Advertisement

ಶಂಕಿತರ ಕ್ವಾರಂಟೈನ್‌ ಸ್ಥಾಪನೆಗೆ ವಿರೋಧ

03:20 PM Apr 18, 2020 | Suhan S |

ರಾಯಬಾಗ: ಕೋವಿಡ್ 19 ಶಂಕಿತರನ್ನು ತಾಲೂಕು ಆಡಳಿತ ಕ್ವಾರಂಟೈನ್‌ ಗಾಗಿ ತಾಲೂಕಿನ ಚಿಂಚಲಿ ಪಟ್ಟಣದ ಮಾಯಕ್ಕಾದೇವಿ ಧರ್ಮಶಾಲೆ ವಸತಿ ನಿಲಯದಲ್ಲಿ ಇಡುವುದಕ್ಕೆ ಚಿಂಚಲಿ ಪಟ್ಟಣದ ಸಾರ್ವಜನಿಕರು, ಮುಖಂಡರು ವಿರೋಧ ವ್ಯಕ್ತಪಡಿಸಿದರು.

Advertisement

ಶುಕ್ರವಾರ ಬೆಳಿಗ್ಗೆ ತಾಲೂಕಿನ ಚಿಂಚಲಿ ಪಟ್ಟಣದ ಹೃದಯ ಭಾಗದಲ್ಲಿರುವ ಮಾಯಕ್ಕಾದೇವಿ ಧರ್ಮಶಾಲೆ ವಸತಿ ನಿಲಯಕ್ಕೆ ಕೋವಿಡ್ 19  ಶಂಕಿತ ಕುಟುಂಬಗಳನ್ನು ಕ್ವಾರಂಟೈನ್‌ಗಾಗಿ ಕರೆದು ತರುವ ಸುದ್ದಿ ತಿಳಿದು ವಸತಿ ನಿಲಯದ ಮುಂದೆ ಜಮಾಯಿಸಿದ ನೂರಾರು ಸಾರ್ವಜನಿಕರು, ಮಹಿಳೆಯರು, ಮುಖಂಡರು, ಯಾವುದೇ ಕಾರಣಕ್ಕೂ ಕೋವಿಡ್ 19  ಶಂಕಿತ ವ್ಯಕ್ತಿಗಳನ್ನು ಹಾಗೂ ಕುಟುಂಬದವರನ್ನು ಕರೆತರಬಾರದೆಂದು ವಿರೋಧ ವ್ಯಕ್ತಪಡಿಸಿದರು.

ಮಾಯಕ್ಕಾದೇವಿ ದೇವಸ್ಥಾನದ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಜಿತೇಂದ್ರ ಜಾಧವ ಮಾತನಾಡಿ, ಚಿಂಚಲಿ ಪಟ್ಟಣದಲ್ಲಿ ಒಂದೂ ಕೋವಿಡ್ 19 ಪ್ರಕರಣ ದಾಖಲಾಗಿರುವುದಿಲ್ಲ. ಆದ್ದರಿಂದ ಈ ಪ್ರದೇಶ ಗ್ರೀನ್‌ ಝೋನ್‌ನಲ್ಲಿದೆ. ಕ್ವಾರಂಟೈನ್‌ಗಾಗಿ ಕೊರೊನಾ ಶಂಕಿತ ವ್ಯಕ್ತಿಗಳನ್ನು ಇಲ್ಲಿಗೆ ಕರೆತರುವುದರಿಂದ ಸುತ್ತಲಿನ ಪ್ರದೇಶದ ಜನರು ಆತಂಕಗೊಳ್ಳುವ ಸಂಭವ ಹೆಚ್ಚಿದೆ. ಅಲ್ಲದೇ ತಾಲೂಕಿನ ಸೋಂಕಿತ ಪ್ರದೇಶಗಳಲ್ಲಿಯೇ ಕ್ವಾರಂಟೈನ್‌ ಗಾಗಿ ಸಾಕಷ್ಟು ವ್ಯವಸ್ಥೆ ಇದ್ದು, ಅಲ್ಲಿಯೇ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡರು.

ಸ್ಥಳಕ್ಕೆ ರಾಯಬಾಗ ತಹಶೀಲ್ದಾರ್‌ ಚಂದ್ರಕಾಂತ ಭಜಂತ್ರಿ ಭೇಟಿ ನೀಡಿ, ರಾಯಬಾಗ ಹಾಗೂ ಕುಡಚಿಯಲ್ಲಿ ಜೀವಕ್ಕೆ ಹಾನಿಯಾಗುವಂತ ಯಾವುದೇ ರೋಗಿಗಳಿಲ್ಲ. ಆರೋಗ್ಯವಂತ ಅಮಾಯಕರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಪಾಸಿಟಿವ್‌ ಬಂದ ಸೋಂಕಿತರನ್ನು ರಾಯಬಾಗ ತಾಲೂಕಿನ್ನಲೇ ಈಡದೇ ನೇರವಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿಕೊಂಡು ಸಾರ್ವಜನಿಕರ ಮನವೊಲಿಸಲು ಪ್ರಯತ್ನಿಸಿ, ಬಳಿಕ ಪರಿಸ್ಥಿತಿಯನ್ನು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕೊನೆಗೆ ಬೇರೆ ಕಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದೆಂದು ಹೇಳಿದರು.

ಚಿಂಚಲಿ ಪಟ್ಟಣದಲ್ಲಿ ಸುಮಾರು 70 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲು ತೀರ್ಮಾನಿಸಲಾಗಿತ್ತು. ಆದರೆ ಸ್ಥಳೀಯರ ವಿರೋಧದಿಂದಾಗಿ ಮೇಲಧಿಕಾರಿಗಳೊಂದಿಗೆ ಮಾತನಾಡಿ ಅವರನ್ನು ಹೋಮ್‌ ಕ್ವಾರಂಟೈನ್‌ದಲ್ಲಿ ಇಡಲಾಗಿದೆ. -ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್‌

Advertisement

ಧರ್ಮಶಾಲೆ ಪಟ್ಟಣದ ಮಧ್ಯ ಭಾಗದಲ್ಲಿ ಇರುವುದರಿಂದ ಇಲ್ಲಿನ ಜನರು ಭಯ ಭೀತರಾಗುತ್ತಾರೆ. ಪಟ್ಟಣದಲ್ಲಿ ಇನ್ನುವರೆಗೂ ಒಂದೂ ಪ್ರಕರಣ ಇಲ್ಲದಿರುವುದರಿಂದ ಅಧಿಕಾರಿಗಳಿಗೆ ಬೇರೆ ಕಡೆಗೆ ಕ್ವಾರಂಟೈನ್‌ ಮಾಡಲು ಮನವಿ ಮಾಡಿದ್ದಕ್ಕೆ ಸ್ಪಂದಿಸಿದ್ದಾರೆ.– ಅಂಕುಶ ಜಾಧವ, ಪಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next