ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ವರ್ಗದ ಅಧಿಕಾರಿಗಳಿಗೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ನೀಡಿರುವ ಬಡ್ತಿ ಮೀಸಲಾತಿ ಮುಂದುವರಿಸುವ ಕುರಿತ ಸುಗ್ರೀವಾಜ್ಞೆ ಮಂಗಳವಾರ ರಾತ್ರಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಬಡ್ತಿ ನೀಡಿರುವವರಿಗೆ ಹಿಂಬಡ್ತಿ ನೀಡಲಾಗದು. ಆದರೆ, ಅನ್ಯಾಯಕ್ಕೊಳ ಗಾದವರಿಗೂ ನ್ಯಾಯ ಕಲ್ಪಿಸಲಾಗುವುದು. ಬಡ್ತಿ ವಂಚಿತರಿಗೆ ಆಯಾ ಇಲಾಖೆಯಲ್ಲಿ ಬಡ್ತಿ ನೀಡಲಾಗುವುದು ಎಂಬ ಅಂಶ ಸುಗ್ರೀವಾಜ್ಞೆಯಲ್ಲಿದೆ ಎಂದು ಹೇಳಲಾಗಿದೆ. ಸುಗ್ರೀವಾಜ್ಞೆಗೆ ರಾಜ್ಯಪಾಲರ ಒಪ್ಪಿಗೆ ಸಿಗಬಹುದು ಇಲ್ಲವೇ ಮತ್ತೆ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿ ವಿಧಾನಮಂಡಲದಲ್ಲಿ ಅನು ಮೋದನೆ ಪಡೆಯುವಂತೆ ಸೂಚಿಸಬಹುದು. ಇಲ್ಲವೇ ರಾಷ್ಟ್ರಪತಿಯವರಿಗೆ ಕಳುಹಿಸಬಹುದು.
ಕೋರ್ಟ್ ಗಮನಕ್ಕೆ ತರಲು ಸಿದ್ಧತೆ: ಇದೇ ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಬರುತ್ತಿರುವುದರಿಂದ ರಾಜ್ಯ ಸರ್ಕಾರವು ಈಗಾಗಲೇ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದ್ದು, ಆ ವೇಳೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದ ಬಗ್ಗೆ ಪ್ರಮಾಣಪತ್ರ ಸಲ್ಲಿಸಿ ನ್ಯಾಯಾಲಯದ ಗಮನಕ್ಕೆ ತರಲು ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ.
ರಾಜ್ಯದ ವಾದ: ಬಡ್ತಿ ಮೀಸಲು ಸಂಬಂಧ ಈಗಾಗಲೇ 1978 ರಿಂದ ಜಾರಿಗೊಳಿಸಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಅಧಿಕಾರಿಗಳು ಬಡ್ತಿ ಪಡೆದು ನಿವೃತ್ತಿಯೂ ಪಡೆದುಕೊಂಡಿದ್ದಾರೆ. ಇದೀಗ ಹಿಂಬಡ್ತಿ ನೀಡಿದರೆ ಬಡ್ತಿ ಪಡೆದವರಿಗೆ ಅನ್ಯಾಯ ಆಗುತ್ತದೆ. ಹೀಗಾಗಿ, ಇದೊಂದು ಅಪರೂಪದ ಪ್ರಕರಣ ಎಂದು ಪರಿಗಣಿಸಿ ಈಗಾಗಲೇ ನೀಡಿರುವ ಬಡ್ತಿ ಪ್ರಕ್ರಿಯೆ ಊರ್ಜಿತಗೊಳಿಸಿ ಮುಂದೆ ಇಂತಹ ಬಡ್ತಿ ನೀಡುವುದಿಲ್ಲ. ಜತೆಗೆ ಬಡ್ತಿಯಿಂದ ವಂಚಿತರಾದವರಿಗೆ ಆಯಾ ಇಲಾಖೆಯಲ್ಲೇ ಬಡ್ತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲೂ ವಾದ ಮಂಡನೆ ಮಾಡಲಿದೆ ಎಂದು ಹೇಳಲಾಗಿದೆ.
ಸಿಗುತ್ತಾ ನ್ಯಾಯ?
1978 ರಿಂದ ಬಡ್ತಿ ಮೀಸಲಾತಿ ಜಾರಿಯಿಂದ ಇತರೆ ವರ್ಗಗಳ ಸುಮಾರು 20 ಸಾವಿರ ಅಧಿಕಾರಿಗಳಿಗೆ ಅನ್ಯಾಯವಾಗಿದೆ. ಕೆಲವರು ಬಡ್ತಿಯಿಂದ ವಂಚಿತರಾಗಿ ನಿವೃತ್ತಿಯಾಗಿದ್ದರೆ, ಮತ್ತೆ ಕೆಲವರು ಬಡ್ತಿ ಪಡೆದು ನಿವೃತ್ತಿಯಾಗಿದ್ದಾರೆ. ಈಗ ವಂಚಿತರಿಗೆ ನ್ಯಾಯ ಒದಗಿಸುವುದಾದರೆ 10 ಸಾವಿರಕ್ಕೂ ಮೇಲ್ಪಟ್ಟ ಅಧಿಕಾರಿಗಳಿಗೆ ಬಡ್ತಿ ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ.