ಮಂಗಳೂರು: ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದ ಮೃತ ದೇಹ ಕೊಳೆತ ಹಿನ್ನೆಲೆ ಮೃತರ ಕುಟುಂಬಕ್ಕೆ 5ಲಕ್ಷ ರೂ. ಪರಿಹಾರ ನೀಡಲು ಆಸ್ಪತ್ರೆಗೆ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.
ವಿಲ್ಸನ್ ಅಲನ್ ಫೆರ್ನಾಂಡಿಸ್ ಅವರ ಮೃತದೇಹ ಕೊಳೆತ ಹಿನ್ನೆಲೆ ಆಸ್ಪತ್ರೆಯ ಸೇವಾ ಲೋಪವೆಂದು ಪರಿಗಣಿಸಿ ಮೃತರ ಉತ್ತರಾಧಿಕಾರಿಗಳಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಖಾಸಗಿ ಆಸ್ಪತ್ರೆಯ ಅಧಿಕಾರಿಗಳಿಗೆ ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಕಮಿಶನ್ ಆದೇಶ ಹೊರಡಿಸಿದೆ.
2019ರ ಅ. 25ರಂದು ಪೆರ್ಮನ್ನೂರಿನ ವಿಲ್ಸನ್ ಮೃತಪಟ್ಟ ಹಿನ್ನೆಲೆ ಸಂಬಂಧಿಕರ ಬರುವಿಕೆಗೆ ಕಾಯುವ ಉದ್ದೇಶದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಇದರ ವೆಚ್ಚವಾಗಿ 2,250 ರೂ. ಪಡೆದಿದ್ದರು. ಅ. 27ರಂದು ಮೃತದೇಹ ಕೊಳೆತು ಹೋಗಿದೆ ಎಂದು ನೆಲ್ಸನ್ ಫೆರ್ನಾಂಡಿಸ್ ಅವರಿಗೆ ಆಸ್ಪತ್ರೆಯಿಂದ ತಿಳಿಸಲಾಗಿತ್ತು. ಮನೆಯವರು ನೋಡಿದಾಗ ಮೃತದೇಹ ಕೊಳೆತು ದುರ್ವಾಸನೆ ಬರುತ್ತಿತ್ತು.
ಈ ಬಗ್ಗೆ ವಿಚಾರಿಸಿದಾಗ ವಿದ್ಯುತ್ ಸಂಚಾರ ನಿಲುಗಡೆಯಾದ ಕಾರಣ ಶವ ಕೊಳೆತು ಹೋಗಿದೆ ಎಂದು ತಿಳಿಸಿದ್ದರು. ಈ ಸಂದರ್ಭ ಪೊಲೀಸರಿಗೆ ದೂರು ನೀಡಿ ಆಸ್ಪತ್ರೆಯ ವಿರುದ್ದ ಕ್ರಿಮಿನಲ್ ಪ್ರಕರಣವೂ ದಾಖಲಾಗಿತ್ತು. ಆಸ್ಪತ್ರೆಯ ನಿರ್ಲಕ್ಷ್ಯ ಹಾಗೂ ಸೇವಾ ಲೋಪದ ವಿರುದ್ಧ ನೆಲ್ಸನ್ ಫೆರ್ನಾಂಡಿಸ್ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ದೂರುದಾರರ ಪರವಾಗಿ ನ್ಯಾಯವಾದಿ ಎ. ದಿನೇಶ ಭಂಡಾರಿ ಹಾಗೂ ಕೆ. ಎಸ್.ಎನ್. ಅಡಿಗ ವಾದಿಸಿದ್ದರು.