Advertisement

ಬಜತ್ತೂರು ಗ್ರಾಮವನ್ನು ಕಡಬಕ್ಕೆ ಸೇರಿಸದಂತೆ ವಿರೋಧ

03:19 PM Mar 18, 2017 | Team Udayavani |

ಉಪ್ಪಿನಂಗಡಿ : ಬಜತ್ತೂರು ಗ್ರಾಮವನ್ನು ನೂತನ ಕಡಬ ತಾಲೂಕಿಗೆ ಸೇರಿಸುವುದಕ್ಕೆ ಬಜತ್ತೂರು ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಶುಕ್ರವಾರ ಬಜತ್ತೂರು ಗ್ರಾ.ಪಂ. ಸಭಾಭವನದಲ್ಲಿ ಸಮಾಲೋಚನ ಸಭೆ ನಡೆಸಿದ ಗ್ರಾಮಸ್ಥರು, ಹೋರಾಟ ಸಮಿತಿ ರಚಿಸಿ ಮುಂದಿನ ಹೋರಾಟಕ್ಕೆ ಮುಂದಾಗಿದ್ದಾರೆ.

Advertisement

ಸಭೆಯನ್ನುದ್ದೇಶಿಸಿ  ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು ಮಾತನಾಡಿ, ಈವರೆಗೆ ಪುತ್ತೂರು ತಾಲೂಕಿನಲ್ಲಿದ್ದ ಬಜತ್ತೂರು ಗ್ರಾಮವನ್ನು ಕಡಬ ತಾಲೂಕಿಗೆ ಸೇರಿಸಿದರೆ ಇಲ್ಲಿನ ಜನತೆಗೆ ಸಂಕಷ್ಟ ಎದುರಾಗಲಿದೆ. ಆದ್ದರಿಂದ ಜಾತಿ ಭೇದ, ಪಕ್ಷ ಬೇಧ ಮರೆತು ಗ್ರಾಮಸ್ಥರೆಲ್ಲಾ ಇದರ ವಿರುದ್ಧ ಧ್ವನಿಯೆತ್ತಬೇಕು ಎಂದು ತಿಳಿಸಿದರು.

ಈಗ ಇದು ಪ್ರಸ್ತಾವನೆ ಹಂತದಲ್ಲಿದ್ದು, ಮುಂದಕ್ಕೆ ಗಜೆಟ್‌ ನೋಟಿಫಿಕೇಶನ್‌ ಆದರೆ ಈ ಹೋರಾಟದಲ್ಲಿ ಜಯ ನಮ್ಮದಾಗಲು ಕಷ್ಟಸಾಧ್ಯ. ಆದ್ದರಿಂದ ಇಂದಿನಿಂದಲೇ ಗ್ರಾಮಸ್ಥರೆಲ್ಲಾ ಒಂದಾಗಿ ಹೋರಾಟಕ್ಕೆ ಅಣಿಯಾಗಬೇಕು. ಬಜತ್ತೂರು ಗ್ರಾಮವನ್ನು ಪುತ್ತೂರು ತಾಲೂಕಿನಲ್ಲಿಯೇ ಉಳಿಸಿಕೊಳ್ಳುವವರೆಗೆ ನಿರಂತರ ಹೋರಾಟ ನಡೆಸಬೇಕು ಎಂದು ತಿಳಿಸಿದರು.

ಎಪಿಎಂಸಿ ನಾಮನಿರ್ದೇಶಿತ ಸದಸ್ಯ ಮಾಣಿಕ್ಯರಾಜ್‌ ಪಡಿವಾಳ್‌ ಮಾತನಾಡಿ, ರಾಜಕೀಯರಹಿತವಾದ ಹೋರಾಟ ನಮ್ಮದಾಗಿದ್ದು, ಎಲ್ಲಾ ಪಕ್ಷ, ಜಾತಿ ಧರ್ಮಗಳನ್ನೊಗೊಂಡು ಗ್ರಾಮಸ್ಥರ ಹೋರಾಟ ಸಮಿತಿಯನ್ನು ರೂಪಿಸಿ ಅದರಡಿಯಲ್ಲಿ ಹೋರಾಟ ನಡೆಸಬೇಕು. ಶಾಸಕಿಯವರನ್ನೂ ಇಲ್ಲಿಗೆ ಕರೆಸಿ, ನಮ್ಮ ಬೇಡಿಕೆಯನ್ನು ಅವರ ಮುಂದಿಡಬೇಕು ಎಂದರು.

ತಾ.ಪಂ. ಸದಸ್ಯ ಮುಕುಂದ ಗೌಡ ಬಜತ್ತೂರು ಮಾತನಾಡಿ, ನಮಗೆ ಹತ್ತಿರವಾಗಿರುವ  ಪುತ್ತೂರು ತಾಲೂಕಿನಲ್ಲಿ ಬಜತ್ತೂರು ಗ್ರಾಮವಿದ್ದಾಗ  ಸರಕಾರಿ ಕೆಲಸ ಕಾರ್ಯಗಳು ಸೇರಿದಂತೆ ಎಲ್ಲ ಕಾರ್ಯಗಳಿಗೂ ನಮಗೆ ಅನುಕೂಲವಾಗುತ್ತಿತ್ತು. ಆದರೆ ಕಡಬ ಇಲ್ಲಿಂದ ಬಹುದೂರವಿದ್ದು, ಸರಕಾರಿ ಕೆಲಸ ಕಾರ್ಯಗಳಿಗೆಂದೇ ನಾವು ಅಲ್ಲಿಗೆ ತೆರಳಬೇಕಾದ ಸ್ಥಿತಿ ಬಂದೊದಗುತ್ತದೆ. ಎಂದರು.

Advertisement

ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಾಧಾಕೃಷ್ಣ ಕುವೆಚ್ಚಾರು, ಪ್ರಮುಖರಾದ ಗೋಪಾಲಕೃಷ್ಣ ಪೊರೋಳಿ, ದೇವದಾಸ್‌ ಕನಿಯ, ಜಯಂತ ಬೆದ್ರೋಡಿ ಮಾತನಾಡಿದರು.

ಮುಂದಿನ ಹೋರಾಟದ ಬಗ್ಗೆ ಸಭೆಯಲ್ಲಿ ಸಮಗ್ರ ಚರ್ಚೆ ನಡೆದು, ಬಜತ್ತೂರು ಗ್ರಾಮವನ್ನು ಕಡಬ ತಾಲೂಕಿಗೆ ಸೇರ್ಪಡೆಗೊಳಿಸುವುದನ್ನು ಕೈಬಿಡಲಾಗಿದೆ ಎಂದು ಬಜತ್ತೂರು ಗ್ರಾ.ಪಂ.ಗೆ ಕಂದಾಯ ಇಲಾಖಾಧಿಕಾರಿಗಳಿಂದ ಲಿಖೀತ ಪತ್ರ ಬರುವವರೆಗೆ  ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ಮೊದಲ ಹಂತವಾಗಿ ಗ್ರಾಮಸ್ಥರ ಸಹಿ ಸಂಗ್ರಹ,  ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲನೆ, ಬಳಿಕ ಶಾಸಕರು, ಉಸ್ತುವಾರಿ ಸಚಿವರು, ಕಂದಾಯ ಸಚಿವರ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸುವುದು. ಬಳಿಕವೂ ಬೇಡಿಕೆ ಈಡೇರದಿದ್ದರೆ ರಸ್ತೆ ತಡೆ ಮುಂತಾದ ಉಗ್ರ ಪ್ರತಿಭಟನೆ ಹಾಗೂ ಕಾನೂನಾತ್ಮಕ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.

ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್‌ ಕುಮಾರ್‌ ಪಂರ್ದಾಜೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಸುಜಾತಾ ಎನ್‌., ಎಪಿಎಂಸಿ ಸದಸ್ಯ ಗುರುನಾಥ ಪಿ.ಎನ್‌., ಉಪ್ಪಿನಂಗಡಿ ಸಿಎ ಬ್ಯಾಂಕ್‌ ಅಧ್ಯಕ್ಷ ಯಶವಂತ ಜಿ., ನಿರ್ದೇಶಕ ಜಗದೀಶ್‌ ರಾವ್‌ ಮಣಿಕ್ಕಳ ಉಪಸ್ಥಿತರಿದ್ದರು.
 
ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಪ್ರಸಿಲ್ಲಾ ಡಿಸೋಜ, ಸೇಸಪ್ಪ ಗೌಡ, ಚಂಪಾ, ಮಾಧವ ಒರುಂಬೋಡಿ, ಆನಂದ ಕೆ.ಎಸ್‌., ರಾಜೇಶ್‌ ಪಿಜಕ್ಕಳ, ಲೀಲಾವತಿ, ತೇಜಕುಮಾರಿ, ಲೊಕೇಶ್‌ ಗೌಡ ಬಜತ್ತೂರು, ನವೀನ, ಜಯಂತ ಬೆದ್ರೋಡಿ, ಗಂಗಾಧರ ಪಿ.ಎನ್‌., ಧನಂಜಯ ಬೆದ್ರೋಡಿ, ಶಿವರಾಮ ಕಾರಂತ, ಸಿದ್ದಪ್ಪ ಗೌಡ , ಜಯವಿಠಲ, ಜಗದೀಶ್‌ ಕಿಂಡೋವು, ಕ್ಸೇವಿಯರ್‌ ಅಹಮ್ಮದ್‌ ಪಂರ್ದಾಜೆ, ಜನಾರ್ದನ ಪಂರ್ದಾಜೆ, ಸಚಿನ್‌ ಪಂರ್ದಾಜೆ, ಕುಶಾಲಪ್ಪ ಗೌಡ ಸುಳ್ಯ, ಕೃಷ್ಣಪ್ರಸಾದ್‌ ಕುವೆಚ್ಚಾರ್‌, ನಾರಾಯಣ ಪುಯಿಲ, ಉಮ್ಮರ್‌ ಕೆಮ್ಮಾರ,  ವಿಶ್ವನಾಥ ಗೌಡ ಪಿಜಕ್ಕಳ, ಓಡಿಯಪ್ಪ ಗೌಡ ಡೆಂಬಳೆಪುತ್ತು ಎಂಜಿರಡ್ಕ, ದೇರಣ್ಣ ಗೌಡ ಓಮಂದೂರು ಮತ್ತಿತರರು ಉಪಸ್ಥಿತರಿದ್ದರು.ಗಣೇಶ್‌ ಕುಲಾಲ್‌ ಸ್ವಾಗತಿಸಿದರು. ಗ್ರಾ.ಪಂ. ಸದಸ್ಯ ಗಣೇಶ್‌ ಕಿಂಡೋವು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಹೋರಾಟ ಸಮಿತಿ ರಚನೆ
ಬಜತ್ತೂರು ಗ್ರಾಮವನ್ನು ಕಡಬಕ್ಕೆ ಸೇರಿಸದಂತೆ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಅಧ್ಯಕ್ಷರಾಗಿ ಕೇಶವ ಗೌಡ ಬಜತ್ತೂರು, ಉಪಾಧ್ಯಕ್ಷರಾಗಿ ಮಾಣಿಕ್ಯರಾಜ್‌ ಪಡಿವಾಳ್‌, ಕಾರ್ಯದರ್ಶಿಯಾಗಿ ವಿಶ್ವನಾಥ ಗೌಡ ಪಿಜಕ್ಕಳ, ಕೋಶಾಧಿಕಾರಿಯಾಗಿ ಜಗದೀಶ್‌ ರಾವ್‌ ಮಣಿಕ್ಕಳ ಅವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಯಶವಂತ ಗೌಡ ಗುಂಡ್ಯ, ಪೌಲ್‌ ಡಿ’ಸೋಜ, ಗಣೇಶ್‌ ಕುಲಾಲ್‌, ಅಹ್ಮದ್‌ ಬಾವ, ಗಂಗಾಧರ ಪಿ.ಎನ್‌. ಓಡಿಯಪ್ಪ ಗೌಡ ಡೆಂಬಲೆ, ಗೋಪಾಲಕೃಷ್ಣ ಪೊರೋಳಿ, ಲೋಕೇಶ್‌ ಗೌಡ ಬಜತ್ತೂರು, ಪಿ.ಬಿ. ಉಮ್ಮರಬ್ಬ, ಜಯಂತ ಬೆದ್ರೋಡಿ, ಶಿವರಾಮ ಕಾರಂತ, ಶ್ರೀಧರ ರಾವ್‌ ಮಣಿಕ್ಕಳ, ದೇರಣ್ಣ ಓಮಂದೂರು, ಧನಂಜಯ ಬೆದ್ರೋಡಿ, ರಾಧಾಕೃಷ್ಣ ಕೆ.ಎಸ್‌., ಶ್ರೀಧರ ಗೌಡ ಮುದ್ಯ, ಮಹೇಂದ್ರ ವರ್ಮ ಮೇಲೂರು, ವಸಂತ ಗೌಡ ಪಿಜಕ್ಕಳ, ಉಮ್ಮರ್‌ ಕೆಮ್ಮಾರ, ಅನಿತಾ ಪಿಜಕ್ಕಳರನ್ನು ಹಾಗೂ ಇಲ್ಲಿನ ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳನ್ನು ಖಾಯಂ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next