ಬೆಂಗಳೂರು: ರಾಜ್ಯದಲ್ಲಿ ಒಂದು ವಾರದಿಂದ ಅಬ್ಬರಿಸಿದ್ದ ಮಳೆ ಸೋಮವಾರ ತುಸು ತಗ್ಗಿದ್ದು, ಪರಿಣಾಮ ಕೆಲವು ಕಡೆಗಳಿಗೆ ಘೋಷಿಸಲಾಗಿದ್ದ ರೆಡ್ ಅಲರ್ಟ್ ಅನ್ನು ಆರೆಂಜ್ ಅಲರ್ಟ್‌ಗೆ ಬದಲಾಯಿಸಲಾಗಿದೆ.
ಮಂಗಳವಾರದಿಂದ ಜುಲೈ 16ರ ವರೆಗೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗೂ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಯ ಆಯ್ದ ಭಾಗಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ಹಾಗಾಗಿ, ಈ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಆರೆಂಜ್ ಅಲರ್ಟ್ ಘೋಷಿಸಿದೆ.
ಹಾಸನ ಸಹಿತ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಯ ಕೆಲ ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಆದರೆ, ಹಿಂದಿನ ನಾಲ್ಕೈದು ದಿನಗಳಿಗೆ ಹೋಲಿಸಿದರೆ ಅಬ್ಬರ ತುಸು ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಮಧ್ಯೆ ದಕ್ಷಿಣ ಕನ್ನಡದ ಸುಬ್ರಮಣ್ಯ ಸುತ್ತಮುತ್ತ ಅತಿ ಹೆಚ್ಚು 160 ಮಿ.ಮೀ., ಉತ್ತರ ಕನ್ನಡದ ಕ್ಯಾಸಲ್‌ರಾಕ್‌ನಲ್ಲಿ 150 ಮಿ.ಮೀ., ಶಿವಮೊಗ್ಗದ ಲಿಂಗನಮಕ್ಕಿಯಲ್ಲಿ 130, ಉಡುಪಿಯ ಕೋಟದಲ್ಲಿ 120 ಮಿ.ಮೀ. ಮಳೆ ದಾಖಲಾಗಿದೆ. ಅದೇ ರೀತಿ, ಉಡುಪಿಯ ಕೊಲ್ಲೂರು, ಸಿದ್ದಾಪುರ, ದಕ್ಷಿಣ ಕನ್ನಡದ ಮೂಡಬಿದರೆ, ಉತ್ತರ ಕನ್ನಡದ ಬಸಗೋಡ, ಗೇರುಸೊಪ್ಪ, ಚಿಕ್ಕಮಗಳೂರಿನ ಕೊಪ್ಪ, ಶೃಂಗೇರಿಯಲ್ಲಿ ಕನಿಷ್ಠ 100ರಿಂದ ಗರಿಷ್ಠ 110 ಮಿ.ಮೀ. ಮಳೆಯಾಗಿದೆ.