Advertisement

ದೇವಸ್ಥಾನಗಳ ಸರ್ಕಾರೀಕರಣಕ್ಕೆ ವಿರೋಧ

07:19 AM Jun 04, 2019 | Team Udayavani |

ಪಣಜಿ(ಪೊಂಡಾ): ರಾಮನಾಥಿಯಲ್ಲಿ ನಡೆದ ಅಷ್ಠಮ ಅಖೀಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕೆ ಭಾರತದ 25 ರಾಜ್ಯ ಹಾಗೂ ಬಾಂಗ್ಲಾದೇಶದಿಂದ 174 ಹಿಂದುತ್ವನಿಷ್ಠ ಸಂಘಟನೆಗಳ 520ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಿದ್ದರು. ಈ ಅಧಿವೇಶನದಲ್ಲಿ ಹಿಂದೂಗಳ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮಸ್ಯೆಗಳೊಂದಿಗೆ ದೇವಸ್ಥಾನಗಳ ಸರ್ಕಾರಿಕರಣದ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಹಿಂದೂ ಜನಜಾಗೃತಿ ಸಮೀತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಚಾರುದತ್ತ ಪಿಂಗಳೆ ಮಾಹಿತಿ ನೀಡಿದರು.

Advertisement

ಪಣಜಿಯ ಮನೋಶಾಂತಿಯಲ್ಲಿ ಹಿಂದೂ ರಾಷ್ಟ್ರ ಅಧಿವೇಶನದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭಾರತ ಸಂವಿಧಾನವು ಜಾತ್ಯಾತೀತವಾಗಿದ್ದರೂ ಸರ್ಕಾರ ಹಿಂದೂಗಳ ವ್ಯವಸ್ಥಾಪನೆ ಹೇಗೆ ನೋಡಿಕೊಳ್ಳಲು ಸಾಧ್ಯ..? ಎಂದು ಸರ್ವೋಚ್ಚ ನ್ಯಾಯಾಲಯವು ಎರಡು ಸಲ ವಿಚಾರಿಸಿದೆ. ಭಾರತದಲ್ಲಿ ಕೇವಲ ಹಿಂದೂಗಳ ದೇವಸ್ಥಾನವನ್ನು ಸರ್ಕಾರೀಕರಣ ಮಾಡುವ ಸರ್ಕಾರ ಮಸೀದಿ, ಚರ್ಚ್‌ ಇತ್ಯಾದಿಗಳನ್ನು ಸರ್ಕಾರೀಕರಣ ಮಾಡಲು ಏಕೆ ಹಿಂಜರಿಯುತ್ತದೆ..? ಸರ್ಕಾರೀಕರಣ ಮಾಡಿದ ದೇವಸ್ಥಾನಗಳ ಸ್ಥಿತಿ ಭಯಾನಕವಾಗಿದೆ. ಅನೇಕ ದೇವಸ್ಥಾನಗಳ ಸಮೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ವಶಪಡಿಸಿಕೊಂಡ ದೇವಸ್ಥಾನಗಳ ಪರಂಪರೆ, ವ್ಯವಸ್ಥೆ ಇತ್ಯಾದಿಗಳಲ್ಲಿ ಹಸ್ತಕ್ಷೇಪ ಮಾಡಿ ಅದರಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಈ ಪ್ರಯತ್ನವನ್ನು ಭಕ್ತರು ಎಂದೂ ಸಹಿಸುವುದಿಲ್ಲ. ದೇವಸ್ಥಾನಕ್ಕಾಗಿ ಹಿಂದೂಗಳ ಒಂದು ವ್ಯವಸ್ಥಾಪನಾ ಸಮೀತಿ ಸ್ಥಾಪಿಸಬೇಕು, ಆ ಸಮೀತಿಯಲ್ಲಿ ನ್ಯಾಯವಾದಿಗಳು, ಧಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ನೇಮಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

ಸೆಕ್ಯುಲರ್‌ನ ತೆರೆಮರೆಯಲ್ಲಿ ಆಧುನಿಕ ಗಜನಿಯಾಗಿರುವ ಈ ಸರ್ಕಾರಿ ಪ್ರತಿನಿಧಿಗಳನ್ನು ದೇವಸ್ಥಾನದಿಂದ ಹೊರಹಾಕಿ ದೇವಸ್ಥಾನಗಳನ್ನು ಹಿಂದೂ ಸಮಾಜಕ್ಕೆ ಕೊಡುವ ಅಗತ್ಯವಿದೆ ಎಂದೂ ಅವರು ನುಡಿದರು.

ಭಾರತ ರಕ್ಷಾ ಮಂಚ್‌ನ ರಾಷ್ಟ್ರೀಯ ಕಾರ್ಯದರ್ಶಿ ಅನೀಲ್ ಧೀರ್‌, ಹಿಂದೂ ಚಾರ್ಟರ್‌ನ ರೀತು ರಾಠೊಡ್‌, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್‌ ರಾಜಹಂಸ, ಹಿಂದೂ ಜನಜಾಗೃತಿ ಸಮೀತಿಯ ರಾಷ್ಟ್ರೀಯ ವಕ್ತಾರ ರಮೇಶ್‌ ಶಿಂಧೆ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next