Advertisement
ಪಾಲಿಕೆಯಿಂದ ವಿವಿಧ ರಸ್ತೆಗಳಲ್ಲಿ ನಡೆಸುತ್ತಿರುವ ವೈಟ್‌ಟಾಪಿಂಗ್ ಕಾಮಗಾರಿಯ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಇದೀಗ 3ನೇ ಹಂತದ ಕಾಮಗಾರಿ ಕೈಗೆತ್ತಿಕೊಂಡಂತೆ ನಗರದ ರಸ್ತೆಗಳಲ್ಲಿನ ದಟ್ಟಣೆ ಮತ್ತಷ್ಟು ಹೆಚ್ಚಾಗಲಿದೆ.
Related Articles
Advertisement
ಎಚ್ಚೆತ್ತುಕೊಳ್ಳದ ಅಧಿಕಾರಿಗಳು: ವೈಟ್‌ಟಾಪಿಂಗ್ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿರುವ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಕಾಮಗಾರಿ ನಡೆಯುವ ರಸ್ತೆಗಳಿಗೆ ಪರ್ಯಾಯ ರಸ್ತೆ ಗುರುತಿಸದ ಪರಿಣಾಮ ಕಾಮಗಾರಿ ಕೈಗೆತ್ತಿಕೊಂಡ ಕಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಜನರು ಕಿರಿಕಿರಿ ಅನುಭವಿಸುವಂತಾಗಿದೆ. ಪರಿಣಾಮ ಸಂಚಾರ ಪೊಲೀಸರು ಕಾಮಗಾರಿಗೆ ಅನುಮತಿ ನೀಡದೆ ಕೆಲಸ ಅರ್ಧಕ್ಕೆ ನಿಲ್ಲುವಂತಾಗಿತ್ತು.
ಆ ಬಳಿಕವೂ ಎಚ್ಚೆತ್ತುಕೊಳ್ಳದ ಪಾಲಿಕೆಯ ಅಧಿಕಾರಿಗಳು 3ನೇ ಹಂತದ ಯೋಜನೆಯಲ್ಲಿಯೂ ಒಬ್ಬರೇ ಗುತ್ತಿಗೆದಾರರಿಗೆ 8 ರಿಂದ 22 ರಸ್ತೆಗಳನ್ನು ನೀಡಲು ಮುಂದಾಗಿದ್ದು, ಇದರಿಂದ ಕಾಮಗಾರಿ ಪೂರ್ಣಗೊಳ್ಳುವುದು ವಿಳಂಬವಾಗಲಿದೆ. ಒಬ್ಬರೇ ಗುತ್ತಿಗೆದಾರರಿಗೆ ಎಲ್ಲ ಹೆಚ್ಚಿನ ರಸ್ತೆಗಳನ್ನು ನೀಡುವುದರಿಂದ ಕಾಮಗಾರಿಯೂ ವಿಳಂಬವಾಗಲಿದೆ. ಒಂದೊಮ್ಮೆ ಎಲ್ಲ ರಸ್ತೆಗಳಲ್ಲಿ ಒಮ್ಮೆಗೆ ಕಾಮಗಾರಿ ಕೈಗೆತ್ತಿಕೊಂಡರೂ ದಟ್ಟಣೆ ಸಮಸ್ಯೆ ಕಾಡಲಿದೆ.
2ನೇ ಹಂತದಲ್ಲಿ 40 ರಸ್ತೆಗಳು: ವೈಟ್‌ಟಾಪಿಂಗ್ ಕಾಮಗಾರಿಗೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ 281 ಕೋಟಿ ರೂ. ವ್ಯಯಿಸಿದರೆ, 2ನೇ ಹಂತದ ಕಾಮಗಾರಿಗೆ 642.46 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಅದರಂತೆ 2ನೇ ಹಂತದಲ್ಲಿ 40 ರಸ್ತೆ ಮತ್ತು ಜಂಕ್ಷನ್‌ಗಳನ್ನು ವೈಟ್‌ಟಾಪಿಂಗ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಈಗಾಗಲೇ ಮೊದಲ ಹಂತ ರಸ್ತೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, 2ನೇ ಹಂತದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಆರಂಭಿಸಬೇಕಿದೆ.
3ನೇ ಹಂತಕ್ಕೆ ಸಿದ್ಧತೆ: ಎರಡು ಹಂತದ ಕಾಮಗಾರಿಗಳಲ್ಲಿ ಕೆಲ ರಸ್ತೆಗಳಲ್ಲಿ ಕಾಮಗಾರಿಯೇ ಆರಂಭವಾಗಿಲ್ಲ. ಅಷ್ಟರೊಳಗೆ ಬಿಬಿಎಂಪಿ 3ನೇ ಹಂತದ ಕಾಮಗಾರಿಗೆ ಸಿದ್ಧತೆ ನಡೆಸಿದೆ. ಅದರಂತೆ 975.21 ಕೋಟಿ ರೂ. ವ್ಯಯಿಸಿ 89 ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಟೆಂಡರ್ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಆ ಮಾಸಾಂತ್ಯಕ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಮುಂದಿನ ತಿಂಗಳು ಗುತ್ತಿಗೆದಾರರನ್ನು ನೇಮಿಸಲಾಗುತ್ತದೆ. ಒಟ್ಟು 6 ಪ್ಯಾಕೇಜ್‌ನಲ್ಲಿ ಗುತ್ತಿಗೆ ನೀಡಲಾಗುತ್ತದೆ.
ಪ್ರಮುಖ ರಸ್ತೆಗಳಲ್ಲಿ ಉಂಟಾಗಲಿದೆ ಟ್ರಾಫಿಕ್: ಎರಡನೇ ಹಂತದ ಯೋಜನೆಯಂತೆ ಹೆಚ್ಚು ವಾಹನ ಸಂಚಾರವಿರುವ ರಸ್ತೆಗಳನ್ನೇ ಹೆಚ್ಚಾಗಿ ಕಾಮಗಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಮುಖವಾಗಿ, ಗೋರಿಪಾಳ್ಯ ಮುಖ್ಯರಸ್ತೆ, ಬಿನ್ನಿಮಿಲ್ ರಸ್ತೆ, ಚಂದ್ರಲೇಔಟ್ ಮುಖ್ಯರಸ್ತೆ, ಮೈಸೂರು ರಸ್ತೆ (ಕವಿಕಾವರೆಗೆ), ಹೊಸಕೆರೆಹಳ್ಳಿ ಮುಖ್ಯರಸ್ತೆ ಸೇರಿ ಇನ್ನಿತರ ಕಡೆಗಳಲ್ಲಿ ಕಾಮಗಾರಿ ನಡೆಸಲಾಗುತ್ತದೆ. ಹೀಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಒಮ್ಮೆಲೆ ಕಾಮಗಾರಿ ಆರಂಭಿಸಿದರೆ, ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲಿದೆ.
ಚಾಲ್ತಿಯಲ್ಲಿರುವ ಕಾಮಗಾರಿ ವಿವರ: ಹೊರವರ್ತುಲ ರಸ್ತೆಯ ಜ್ಞಾನಭಾರತಿಯಿಂದ ಸುಮನಹಳ್ಳಿ ಜಂಕ್ಷನ್, ತುಮಕೂರು ರಸ್ತೆಯಿಂದ ಹಳೆ ಮದ್ರಾಸ್ ರಸ್ತೆ, ನಾಗವಾರ ಹೊರವರ್ತುಲ ರಸ್ತೆ, ವಿಜಯನಗರ, ಹೊಸೂರು ರಸ್ತೆ, ಕೋರಮಂಗಲ, ಮೈಸೂರು ರಸ್ತೆಗಳಲ್ಲಿ ಕಾಮಗಾರಿ ನಡೆಸಿ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಕಾಮಗಾರಿ ಆರಂಭಿಸಲಾಗಿದೆ.