Advertisement
ಅತಿ ಹೆಚ್ಚು ಹೂವುಗಳನ್ನು ಬಿಡುವ ಸಸ್ಯ ಕುಟುಂಬಗಳಲ್ಲಿ ಒಂದಾಗಿರುವ ಆರ್ಕಿಡ್, ವಿಶ್ವಾದ್ಯಂತ ಸುಮಾರು 30 ಸಾವಿರ ಜಾತಿಗಳನ್ನು ಹೊಂದಿದೆ. ಆರ್ಕಿಡ್‌ಗಳು ಸುಂದರವಾಗಿದ್ದು, ಅಪರೂಪವಾಗಿರುತ್ತವೆ ಹಾಗೂ ದೀರ್ಘಾಯುಷ್ಯವುಳ್ಳ ಸಸ್ಯಗಳಾಗಿವೆ. ಈ ಸಸ್ಯಗಳು ಮೊದಲು ಕಾಡಿನಲ್ಲಿ ಅಂದರೆ, ಪಶ್ಚಿಮ ಘಟ್ಟಗಳಲ್ಲಿ ಬೆಳೆಯುತ್ತಿದ್ದವು. ಆದರೆ, ಈಗ ಹಸಿರು ಮನೆಯಲ್ಲಿ ಹಾಗೂ ಹೈಬ್ರಿಡ್ ಜಾತಿಯ ಸಸ್ಯಗಳನ್ನು ಮನೆಗಳಲ್ಲಿಯೂ ಬೆಳೆಯಬಹುದು.
Related Articles
Advertisement
2005ರಲ್ಲಿ ಪ್ರಾರಂಭವಾದ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕವು ಕೇವಲ 15 ಸದಸ್ಯರನ್ನು ಹೊಂದಿತ್ತು. ಪ್ರಸ್ತುತ 650ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಬಹುತೇಕರು ಕರ್ನಾಟಕ ದವರೇ ಇದ್ದಾರೆ. ಉಳಿದಂತೆ ಪುಣೆ, ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ವೈದ್ಯರು, ಐಟಿ ವೃತ್ತಿಪರರು, ನಿವೃತ್ತಿ ಪಡೆದವರು, ಉಪನ್ಯಾಸಕರು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ.
2012ರಲ್ಲಿ ಆರಂಭಿಸಿದ ಆರ್ಕಿಡ್ ಪ್ರದರ್ಶನವು ಇದೀಗ ತನ್ನ 8ನೇ ಆವೃತ್ತಿಯ ಪ್ರದರ್ಶನವನ್ನು ಆಯೋಜಿಸಲಾಗಿದೆ. ವಿಶ್ವಾದ್ಯಂತದ ಕೆಲವು ಅತ್ಯಂತ ಆಸಕ್ತಿದಾಯಕ ವಿವಿಧ ಆರ್ಕಿಡ್ ಪ್ರಭೇದಗಳು ಮತ್ತು ಅತ್ಯಂತ ಮೋಡಿಮಾಡುವ ಪುಷ್ಪಯುಕ್ತ ಮಿಶ್ರತಳಿಗಳು ಒಂದೇ ಸೂರಿನಡಿ ಪ್ರದರ್ಶನಕ್ಕೆ ಸಿದ್ಧವಾಗಿದ್ದು, ಆರ್ಕಿಡ್‌ಗಳನ್ನು ಬೆಳೆಸುವ ಹವ್ಯಾಸಿಗಳನ್ನು ಪ್ರೇರೇಪಿಸಲಾಗುತ್ತದೆ.
ಜತೆಗೆ ಆರ್ಕಿಡ್ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಸಂದೇಶ ಹರಡುವ ಪ್ರಯತ್ನದಲ್ಲಿ ಪುಸ್ತಕಗಳು, ಪೋಸ್ಟರ್‌ಗಳನ್ನು ಪ್ರಸ್ತುತಪಡಿಸಲಾಗಿದೆ. ವಿವಿಧ ಲೇಖಕರ ಆರ್ಕಿಡ್ ಕುರಿತು ಬರೆದಿರುವ ಪುಸ್ತಕಗಳನ್ನು ಮಾರಾಟಕ್ಕಿಡಲಾಗಿದ್ದು, ಇಲ್ಲಿ ಆರ್ಕಿಡ್ ಬೆಳೆಯುವ ರೀತಿ ಹಾಗೂ ಪ್ರಾಯೋಗಿಕ ಸಲಹೆಗಳೊಂದಿಗೆ ಬೆಳೆಗಾರರಿಗೆ ಮಾಹಿತಿಯನ್ನು ಒದಗಿಸಲಾಗುತ್ತದೆ ಎಂದು ಸೊಸೈಟಿ ಅಧ್ಯಕ್ಷ ಡಾ| ಕೆ.ಎಸ್. ಶಶಿಧರ್ ಶಾಸ್ತ್ರೀ ತಿಳಿಸುತ್ತಾರೆ.