Advertisement

ಪ್ರಧಾನಿಗೆ ಪ್ರತಿಪಕ್ಷಗಳ ವಿಡಿಯೋ ಸಂದೇಶ

08:05 PM Aug 08, 2021 | Team Udayavani |

ನವದೆಹಲಿ: ಸಂಸತ್‌ನ ಮುಂಗಾರು ಅಧಿವೇಶನ ಮುಕ್ತಾಯಕ್ಕೆ 6 ದಿನಗಳು ಬಾಕಿ ಇರು ವಂತೆಯೇ ಪ್ರಮುಖ ಪ್ರತಿಪಕ್ಷಗಳ ನಾಯಕರು “ನಮ್ಮ ಮಾತನ್ನು ಕೇಳಿ’ ಎಂಬ ಮೂರು ನಿಮಿಷಗಳ ವಿಡಿಯೋವನ್ನು ಭಾನುವಾರ ಬಿಡುಗಡೆ ಮಾಡಿದ್ದಾರೆ.

Advertisement

ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಡೆರಿಕ್‌ ಒ ಬ್ರಿಯಾನ್‌ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ, “ಪ್ರಧಾನಿ ಮೋದಿಯವರೇ ಬನ್ನಿ, ನಮ್ಮ ಮಾತುಗಳನ್ನು ಆಲಿಸಿ’ ಎಂದು ಬರೆದುಕೊಂಡಿದ್ದಾರೆ.

ಜು.19ರಿಂದ ಅಧಿವೇಶನ ಶುರುವಾಗಿದ್ದರೂ ಸುಗಮ ಕಲಾಪ ಸಾಧ್ಯವಾಗಿಲ್ಲ. ಮೂರು ಕೃಷಿ ಕಾಯ್ದೆಗಳು ಮತ್ತು ಪೆಗಾಸಸ್‌ ವಿವಾದಕ್ಕೆ ಸಂಬಂಧಿಸಿ ಪ್ರತಿಪಕ್ಷಗಳು ಪದೇ ಪದೆ ಅಡ್ಡಿ ಮಾಡುತ್ತಿರುವುದರಿಂದಾಗಿ ಕಲಾಪ ನಡೆಯುತ್ತಿಲ್ಲ.

ಕಲಾಪದ ವೇಳೆ ರಾಜ್ಯಸಭೆಯಲ್ಲಿ ಸಂಸದರು ಪೆಗಾಸಸ್‌ ಹಾಗೂ ಕೃಷಿ ಕಾಯ್ದೆಗಳ ಕುರಿತು ಮಾತನಾಡಿರುವ ಒಂದೊಂದೇ ಅಂಶಗಳನ್ನು ಪೋಣಿಸಿ 3 ನಿಮಿಷಗಳ ವಿಡಿಯೋ ಸಿದ್ಧಪಡಿಸಲಾಗಿದೆ. “ಮಾತುಕತೆ ನಡೆಸಲು ಸರ್ಕಾರ ನಿರಾಕರಿಸಿದ ಸಂದರ್ಭದಲ್ಲಿ ಎಲ್ಲರನ್ನೂ ತಲುಪಲು ಇದೊಂದು ಹೊಸ ಸಂಪರ್ಕ ಮಾಧ್ಯಮ’ ಎಂದು ವಿಡಿಯೋ ಬಗ್ಗೆ ಒ’ ಬ್ರಿಯಾನ್‌ ಸಮರ್ಥಿಸಿಕೊಂಡಿದ್ದಾರೆ.

ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ “14 ದಿನಗಳಿಂದ ನಾವು ಚರ್ಚೆಯಾಗಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದರೂ ಅದಕ್ಕೆ ಅವಕಾಶ ಕಲ್ಪಿಸಲಾಗಿಲ್ಲ. ನೀವು ವಿಧೇಯಕಗಳಿಗೆ ಅಂಗೀಕಾರ ಪಡೆಯುತ್ತಾ ಬಂದಿದ್ದೀರಿ. ನಿಮಗೆ ಧೈರ್ಯವಿದ್ದರೆ, ಪೆಗಾಸಸ್‌ ಬಗ್ಗೆ ಚರ್ಚೆ ಮಾಡಿ’ ಎಂದು ಸವಾಲು ಹಾಕುವುದರಿಂದ ವಿಡಿಯೋ ಶುರುವಾಗುತ್ತದೆ.

Advertisement

ಇದನ್ನೂ ಓದಿ:ಆಗಸ್ಟ್ 11 ದರ್ಶನ್ ಅವರಿಗೆ ವಿಶೇಷವಾದ ದಿನ : ಸಂಭ್ರಮಕ್ಕೆ ಸಜ್ಜಾಗಿದೆ ‘ಡಿ ಬಾಸ್’ ಪಡೆ  

ಎನ್‌ಸಿಪಿ ಸಂಸದೆ ವಂದನಾ ಚವಾಣ್‌, ಆರ್‌ಜೆಡಿ ಸಂಸದ ಮನೋಜ್‌ ಕುಮಾರ್‌ ಝಾ, ಕಾಂಗ್ರೆಸ್‌ ಸಂಸದ ದೀಪೀಂದರ್‌ ಸಿಂಗ್‌ ಹೂಡಾ, ಟಿಎಂಸಿಯ ಸುಖೇಂದು ಶೇಖರ್‌ ರಾಯ್‌, ಎಸ್‌ಪಿ, ಟಿಆರ್‌ಎಸ್‌, ಡಿಎಂಕೆ, ಆಪ್‌ ಸಂಸದರು ಮಾತನಾಡುವ ದೃಶ್ಯಗಳಿವೆ.ಶಿವಸೇನೆಯ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಕ್ಕೆ ಎಷ್ಟು ಹೊಣೆಗಾರಿಕೆ ಇದೆಯೋ, ಅಷ್ಟೇ ಹೊಣೆ ಪ್ರತಿಪಕ್ಷಗಳಿಗೆ ಕೂಡಾ ಇದೆ’ ಎಂದು ಹೇಳಿದ್ದ ಅಂಶವೂ ವಿಡಿಯೋದಲ್ಲಿದೆ.

ಸಮಿತಿಯಲ್ಲಿ ಚರ್ಚೆ?
ಮಾಹಿತಿ ತಂತ್ರಜ್ಞಾನಕ್ಕಾಗಿ ಇರುವ ಸಂಸತ್‌ನ ಸ್ಥಾಯಿ ಸಮಿತಿಯ ಮುಖ್ಯಸ್ಥ, ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮಾತನಾಡಿ ಶೀಘ್ರದಲ್ಲೇ ಸ್ಥಾಯಿ ಸಮಿತಿ ಸಭೆ ನಡೆಯಲಿದೆ. ಅದರಲ್ಲಿ ಪೆಗಾಸಸ್‌ ವಿಚಾರದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಜು.28ರಂದು ನಡೆದಿದ್ದ ಸಭೆಗೆ ಅಧಿಕಾರಿಗಳು ಭಾಗವಹಿಸದಂತೆ ಸೂಚಿಸಲಾಗಿತ್ತು ಎಂದು ದೂರಿದ್ದಾರೆ.

ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಿ ಪೆಗಾಸಸ್‌ ವಿವಾದ ಇತ್ಯರ್ಥಗೊಳಿಸಬೇಕು. ಸದ್ಯ ನಡೆಯುತ್ತಿರುವ ಸಂಸತ್‌ನ ಮುಂಗಾರು ಅಧಿವೇಶನವನ್ನು ಇನ್ನಷ್ಟು ದಿನಗಳಿಗೆ ವಿಸ್ತರಿಸಬೇಕು.
-ಮನೋಜ್‌ ಝಾ, ಆರ್‌ಜೆಡಿ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next