ವಾಡಿ: ಅತಿವೃಷ್ಟಿ ಅನಾವೃಷ್ಟಿಗೆ ನೊಂದುಕೊಳ್ಳದೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಲಿಲ್ಲ ಎಂದು ಜಿಗುಪ್ಸೆ ಹೊಂದದೇ, ಮಾಡಿದ ಸಾಲ ತೀರಿಸುವುದು ಹೇಗೆಂದು ಚಿಂತಿತರಾಗಿ ಅತ್ಮಹತ್ಯೆಗೆ ಶರಣಾಗದೇ ರೈತರು ಸರ್ಕಾರದ ವಿರುದ್ಧ ಹೋರಾಟದ ಸಂಘರ್ಷ ಹೂಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಚಿತ್ತಾಪುರ ತಾಲೂಕು ಅಧ್ಯಕ್ಷ ಸಾಯಬಣ್ಣ ಗುಡುಬಾ ಹೇಳಿದರು.
ಇಂಗಳಗಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯತ್ವ ಅಭಿಯಾನ ಉದ್ದೇಶಿಸಿ ಅವರು ಮಾತನಾಡಿದರು.
ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಪಕ್ಷಗಳು ರೈತರನ್ನೇ ಶೋಷಿಸುವ ಕಾಯ್ದೆಗಳನ್ನು ಜಾರಿಗೆ ತರುತ್ತಿವೆ. ಅನ್ನದಾತ ದೇಶದ ಬೆನ್ನೆಲುಬು ಎಂದು ಬೆನ್ನು ಚಪ್ಪರಿಸುತ್ತಲೇ ಬೆನ್ನಿಗೆ ಚೂರಿ ಹಾಕುವ ಮರಣ ಶಾಸನಗಳನ್ನು ಜಾರಿಗೊಳಿಸಿ ಕಾರ್ಪೋರೇಟ್‌ಗಳ ಸೇವೆ ಮಾಡುತ್ತಿವೆ. ಎಲ್ಲರಿಗಿಂತಲೂ ಚೆನ್ನಾಗಿರಬೇಕಾದ ಕೃಷಿಕರ ಜೀವನ ಈಗ ಅತ್ಯಂತ ಕಷ್ಟಕರ ಸ್ಥಿತಿಯಲ್ಲಿದೆ. ರೈತರು ಸಂಘಟಿತರಾಗುವ ಮೂಲಕ ಆಳುವ ವರ್ಗಗಳನ್ನು ಎಚ್ಚರಿಸಬೇಕು. ಪರಿಹಾರ, ಹಕ್ಕುಗಳಿಗಾಗಿ ನಿರಂತರ ಚಳವಳಿ ಕಟ್ಟಬೇಕು. ಅನ್ನ ಬೆಳೆಯುವ ರೈತರು ಸ್ವಾಭಿಮಾನದಿಂದ ಬದುಕಲು ಸರ್ಕಾರಗಳು ಉತ್ತಮ ಯೋಜನೆಗಳು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ರೈತ ಸಂಘಕ್ಕೆ ಸದಸ್ಯತ್ವ ಹೊಂದುವ ಮೂಲಕ ಅಭಿಯಾನ ಉದ್ಘಾಟಿಸಿ ಮಾತನಾಡಿದ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಸ್ಥಾವರಮಠ, ರೈತರು ಮತ್ತು ಕೂಲಿ ಕಾರ್ಮಿಕರ ಬದುಕು ಬೀದಿಗೆ ಬಂದು ನಿಂತಿದೆ. ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗದೇ ಗೋಳಾಡುವಂತಾಗಿದೆ. ಪ್ರಕೃತಿ ವಿಕೋಪಕ್ಕೆ ಸಿಲುಕಿ ಬೆಳೆ ನಷ್ಟ ಅನುಭವಿಸಿದ ಸಣ್ಣ ರೈತರಿಗೆ ಸಕಾಲದಲ್ಲಿ ಪರಿಹಾರ ಸಿಗುತ್ತಿಲ್ಲ. ಹೀಗಾಗಿ ರೈತರ ಜೀವನ ಸಾಲದಲ್ಲೇ ಕಳೆದುಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತ ಸಂಘದ ಸದಸ್ಯರಾದ ವಿಜಯಲತಾ ಸಂಕಾ, ಜಗದೇವಿ ಚನ್ನಗುಂಡ, ಮಲ್ಲಪ್ಪ ನಾಟೀಕಾರ, ಮಲ್ಲಮ್ಮ ಸಂಕಾ, ನಿಂಗಪ್ಪ ಪೂಜಾರಿ, ಸೋಮಶೇಖರ ಪೂಜಾರಿ, ಭಾಗಮ್ಮ ಹೊರಹುಣಚಿ, ಮಮತಾ ನಾಟೀಕಾರ, ಕಮಲ ಕಟ್ಟಿಮನಿ, ಪೀರಪ್ಪ ಗುಳೇದ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.