ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಸಿ ವರ್ಗದ ದೇವಾಲಯಗಳಲ್ಲಿ ಪ್ರಸ್ತುತ ವಾರ್ಷಿಕ 48 ಸಾವಿರ ರೂಪಾಯಿಗಳ ತಸ್ಥೀಕ್ ಹಣವನ್ನು 60 ಸಾವಿರ ರೂಪಾಯಿಗಳಿಗೆ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ತಸ್ಥೀಕ್ ಹಣ ಹೆಚ್ಚಿಸುವಂತೆ ಹಲವು ವರ್ಷಗಳಿಂದ ದೇವಸ್ಥಾನಗಳ ಅರ್ಚಕರು ಹಲವಾರು ಮನವಿಗಳನ್ನು ಸಲ್ಲಿಸಿದ್ದರು. ದಿನ ಬಳಕೆಯ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಿರುವ ಹಿನ್ನಲೆಯಲ್ಲಿ ಪೂಜಾ ಕೈಂಕರ್ಯಗಳ ನಿರ್ವಹಣೆಗಾಗಿ ತಸ್ಥೀಕ್ ಮೊತ್ತವನ್ನು ಹೆಚ್ಚಿಸುವ ಭರವಸೆಯನ್ನು ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶ್ರೀಮತಿ ಶಶಿಕಲಾ ಅ.ಜೊಲ್ಲೆ ನೀಡಿದ್ದರು. ಮಾನ್ಯ ಸಚಿವರ ಒತ್ತಾಸೆಯಂತೆ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಆಯವ್ಯಯ ಭಾಷಣದಲ್ಲಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಹೆಚ್ಚಳದ ಬಗ್ಗೆ ಏಪ್ರಿಲ್ 11, 200 ರಂದು ಅಧಿಕೃತ ಆದೇಶವನ್ನು ಹೊರಡಿಸಲಾಗಿದ್ದು, ಈ ಆರ್ಥಿಕ ವರ್ಷದಿಂದಲೇ ಹೆಚ್ಚಳ ಅನ್ವಯವಾಗಲಿದೆ.
ಅರ್ಚಕರ ಬಹುದಿನಗಳ ಬೇಡಿಕೆ ಇಂದು ಈಡೇರಿದೆ. ಬಹಳಷ್ಟು ಜನ ಅರ್ಚಕರ ಪರಿಸ್ಥಿತಿಯನ್ನು ನೋಡಿ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಿಕೊಳ್ಳಲಾಗಿತ್ತು. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ್ದು ಸಂತಸದ ವಿಷಯ. ಈ ಬಗ್ಗೆ ಅಧಿಕೃತ ಅದೇಶ ಹೊರಡಿಸಲಾಗಿದ್ದು, ಪ್ರಸಕ್ತ ಸಾಲಿನಿಂದಲೇ ಇದು ಜಾರಿಯಾಗಲಿದೆ.
ಶಶಿಕಲಾ ಅ.ಜೊಲ್ಲೆ, ಮುಜರಾಯಿ ಸಚಿವರು