Advertisement

ಸಾಗರ ಉಪ ಕಾರಾಗೃಹ ಸ್ಥಳಾಂತರಕ್ಕೆ ವಿರೋಧ

05:12 PM Aug 28, 2018 | |

ಸಾಗರ: ನಗರದ ಉಪ ಕಾರಾಗೃಹವನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿರುವುದನ್ನು ಖಂಡಿಸಿ
ನಗರದ ಉಪವಿಭಾಗೀಯ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ ಕರ್ನಾಟಕ ಸೋಷಿಯಲ್‌ ಫ್ರಂಟ್‌ ಸಂಘಟನೆ ಸಹಾಯಕ ಆಯುಕ್ತರ ಮೂಲಕ ರಾಜ್ಯ ಬಂದೀಖಾನೆ ಸಚಿವರಿಗೆ ಪುನಃ ಸಾಗರಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು.

Advertisement

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ಮಾತನಾಡಿ, ಉಪ ಕಾರಾಗೃಹವನ್ನು ಸಾಗರದಿಂದ ಶಿವಮೊಗ್ಗಕ್ಕೆ ವರ್ಗಾಯಿಸಿ ಐದು ತಿಂಗಳು ಕಳೆದಿದೆ. ಕಾರಾಗೃಹ ರಿಪೇರಿ ಹೆಸರಿನಲ್ಲಿ ಇಲ್ಲಿದ್ದ ಬಂದಿಗಳನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ. ಜೈಲು ರಿಪೇರಿಯಾಗಿದ್ದರೂ ಈತನಕ ಕೈದಿಗಳನ್ನು ಸಾಗರ ಉಪ ಕಾರಾಗೃಹಕ್ಕೆ ಸ್ಥಳಾಂತರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಸಾಗರದಲ್ಲಿದ್ದ ವಾರ್ತಾ ಇಲಾಖೆ, ಸಣ್ಣ ನೀರಾವರಿ ಇಲಾಖೆಯನ್ನು ಅಧಿಕಾರಸ್ಥರ ಒತ್ತಡದಿಂದ
ಬೇರೆಬೇರೆ ಊರುಗಳಿಗೆ ಸ್ಥಳಾಂತರಿಸಲಾಗಿತ್ತು. ಸಾಗರ ಉಪ ವಿಭಾಗದಲ್ಲಿರುವ ಕಾರಾಗೃಹವನ್ನು ಸಹ ಶಿವಮೊಗ್ಗಕ್ಕೆ ಸ್ಥಳಾಂತರಿಸುವ ಉದ್ದೇಶ ಇದರ ಹಿಂದೆ ಅಡಗಿದೆ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದು, ತಕ್ಷಣ ಉಪ ಕಾರಾಗೃಹವನ್ನು ಸಾಗರಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಸೋಶಿಯಲ್‌ ಫ್ರೆಂಟ್‌ ನಗರ ಘಟಕದ ಅಧ್ಯಕ್ಷ ಇಮ್ರಾನ್‌ ಸಾಗರ್‌ ಮಾತನಾಡಿ, ಸಾಗರದ ಉಪ ಕಾರಾಗೃಹಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಬ್ರಿಟಿಷರ ಕಾಲದಿಂದಲೂ ಈ ಕಾರಾಗೃಹ ತನ್ನದೇ ಆದ ವಿಶೇಷತೆಯನ್ನು ಕಾಯ್ದುಕೊಂಡು ಬಂದಿದೆ. ಇಂತಹ ಉಪ ಕಾರಾಗೃಹವನ್ನು ರಿಪೇರಿ ಹೆಸರಿನಲ್ಲಿ ಶಾಶ್ವತವಾಗಿ ಮುಚ್ಚುವ ಪ್ರಯತ್ನ
ನಡೆಯುತ್ತಿದೆ. ಸಾಗರ ಉಪ ಕಾರಾಗೃಹದಲ್ಲಿದ್ದ ಬಂದಿಗಳನ್ನು ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವುದರಿಂದ ಬಂದಿಗಳ ಸಂಬಂಧಿಗಳು ತಮ್ಮವರನ್ನು ಭೇಟಿಯಾಗಲು ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದರು.

ಶಿವಮೊಗ್ಗ ಬಸ್‌ ನಿಲ್ದಾಣದಿಂದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಹೋಗಲು ಆಟೋ ಚಾರ್ಜ್‌ 200ರಿಂದ 300 ರೂ. ತೆತ್ತಬೇಕಾಗಿದೆ. ಬಡಬಗ್ಗರು ಕೈದಿಗಳನ್ನು ನೋಡಲು ಹೋಗಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಸಾಗರ ಉಪ ಕಾರಾಗೃಹಕ್ಕೆ ಸಾಗರ ಸೇರಿದಂತೆ ಹೊಸನಗರ, ಸೊರಬ ತಾಲೂಕುಗಳು ಸೇರುತ್ತಿದ್ದು, ಹತ್ತಕ್ಕೂ ಹೆಚ್ಚು ನ್ಯಾಯಾಲಯ, ಪೊಲೀಸ್‌ ಠಾಣೆ ಬರುತ್ತದೆ. ಈ ಎಲ್ಲ ತಾಲೂಕಿನ ಕೈದಿಗಳ ಸಂಬಂಧಿಕರಿಗೂ ಇದರಿಂದ ತೊಂದರೆಯಾಗುತ್ತಿದೆ. ತಕ್ಷಣ ಸಾಗರ ಉಪ ಕಾರಾಗೃಹದಲ್ಲಿದ್ದ ಕೈದಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

Advertisement

ಪ್ರಜಾವಿಮೋಚನಾ ಮಾನವತಾವಾದ ಸಂಸ್ಥೆಯ ನಾಗರಾಜ ಸ್ವಾಮಿ, ಕರ್ನಾಟಕ ಸೋಶಿಯಲ್‌ ಫ್ರೆಂಟ್‌ನ ಗೌರವಾಧ್ಯಕ್ಷ ಆರೀಫ್‌, ಉಪಾಧ್ಯಕ್ಷ ರಫಿಕ್‌ ಕೊಪ್ಪ, ನಸುರುಲ್ಲಾ, ಪ್ರಧಾನ ಕಾರ್ಯದರ್ಶಿ ಅಂಕರವಳ್ಳಿ ಹನೀಫ್‌, ಇಲಿಯಾಸ್‌, ಸಫಾನ್‌, ಪ್ರಮುಖರಾದ ಪ್ರಕಾಶ್‌ ಗೌಡ, ರವಿ ಲಿಂಗನಮಕ್ಕಿ, ಸದ್ದಾಂ, ವಸೀಂ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next