ ತಡರಾತ್ರಿಯಾದರೂ ಹೋಟೆಲ್ ಬಂದ್ ಮಾಡುತ್ತಿರಲಿಲ್ಲ. ಎಷ್ಟು ಬಾರಿ ಸೂಚಿಸಿದರೂ ಹೀಗೆ ವರ್ತಿಸುತ್ತಿದ್ದ. ಲೌಖೀಕ ಮತ್ತು ಲಿಖೀತ ರೂಪದಲ್ಲಿ ಎಚ್ಚರಿಕೆ ಕೂಡ ನೀಡಲಾಗಿತ್ತು. ಆದರೂ ತನ್ನ ವರ್ತನೆಯಲ್ಲಿ ಬದಲಾವಣೆ ಕಾಣಲಿಲ್ಲ. ಹೀಗಾಗಿ ಕಳೆದ ಗುರುವಾರ ರಾತ್ರಿ ಗಸ್ತಿನಲ್ಲಿದ್ದ ವೇಳೆ ಹೋಟೆಲ್ ಮುಚ್ಚುವಂತೆ ಪೇದೆ ಹೇಳಿದಾಗ ಏಕವಚನದಲ್ಲಿ ನಿಂದಿಸಿ ಮುಚ್ಚುವುದಿಲ್ಲ ಎಂದು ಹೇಳಿದ್ದ. ಆಗ ನಾನೇ ಹೋಟೆಲ್‌ಗೆ ತೆರಳಿ ಈ ರೀತಿಯಾಗಿ ಎಚ್ಚರಿಕೆ ನೀಡಬೇಕಾಯಿತು ಎಂದು ಎಸಿಪಿ ಮಂಜುನಾಥ್ ಬಾಬು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ರಾಜೀವ್ ಶೆಟ್ಟಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಪಿ ಚೇತನ್‌ಸಿಂಗ್ ರಾಥೋಡ್‌ಗೆ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.