ಕಲಬುರಗಿ: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರಿ ನೌಕರರ ಜೇಷ್ಠತಾ ಪಟ್ಟಿಯಲ್ಲಿ ಸಾಮಾನ್ಯ ವರ್ಗದ ಶೇ. 82ರಷ್ಟು ವರ್ಗದ ಸಿಬ್ಬಂದಿಗೆ ಆಗಿರುವ ಮುಂಬಡ್ತಿ ಅನ್ಯಾಯ ಸರಿಪಡಿಸುವಂತೆ ಹಾಗೂ ಬಡ್ತಿ ಮೀಸಲಾತಿ ಕಾಯ್ದೆ -2017ನ್ನು ಜಾರಿಗೊಳಿಸದಂತೆ ಒತ್ತಾಯಿಸಿ ಅಹಿಂಸಾ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಡ್ತಿ ಮೀಸಲಾತಿ ಸಂಬಂಧ ಸರ್ವೋಚ್ಚ ನ್ಯಾಯಾಲಯವು ಎಂ. ನಾಗರಾಜ, ಬಿ.ಕೆ.ಪವಿತ್ರ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಬಡ್ತಿ ಮೀಸಲಾತಿಯಲ್ಲಿ ಶೇ. 82ರಷ್ಟು ವರ್ಗದ ಸಿಬ್ಬಂದಿಗೆ ಆಗಿರುವ ಅನ್ಯಾಯ ಸರಿಪಡಿಸಿ ಮುಂಬಡ್ತಿ ನೀಡುವಂತೆ ಸೂಚಿಸಿದ ಅನ್ವಯ ಎಸ್‌ಸಿ ಹಾಗೂ ಎಸ್‌ಟಿ ನೌಕರರು ಅನೈತಿಕವಾಗಿ ಪಡೆದುಕೊಂಡಿರುವ ಮುಂಬಡ್ತಿಯನ್ನು ಕೈ ಬಿಡಬೇಕಾಗುತ್ತದೆ. ಆದರೆ ನ್ಯಾಯಾಲಯದ ಆದೇಶ ಧಿಕ್ಕರಿಸಿ ಶೇ. 18ರಷ್ಟು ಇರುವ ವರ್ಗದವರನ್ನು ರಕ್ಷಿಸಲು ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಅನೇಕ ಹೋರಾಟಗಳ ಮೂಲಕ ನೌಕರರ ಸಮಸ್ಯೆಗಳನ್ನು ನಿವೇದಿಸಿಕೊಳ್ಳಲಾಗಿದೆ. ಈಗಲಾದರೂ ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಸ್ವರೂಪದ ಹೋರಾಟಕ್ಕೆ ಇಳಿಯಲಾಗುವುದು. ಸರ್ಕಾರ ನಮ್ಮೊಂದಿಗೆ ಇದ್ದರೆ ನಾವು ನಿಮ್ಮೊಂದಿಗೆ ಇರುತ್ತೇವೆ ಎನ್ನುವ ಸಂದೇಶ ರವಾನಿಸಲಾಗಿದೆ. ಇದನ್ನರಿತು ಸರ್ಕಾರ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ನೌಕರರ ವಿರೋಧ ಧೋರಣೆ ಸರ್ಕಾರವೆಂದು ಪ್ರಚಾರ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರದ ವೀರಶೈವ ಕಲ್ಯಾಣ ಮಂಟಪದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಣಮಂತ (ರಾಜು) ಲೇಂಗಟಿ, ಅಹಿಂಸಾ ಒಕ್ಕೂಟದ ಅಧ್ಯಕ್ಷ ಸೂರ್ಯಕಾಂತ ಕದಂ, ಕಾರ್ಯದರ್ಶಿ ರವೀಂದ್ರ ಶಾಬಾದಿ, ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ನಾಗಪ್ಪ ಹೊನ್ನಳ್ಳಿ,
ಅಹಿಂಸಾ ಒಕ್ಕೂಟದ ಪದಾಧಿಕಾರಿಗಳಾದ ಕಾಶೀನಾಥ ಬೀದರ್‌ಕರ್, ಜಿ.ಆರ್. ಮುತ್ತಗಿ, ಆರ್.ಜಿ.ಶೆಟಗಾರ, ಚಂದ್ರಶೇಖರ ಕಕ್ಕೇರಿ, ಪ್ರಭುಲಿಂಗ ಮಹಾಗಾಂವಕರ್, ಮಹಾಂತೇಶ ಕಲಬುರಗಿ, ಶರಣಬಸಪ್ಪ ಜೋಗದ, ನಿಜಲಿಂಗಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.