Advertisement
ನಟ್ ಯಶ್ ನೇತೃತ್ವದ ಯಶೋ ಮಾರ್ಗದ ನೆರವಿನಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಾದ ತಲ್ಲೂರು ಕೆರೆಯ ಹೂಳೆತ್ತುವ ಕಾರ್ಯ ಒಂದು ತಿಂಗಳಿಂದ ನಡೆಯುತ್ತಿದೆ. ವಿಶೇಷವೆಂದರೆ ಇಲ್ಲಿ ಯಾವ ಕೆರೆಗಳಲ್ಲಿಯೂ ನೀರಿಲ್ಲ. ಜಾನುವಾರು, ವನ್ಯಜೀವಿಗಳೂ ಕೊಳವೆ ಬಾವಿಯ ನೀರು ನಂಬುವ ಪರಿಸ್ಥಿತಿ ಇದೆ. ಮಕ್ಕಳು ಶಾಲೆ ಬಿಡುವುದು, ಹತ್ತಾರು ಎಕರೆಯ ಕೃಷಿಕರು ಗುಳೆ ಹೋಗುವುದು. ದನಕರು ಸಾಕಲಾಗದೇ ಸಂಕಟ ಪಡುವುದು ಮಾಮೂಲಿ. ವಾರ್ಷಿಕ 550-700 ಮಿಲಿ ಮೀಟರ್ ಮಳೆ ಸುರಿದರೆ ಇವರೆಲ್ಲ ಕೃಷಿ ಬದುಕಿನಲ್ಲಿನೆಮ್ಮದಿ ಕಾಣುತ್ತಾರೆ. ಬರ ಈ ಪ್ರದೇಶಕ್ಕೆ ಹೊಸತಲ್ಲ. ಅತ್ಯಂತ ಕಡಿಮೆ ಮಳೆ ಸುರಿದರೂ ಮಣ್ಣಿನ ತೇವ ಆರದಂತೆ ಹೊಲಕ್ಕೆ ಮರಳು ಮುಚ್ಚಿಗೆ ಮಾಡಿ ಬೆಳೆ ತೆಗೆಯುವ ವಿದ್ಯೆ ಹಿರಿಯರಲ್ಲಿದೆ. ಮಳೆ ಕೈಕೊಟ್ಟರೆ ಸಜ್ಜೆ, ಮೆಕ್ಕೆಜೋಳ ಬೆಳೆಯುವುದಿಲ್ಲ. ಮುಂಗಾರು ಸುರಿಯದಿದ್ದರೆ ಹುರಳಿ, ತೊಗರಿ ದೊರೆಯುವುದಿಲ್ಲ. ಬೆಳೆ ಇಲ್ಲದಿದ್ದರೆ ಆಹಾರದ ಉತ್ಪಾದನೆ ಇಲ್ಲ. ಜಾನುವಾರುಗಳಿಗೆ ಮೇವು
ಸಿಗುವುದಿಲ್ಲವೆಂದು ಸರಳವಾಗಿ ಅರ್ಥವಾಗುತ್ತದೆ. ನೆಲದ ಬರದ ಭಾಷೆ ಅನುಭವಿಸಿದ ಕೃಷಿಕರಿಗಲ್ಲದೇ ಇದು ಬೇರೆ ಯಾರಿಗೆ ಅರ್ಥವಾಗಲು ಸಾಧ್ಯ ? ಖ್ಯಾತ ನಟ ಯಶ್ ಒಮ್ಮೆ ನೀರಿನ ಬಗ್ಗೆ ಮಾತಾಡುವಾಗ ನೀರಿನ ಕತೆ ಕೇಳಿದರು. ಕಳೆದ ವರ್ಷ ಬರದಲ್ಲಿ ಹಳ್ಳಿಗಳಿಗೆ ಕುಡಿಯುವ ನೀರಿನ ಟ್ಯಾಂಕರ್ ಪೂರೈಸಿದವರು ಇವರು. ಒಬ್ಬ ಸಿನಿಮಾ ಹಿರೋವನ್ನು ಜನ ವಿಶೇಷವಾಗಿ ಗಮನಿಸುವುದಕ್ಕೆ, ಗೌರವಿಸುವುದಕ್ಕೆ ಮುಖ್ಯಕಾರಣ ಏನನ್ನೂ ಸಾಧಿಸಬಹುದೆಂಬ ನಿರೀಕ್ಷೆ. ಯಾರಲ್ಲಿಯೂ ಆಗದ ಕೆಲಸವನ್ನು ತಮ್ಮ ನೆಚ್ಚಿನ ಹೀರೋ ಮಾಡುತ್ತಾನೆಂಬ ಸಿನಿಮಾ ಶೈಲಿಯಲ್ಲಿಯೇ ಸಮಾಜ ನಟನನ್ನು ನೋಡುತ್ತದೆ. ಜನ ಸಂಕಟ ಪಡುವಾಗ ಭಾಷಣ,
ಹೋರಾಟವಷ್ಟೇ ಸಾಲುವುದಿಲ್ಲ. ರಚನಾತ್ಮಕ ಕಾರ್ಯ ಕೈಗೊಳ್ಳಬೇಕೆಂಬ ಹಂಬಲ ನಟ ಯಶ್‌ರದು. ಹೀಗಾಗಿ ನೇರ ಜಲ ಕಾಯಕಕ್ಕೆ ಬಂದವರು. ತಮ್ಮ ದುಡಿಮೆಯ ಹಣವನ್ನು ಕೆರೆ ಕಾಯಕಕ್ಕೆ ನೀಡುವ ಮೂಲಕ ರಾಜ್ಯದ ಇತಿಹಾಸದಲ್ಲಿಯೇ ಸಿನಿಮಾ ನಟರಾಗಿ ಜಲ ಸಂರಕ್ಷಣೆಯ ಹೊಸ ಕಾರ್ಯಕ್ಕೆ ಪ್ರೇರಣೆಯಾದರು. ರಾಜ್ಯದ ಕೃಷಿ, ನೀರಿನ ಪರಿಸ್ಥಿತಿ ಕುರಿತು ಹಲವರ ಜೊತೆ ಚರ್ಚಿಸಿದ್ದಾರೆ.
ಒಮ್ಮೆ ಜಲಕಾರ್ಯಕರ್ತ ರಾಧಾಕೃಷ್ಣ ಭಡ್ತಿ ಹಾಗೂ ನನ್ನ ಜೊತೆ ವಿಶೇಷ ಚರ್ಚೆ ನಡೆಯಿತು. ರಾಜ್ಯದ ಸಾವಿರಾರು ಕೆರೆಗಳ ಹೂಳು ತೆಗೆಯಬೇಕು. ಆದರೆ ಎಲ್ಲಿಂದ ಕೆಲಸ ಆರಂಭಿಸಬೇಕು? ಹೇಗೆ ಜಲ ಜಾಗೃತಿ ಮೂಡಿಸಬೇಕೆಂಬ ಚರ್ಚೆ ನಡೆದಾಗ ಬರದ ನೆಲದ ಯಲಬುರ್ಗಾ ತಲ್ಲೂರು ಕೆರೆ ಪ್ರಸ್ಥಾಪಿಸಿದ್ದೆ. ಯುವ ಕೃಷಿಕ ರಮೇಶ ಬಲೂಟಗಿಯ ತಂಡ ಜೊತೆ ನಿಲ್ಲಲು ಸಿದ್ಧವಾಗಿತ್ತು. 96 ಎಕರೆ ವಿಶಾಲ ಕೆರೆ ಹೂಳೆತ್ತುವ ಕಾರ್ಯಕ್ಕೆ ಫೆಬ್ರುವರಿ 28ಕ್ಕೆ ಚಾಲನೆ ದೊರೆಯಿತು. ಯಶ್ ಹಾಗೂ ರಾಧಿಕಾ ಪೂಜೆ ನೆರವೇರಿಸಿದರು. ಸಾವಿರಾರು ಅಭಿಮಾನಿಗಳು ಉರಿ ಬಿಸಿಲು ಮರೆತು ಉತ್ಸಾಹದಲ್ಲಿ ಭಾಗವಹಿಸಿದರು.
ಕೆಲಸವೂ ಆರಂಭವಾಯ್ತು! ಕೆರೆಯ ಹೂಳು ಹೊಲಕ್ಕೆ ಫಲವತ್ತಾದ ಮಣ್ಣು, ರೈತರು 25-30 ಟ್ರ್ಯಾಕ್ಟರ್‌ಗಳನ್ನು ತಂದು ನಿತ್ಯವೂ ಹೂಳು ಒಯ್ಯಲು ಆರಂಭಿಸಿದರು. ಸುಮಾರು 4 ಲಕ್ಷ ಕ್ಯುಬಿಕ್ ಮೀಟರ್ ಹೂಳು ತೆಗೆಯುವ ಉದ್ದೇಶವಿದೆ. ಇದರಲ್ಲಿ ಮಳೆ ನೀರು ಶೇಖರಣೆಯಾದರೆ ಸುತ್ತಲಿನ ಹತ್ತಾರು ಕಿಲೋ ಮೀಟರ್ ಪ್ರದೇಶದ ಅಂತರ್ಜಲ ಹೆಚ್ಚುತ್ತದೆ ಎನ್ನುತ್ತಾರೆ ಯಶೋ ಮಾರ್ಗದ ವ್ಯವಸ್ಥಾಪಕ ನಿರ್ದೇಶಕ ಗೌತಮ್. ಕ್ರಿ.ಶ 2012-13ರಲ್ಲಿ ತಲ್ಲೂರು ಕೆರೆ ತುಂಬಿತ್ತು. ಒಣಗಿದ ಕೊಳವೆ ಬಾವಿಗಳಿಗೆ ಮರುಜೀವ ಬಂದಿತು. ಇಲ್ಲಿಂದ ಸುಮಾರು ನಾಲ್ಕೈದು
ಕಿಲೋ ಮೀಟರ್ ದೂರದ ಯಲಬುರ್ಗಾ ನಗರದ ಬಾವಿಗಳ ಅಂತರ್ಜಲ ಹೆಚ್ಚಿತು. ವಜ್ರಬಂಡಿ, ತಲ್ಲೂರು, ವೀರಾಪುರ, ಸಾಲಬಾವಿ, ಗೊರವನಹಳ್ಳಿ, ಜರ್ಮಂತಿ, ಗೆದಗೇರಿ ಸೇರಿದಂತೆ 13 ಹಳ್ಳಿಗಳ 20 ಸಾವಿರ ಎಕರೆ ಕೃಷಿ ಭೂಮಿಗೆ ಅನುಕೂಲವಾಗಿತ್ತು. ಆದರೆ ಕೆರೆಯ ಪಾತ್ರ ಆಳವಾಗಿಲ್ಲ, ಹೆಚ್ಚು ನೀರು ನಿಲ್ಲುತ್ತಿಲ್ಲ. ಆಳ ಹೆಚ್ಚಿಸಿ ನೀರು ನಿಲ್ಲುವ ಅವಕಾಶ ನೀಡುವ ಪ್ರಯತ್ನ ನಡೆಯುತ್ತಿದೆ.
ಕೆರೆಯಲ್ಲಿ ನೀರು ಸಂಗ್ರಹವಾದರೆ ಭವಿಷ್ಯದ ಬರ ಎದುರಿಸಲು ಹೊಸ ಶಕ್ತಿ ದೊರೆಯುತ್ತದೆ. ಕೊಪ್ಪಳ ಜಿಲ್ಲೆ ರಾಜ್ಯಕ್ಕೆ ಅತ್ಯುತ್ತಮ ದಾಳಿಂಬೆ, ಲಿಂಬೆ, ಪಪ್ಪಾಯ, ಬಾಳೆ, ಕಿನೋ, ಕಿತ್ತಳೆ, ದ್ರಾಕ್ಷಿ$, ಪೇರಲೆ, ನೇರಳೆ, ಚಿಕ್ಕು, ಮಾವು, ನೆಲ್ಲಿ, ನುಗ್ಗೆ ಸೇರಿದಂತೆ ವಿವಿಧ ಜಾತಿಯ ಹಣ್ಣು ನೀಡುತ್ತಿದೆ. ಇಲ್ಲಿ ಬೆಳೆಯುವಷ್ಟು ಹಣ್ಣಿನ ಜಾತಿಗಳು ರಾಜ್ಯದ ಎಲ್ಲಿಯೂ ಬೆಳೆಯುವುದಿಲ್ಲ.
Related Articles
ಜಾಣ್ಮೆ ನಾಡಿನ ಬಹುಸಂಖ್ಯಾತ ಕೃಷಿಕರಿಗೆ ಪ್ರೇರಣೆ ನೀಡುತ್ತಿದೆ.
Advertisement
“ಮಳೆ ಇಲ್ಲದ ನೆಲೆಯಲ್ಲಿ ಕೆರೆ ನಿರ್ಮಿಸುತ್ತಿದ್ದೀರಿ, ಇದಕ್ಕೆ ನೀರು ಬರುವುದು ಹೇಗೆ ?’ ಮಾಧ್ಯಮ ಮಿತ್ರರು ತಲ್ಲೂರು ಕೆರೆಯಂಗಳದಲ್ಲಿ ನಿಂತಾಗ ಕೇಳಿದ್ದರು. ಇಲ್ಲಿ ವಾಡಿಕೆಯ 500 ಮಿಲಿ ಮೀಟರ್ ಮಳೆ ಸುರಿದರೂ ಎಕರೆಗೆ 20-25 ಲಕ್ಷ ಲೀಟರ್ ಮಳೆ ನೀರು ಸುರಿಯುತ್ತದೆ. ಸುಮಾರು ಎರಡು ಸಾವಿರ ಎಕರೆ ಭೂಮಿಯಲ್ಲಿ ಸುರಿಯುವ ಮಳೆ ನೀರು ಕೆರೆಯಂಗಳಕ್ಕೆ ಬರುತ್ತದೆಂದು ಲೆಕ್ಕ ಹೇಳಿದ್ದೆ. ಅಕಾಲಿಕ ಮಳೆಯ ನೀರು ಹಿಡಿಯಲು ಜಲಪಾತ್ರೆಯಂತೆ ಕೆರೆ ನೆರವಾಗುತ್ತದೆಂದು ವಿವರಿಸಿದೆವು. ಅಚ್ಚರಿಯ ಸಂಗತಿಯೆಂದರೆ ಐದಾರು ಅಡಿ ಹೂಳು ತೆಗೆಯುತ್ತ ಹೋದಂತೆ ಈಗ 10 ದಿನಗಳ ಹಿಂದೆ ಒರತೆ ಜಲ ಕಾಣಿಸಿದೆ. ಹೋಗಿ ನೋಡಿದರೆ ಎರಡು ಮೂರು ಇಂಚು ನೀರು ಗುಡ್ಡದ ದಿಕ್ಕಿನಿಂದ ಬರುತ್ತಿದೆ. ಮಲೆನಾಡಿನ ನನಗೆ ನಮ್ಮೂರ ಗುಡ್ಡದಿಂದ ಹರಿಯುವ ಝರಿ ನೆನಪಾಗಿದೆ. ಬೊಗಸೆಯೆತ್ತಿ ನೀರು ಕುಡಿದರೆ ಸಿಹಿ ನೀರು ! ಈಗ ಕೆರೆಯಂಗಳ ಸುತ್ತಲಿನ ಜನರನ್ನು ಸೆಳೆಯುತ್ತಿದೆ. ಸಿಹಿ ನೀರು ಬರದ ನೆಲದ ಅಮೃತವಾಗಿದೆ. ದನಕರು, ಕುರಿ ಹಿಂಡು ಓಡಿ ಬಂದು ನೀರು ಕುಡಿಯುವ ಖುಷಿ ಗಮನಿಸಿದರೆ ನೀರಿನ ಭಾಷೆ ಅರ್ಥವಾಗುತ್ತದೆ. ಕೆರೆ ಕಾಯಕಕ್ಕೆ ನೆರವಾದ ಬೆಂಗಳೂರಿನಲ್ಲಿರುವ ನಟ ಯಶ್‌ರಿಗಾಗಲಿ, ಜೊತೆ ನಿಂತ ಗೌತಮ, ರಾಧಾಕೃಷ್ಣ ಭಡ್ತಿ ಅಥವಾ ನನಗಾಗಲಿ ತಲ್ಲೂರು ಕೆರೆಯ ನೀರು ಯಾವತ್ತೂ ಸಿಗುವುದಿಲ್ಲ. ಏಕೆಂದರೆ ನಾವು ಕೆರೆಯಿಂದ ದೂರ ಇರುವವರು. ಆದರೆ ಎಲ್ಲರಿಗಿಂತ ಹೆಚ್ಚು ಖುಷಿ ನಮ್ಮದಾಗಿದೆ. ಜಲ ಕಾಯಕದ ದಿವ್ಯ ಅನುಭವವೇ ಅಂಥದು. ಕೆರೆ ಹೂಳೆತ್ತುವ ಕೆಲಸವನ್ನು ಯಶ್ ಆರಂಭಿಸಿದ್ದಾರೆ. ಕೆಲಸ ಒಳ್ಳೆಯದೆಂದು ಮೆಚ್ಚಿದರಷ್ಟೇ ಪ್ರಯೋಜನಲ್ಲ, ನೇರ ಸಾಮಾಜಿಕ ಕೆಲಸಕ್ಕೆ ನೆರವಾಗುವುದು ಮುಖ್ಯವಿದೆ. ಒಂದು ಹೆಜ್ಜೆ ಜಲ ಕಾಯಕದ ಕಡೆಗೆ ನೀವು ಬನ್ನಿರಿ.
ಸಂಪರ್ಕಕ್ಕೆ: yashomarga@gmail.comಶಿವಾನಂದ ಕಳವೆ