ಹುಮನಾಬಾದ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ವಸತಿ ಯೋಜನೆಯಡಿ ವಸತಿ ನಿರ್ಮಾಣಕ್ಕಾಗಿ ನೀಡುತ್ತಿರುವ ಅನುದಾನ ಸದ್ಬಳಕೆ ಮಾಡಿಕೊಂಡು ನೆಮ್ಮದಿ ಜೀವನ ಸಾಗಿಸಬೇಕು ಎಂದು ಗಣಿ, ಭುವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ ಸಲಹೆ ನೀಡಿದರು.
ಪಟ್ಟಣದ ಶಾಸಕರ ಕಚೇರಿ ಪ್ರಾಂಗಣದಲ್ಲಿ ಗುರುವಾರ ನಡೆದ 2017-18ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನ, ವಸತಿ ನಿರ್ಮಾಣ ಕಾರ್ಯ ಆದೇಶಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಜಪೇಯಿ ನಗರ ವಸತಿ ಯೋಜನೆಯಡಿ ಪ್ರತೀ ಫಲಾನುಭವಿಗೆ ರಾಜ್ಯ ಸರ್ಕಾರದ 1.20 ಲಕ್ಷರೂ, ಕೇಂದ್ರ ಸರ್ಕಾರದ 1.50 ಲಕ್ಷ ರೂ. ಸೇರಿ 2.70 ಲಕ್ಷ ರೂ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇದನ್ನು ನಾಲ್ಕು ಹಂತಗಳಲ್ಲಿ ಬಿಡುಗಡೆ ಮಾಡುತ್ತವೆ. ಡಾ| ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ ರಾಜ್ಯ ಸರ್ಕಾರ 2ಲಕ್ಷ ರೂ. ಮತ್ತು ಕೇಂದ್ರ ಸರ್ಕಾರ 1.5 ಲಕ್ಷ ರೂ.ನಂತೆ ಒಟ್ಟು 3.5ಲಕ್ಷ ಅನುದಾನವನ್ನು ನಾಲ್ಕು ಹಂತಗಳಲ್ಲಿ ಬಿಡುಗಡೆ ಮಾಡುತ್ತವೆ ಎಂದರು. ಈ ಪೈಕಿ ಇಂದು ವಾಜಪೇಯಿ ಯೋಜನೆ 70, ಡಾ| ಅಂಬೇಡ್ಕರ್ ಯೋಜನೆಯಡಿ 72 ಜನ ಫಲಾನುಭವಿ ಸೇರಿ ಒಟ್ಟು 142 ಫಲಾನುಭವಿಗಳಿಗೆ ಕಾಮಗಾರಿ ಆದೇಶಪತ್ರ ವಿತರಿಸಲಾಗಿದೆ ಎಂದರು.
ವಸತಿ ಯೋಜನೆಗೆ ಸಂಬಂಧಪಟ್ಟಂತೆ ಫಲಾನುಭವಿಗಳು ಯಾವುದೇ ಕಾರಣಕ್ಕೂ ದಲ್ಲಾಳಿಗಳ ಮೊರೆ ಹೋಗದಂತೆ ಕಿವಿಮಾತು ಹೇಳಿದ ಅವರು, ಅಷ್ಟಕ್ಕೂ ಹಣ ಹೆಚ್ಚಾಗಿ ಅಂಥವರ ಮೊರೆಹೋಗಿ ಹಾನಿಗೊಳಗಾದರೆ ಅದಕ್ಕೆ ಪುರಸಭೆಯಲ್ಲಿ ಹಣ ಕೊಟ್ಟವರೆ ಹೊಣೆ ಆಗುತ್ತಾರೆ. ಬಡವರಿಗಾಗಿ ರೂಪಿಸಿದ ಈ ಯೋಜನೆ ಮಂಜೂರಾತಿಗಾಗಿ ಅಧಿಕಾರಿ, ಚುನಾಯಿತ ಪ್ರತಿನಿಧಿಗಳು ಲಂಚ ಕೇಳಿರುವ
ಕುರಿತು ಫಲಾನುಭವಿಗಳಿಂದ ಬರುವ ದೂರು ಪರಿಶೀಲಿಸಲಾಗುವುದು. ಸಾಬೀತಾದಲ್ಲಿ ಅಂಥವರು ಜೈಲು ಕಂಬಿ ಎಣಿಸಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಿಲ್ಲ ಎಂದರು.
ಪುರಸಭೆ ಅಧ್ಯಕ್ಷೆ ರಾಧಾ ಮಾಳಪ್ಪ, ಸದಸ್ಯರಾದ ಗುಜ್ಜಮ್ಮ ಎನ್.ಕನಕಟಕರ್, ಅಪ್ಸರಮಿಯ್ಯ, ವಿನಾಯಕ ಯಾದವ್, ಎಂ.ಡಿ.ಇಸ್ಮಾಯಿಲ್, ರಾಮು ಚವ್ಹಾಣ, ಎಂ.ಡಿ.ಆಜಮ್, ಕಾಂಗ್ರೆಸ್ ಮುಖಂಡ ಪ್ರಕಾಶ ಸೋನಕೇರಿ, ರಹಿಂಖಾನ್, ನಯೂಮ್ ಬಾಗವಾನ್, ಶಿವಾಜಿರಾವ್ ಮಚಕೂರಿ, ಸಿದ್ರಾಮ ವಾಗ್ಮಾರೆ, ಸುರೇಶ ಘಾಂಗ್ರೆ, ಅಶೋಕರಾಜ್ ಕಟ್ಟಿ ಇದ್ದರು.
ರಾಮಚಂದ್ರ ಚಾವರೆ ಪ್ರಾರ್ಥಿಸಿದರು. ವಸತಿ ಯೋಜನೆ ವಿಭಾಗ ಅಧಿ ಕಾರಿ ಈಶ್ವರ ತೆಲಂಗ್ ಸ್ವಾಗತಿಸಿದರು. ಪುರಸಭೆ ಮುಖ್ಯಾ ಧಿಕಾರಿ ಶಂಭುಲಿಂಗ ದೇಸಾಯಿ ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಶರದ್ ಕುಮಾರ ನಾರಾಯಣಪೇಟಕರ್ ನಿರೂಪಿಸಿದರು. ಜಾವಿದ್ ವಂದಿಸಿದರು.