ಕೆ.ಆರ್.ಪುರ: ವಿಜಿನಾಪುರ ವಾರ್ಡ್‌ನ ರಾಮಮೂರ್ತಿನಗರ ಮುಖ್ಯರಸ್ತೆಯಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಯೊಂದರ ಅಂತರ್ಜಾಲ ಸಂಪರ್ಕಕ್ಕಾಗಿ ರಾತ್ರೋರಾತ್ರಿ ರಸ್ತೆ ಅಗೆದು, ಅನಧಿಕೃತವಾಗಿ ಒಎಫ್ಸಿ ಕೇಬಲ್ ಅಳವಡಿಸಲಾಗಿದೆ.
ಮುಖ್ಯರಸ್ತೆಯನ್ನು ಮಂಗಳವಾರ ರಾತ್ರಿ ಎಲ್ಲೆಂದರಲ್ಲಿ ಅಗೆದು ಒಎಫ್ಸಿ ಕೇಬಲ್ ಅಳವಡಿಸುತ್ತಿರುವುದನ್ನು ಕಂಡ ವಿಜಿನಾಪುರ ವಾರ್ಡ್‌ನ ಪಾಲಿಕೆ ಸದಸ್ಯ ಎಸ್. ರಾಜು, ಕಾಮಗಾರಿಗೆ ಪಾಲಿಕೆಯ ಅನುಮತಿ ಪಡೆದಿರುವ ಬಗ್ಗೆ ವಿಚಾರಿಸಿದ್ದಾರೆ. ಆದರೆ ಯಾರಿಂದಲೂ ಅನುಮತಿ ಪಡೆಯದೆ ಅನಧಿಕೃತವಾಗಿ ರಸ್ತೆ ಅಗೆದು ಕೇಬಲ್ ಅಳವಡಿಸುತ್ತಿರುವ ವಿಷಯ ತಿಳಿದು, ಕಾಮಗಾರಿ ತಡೆದ ರಾಜು, ಅಲ್ಲಿ ಬಳಸುತ್ತಿದ್ದ ಕೇಬಲ್ ಹಾಗೂ ಕಾಮಗಾರಿಗೆ ಬಳಸುತ್ತಿದ್ದ ಯಂತ್ರಗಳನ್ನು ಬಿಬಿಎಂಪಿ ವಶಕ್ಕೆ ಒಪ್ಪಿಸಿದ್ದಾರೆ.
“ವಿಜಿನಾಪುರ ವ್ಯಾಪ್ತಿಯಲ್ಲಿ ಬಿಬಿಎಂಪಿ ಅನುಮತಿ ಇಲ್ಲದೇ ಎಲ್ಲೆಂದರಲ್ಲಿ ಅನಧಿಕೃತವಾಗಿ ಒಎಫ್ಸಿ ಕೇಬಲ್ ಅಳವಡಿಸುತ್ತಿದ್ದು, ಇದನ್ನು ತಡೆಯುವಂತೆ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಯಂತ್ರಗಳಿಂದ ಗುಂಡಿ ತೆಗೆದು, ಕೇಬಲ್ ಅಳವಡಿಸಿದ ನಂತರ ಆ ಗುಡಿಗಳನ್ನು ಮಣ್ಣಿನಿಂದ ಮುಚ್ಚುತ್ತಾರೆ. ಇದರಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ರಸ್ತೆಗಳು ಹಾಳಾಗುತ್ತಿವೆ. ವಾರ್ಡ್ ನಲ್ಲಿ ರಸ್ತೆ ಸರಿ ಇಲ್ಲ ಎಂದು ಸಾರ್ವಜನಿಕರು ನಮ್ಮನ್ನು ದೂರುತ್ತಾರೆ ಎಂದು ಪಾಲಿಕೆ ಸದಸ್ಯ ಎಸ್.ರಾಜು ಆರೋಪಿಸಿದ್ದಾರೆ.
“ಹೈಕೋರ್ಟ್ ಆದೇಶದಂತೆ ಪಾಲಿಕೆಯು ನಗರದಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದೆ. ಆದರೆ, ರಾಜಕೀಯ ಪ್ರಭಾವ ಹೊಂದಿರುವ ಕೆಲವರು, ಪಾಲಿಕೆಯಿಂದ ಅನುಮತಿ ಪಡೆಯದೆಯೇ ರಾತೋರಾತ್ರಿ ಅನಧಿಕೃತವಾಗಿ ಒಎಫ್ಸಿ ಕೇಬಲ್ ಅಳವಡಿಸುತ್ತಿದ್ದಾರೆ. ವಿಜಿನಾಪುರ ಕ್ಷೇತ್ರದಲ್ಲಂತೂ ಈ ಕೇಬಲ್ ಅಳವಡಿಸುವುದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ಅಕ್ರಮ ಎಸಗುತ್ತಿರುವವರನ್ನು ಪ್ರಶ್ನಿಸಲು ಅಧಿಕಾರಿಗಳಿಗೆ ಧೈರ್ಯವಿಲ್ಲ’ ಎಂದು ರಾಜು ದೂರಿದರು.
ಮಂಗಳವಾರ ರಾತ್ರಿ ವಾರ್ಡ್‌ನ ರಾಮಮೂರ್ತಿ ನಗರದ ಮುಖ್ಯ ರಸ್ತೆಯಲ್ಲಿ ಅನಧಿಕೃತವಾಗಿ ಕೇಬಲ್ ಅಳವಡಿಸುತ್ತಿದ್ದ ಏಜೆನ್ಸಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಾಮಗಾರಿ ನಡೆಸಲು ಪಾಲಿಕೆಯಿಂದ ಅನುಮತಿ ಪಡೆದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಏಜೆನ್ಸಿಗೆ ಸೂಚಿಸಲಾಗಿದೆ. ಕಾಮಗಾರಿಗೆ ಬಳಿಸುತ್ತಿದ್ದ ಯಂತ್ರಗಳನ್ನು ಜಪ್ತಿ ಮಾಡಿದ್ದು, ದಂಡ ವಸೂಲಿ ಮಾಡಲಾಗುವುದು ಎಂದು ಸಹಾಯಕ ಇಂಜಿನಿಯರ್ ಕೇಶವ್ ತಿಳಿಸಿದ್ದಾರೆ.