Advertisement
ಹೆಚ್ಚುತ್ತಿರುವ ವಾಯು ಮಾಲಿನ್ಯ ತಗ್ಗಿಸಲು ಹಾಗೂ ಪ್ರಯಾಣಿಕರಿಗೆ ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ಅನುಕೂಲವಾಗಲೆಂದು ನಗರದ ಹೃದಯಭಾಗದಲ್ಲಿ ಸಾರ್ವಜನಿಕ ಬೈಸಿಕಲ್ ಹಂಚಿಕೆ ಯೋಜನೆಗೆ ಮಾರ್ಚ್‌ನಲ್ಲಿ ಸರ್ಕಾರ ಚಾಲನೆ ನೀಡಿದೆ. ಅದರಂತೆ ವಿಧಾನಸೌಧದ ಎದುರು ನಿಲುಗಡೆ ವ್ಯವಸ್ಥೆ ಕೂಡ ಕಲ್ಪಿಸಲಾಯಿತು. ನಗರದ ಉಳಿದ ಭಾಗಗಳಲ್ಲಿ ಬೈಸಿಕಲ್ ಸ್ಟಾಂಡ್‌ಗಳ ನಿರ್ಮಾಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಟೆಂಡರ್ ಕೂಡ ಕರೆದಿದೆ. ಬೈಸಿಕಲ್‌ಗಳ ಪೂರೈಕೆಗೆ ಅನುಮತಿಯೂ ದೊರಕಿದೆ. ಆದರೆ, ಈ ಮಧ್ಯೆ ಕೆಲ ಸದಸ್ಯರಿಂದ ಆಕ್ಷೇಪ ವ್ಯಕವಾಗಿದೆ.
Related Articles
Advertisement
ತಾಣಗಳು ಯಾಕೆ ಬೇಕು?: ಈಗಾಗಲೇ ಮೂರು ಸಾವಿರ ಬೈಸಿಕಲ್‌ಗಳು ನಗರದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಆದರೆ, ಅವುಗಳ ನಿಲುಗಡೆಗೆ ನಿರ್ದಿಷ್ಟ ವ್ಯವಸ್ಥೆ ಇಲ್ಲ. ಹಾಗಾಗಿ, ಬಳಕೆದಾರರು ಎಲ್ಲೆಂದರಲ್ಲಿ ನಿಲುಗಡೆ ಮಾಡಿ ಹೋಗುತ್ತಾರೆ. ಇದರಿಂದ ಸಮಸ್ಯೆ ಆಗುತ್ತದೆ. ತಾಣಗಳನ್ನು ನಿರ್ಮಿಸಿದಾಗ, ಬಳಕೆದಾರರು ಹತ್ತಿರದಲ್ಲಿರುವ ಕಡೆ ನಿಲುಗಡೆ ಮಾಡಲು ಅನುಕೂಲ ಆಗುತ್ತದೆ.
ಸಾರ್ವಜನಿಕ ಬೈಸಿಕಲ್‌ಗಳು ಸಾಮಾನ್ಯವಾಗಿ “ಜಿಯೊಫೆನ್ಸ್’ ತಂತ್ರಜ್ಞಾನ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಬಳಕೆದಾರರು ಬೈಸಿಕಲ್ ಪೂರೈಸಿರುವ ಕಂಪೆನಿಗಳು ಸೂಚಿಸಿರುವ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ತಮಗೆ ಹತ್ತಿರದಲ್ಲಿ ಬೈಸಿಕಲ್ ಇರುವ ಜಾಗವನ್ನು ತಿಳಿಯಬಹುದು. ಅಲ್ಲಿ ಹೋಗಿ ಕ್ಯುಆರ್ ಕೋಡ್‌ನಿಂದ ಅನ್‌ಲಾಕ್ ಮಾಡಿ, ಬೈಸಿಕಲ್ ಏರಿಹೋಗಬಹುದು. ಇವುಗಳ ಬಾಡಿಗೆ ಒಂದೊಂದು ಕಂಪನಿಯದು ಭಿನ್ನವಾಗಿದೆ. ಆದರೆ, ಪ್ರತಿ ಅರ್ಧ ಗಂಟೆಗೆ ಸರಾಸರಿ 5 ರೂ. ನಿಗದಿಪಡಿಸಲಾಗಿದೆ.
270 ನಿಲುಗಡೆ ತಾಣಗಳು: ನಗರ ಕೇಂದ್ರ ಭಾಗದಲ್ಲಿ 384 ಹಾಗೂ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಬೈಸಿಕಲ್ ನಿಲುಗಡೆ ತಾಣಗಳು ಹಾಗೂ 125 ಕಿ.ಮೀ. ಬೈಸಿಕಲ್ ಪಥ ನಿರ್ಮಿಸುವ ಗುರಿಯನ್ನು ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ನಿರ್ಧರಿಸಿದೆ. ಈ ಪೈಕಿ ಮೊದಲ ಹಂತದಲ್ಲಿ 270 ತಾಣಗಳ ನಿರ್ಮಾಣಕ್ಕೆ ಬಿಬಿಎಂಪಿ ಗುತ್ತಿಗೆ ನೀಡಿದ್ದು, 49 ಕಿ.ಮೀ. ಪ್ರತ್ಯೇಕ ಪಥ ನಿರ್ಮಿಸಲಾಗುತ್ತಿದೆ. ಒಟ್ಟಾರೆ ಗುರುತಿಸಿರುವ 270 ತಾಣಗಳಲ್ಲಿ 60ರಿಂದ 70 ಕಡೆ ಈಗಾಗಲೇ ಜಾಗ ಅಂತಿಮಗೊಂಡಿದ್ದು, 22 ಕಡೆಗಳಲ್ಲಿ ಕಾಮಗಾರಿ ಆರಂಭಗೊಂಡಿದೆ. ಶೇ. 60ರಷ್ಟು ತಾಣಗಳು 9×2 ಮೀಟರ್, ಶೇ. 30ರಷ್ಟು 18×2 ಮೀ. ಹಾಗೂ ಶೇ. 10ರಷ್ಟು ತಾಣಗಳು 36×2 ಮೀ. ಜಾಗದಲ್ಲಿ ಇವು ನಿರ್ಮಾಣಗೊಳ್ಳುತ್ತಿವೆ.
ಮೈಸೂರು ಟ್ರಿನ್ ಟ್ರಿನ್ ಮಾದರಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ “ಟ್ರಿನ್ ಟ್ರಿನ್’ ಹೆಸರಿನಲ್ಲಿ ಸಾರ್ವಜನಿಕ ಬೈಸಿಕಲ್ ಹಂಚಿಕೆ ವ್ಯವಸ್ಥೆ ಜಾರಿಗೊಳಿಸಿತು. ಅಲ್ಲಿ ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ನಗರದಲ್ಲಿ ಇದನ್ನು ಪರಿಚಯಿಸಲಾಗುತ್ತಿದೆ. ಸಮೂಹ ಸಾರಿಗೆ ಬಳಸುವ ಪ್ರಯಾಣಿಕರಿಗೆ ಇದು ಪೂರಕ ವ್ಯವಸ್ಥೆಯಾಗಿದೆ. ಉದಾಹರಣೆಗೆ ಮೆಟ್ರೋದಲ್ಲಿ ಬಂದಿಳಿದವರು, ಅಲ್ಲಿಯೇ ಇರುವ ಬೈಸಿಕಲ್ ಏರಿ ಹತ್ತಿರದಲ್ಲಿ ಕೆಲಸ ಮುಗಿಸಿಕೊಂಡು ಬರಬಹುದು. ಪರಿಸರ ಮತ್ತು ಆರೋಗ್ಯ ದೃಷ್ಟಿಯಿಂದಲೂ ಇದು ಅನುಕೂಲ.
ಕೋರಮಂಗಲ ಕಮರ್ಷಿಯಲ್ ಏರಿಯಾ. ಹೆಚ್ಚು ವಾಹನದಟ್ಟಣೆ ಇರುವ ಜಾಗ. ಇಲ್ಲಿ ಎಲ್ಲೆಂದರಲ್ಲಿ ಬೈಸಿಕಲ್‌ಗಳ ನಿಲುಗಡೆ ಸಮಸ್ಯೆಯಾಗಿ ಪರಿಣಮಿಸಿದೆ. ವೃದ್ಧರು, ಮಕ್ಕಳಿಗೆ ತುಂಬಾ ಕಿರಿಕಿರಿ ಆಗುತ್ತಿದೆ. ಆದ್ದರಿಂದ ನಾನು ಆಕ್ಷೇಪಿಸುತ್ತಿದ್ದೇನೆ. ಫುಟ್‌ಪಾತ್‌ನಲ್ಲಿ ಬೈಸಿಕಲ್ ಸ್ಟಾಂಡ್ ನಿರ್ಮಿಸಿದರೆ, ಪಾದಚಾರಿಗಳು ಹೇಗೆ ಓಡಾಡಬೇಕು? ಜನರಿಗೆ ತೊಂದರೆ ಆಗದಂತೆ ಅವರು ಎಲ್ಲಿ ಬೇಕಾದರೂ ನಿಲ್ಲಿಸಲಿ. ಅದಕ್ಕೆ ನಮ್ಮ ತಕರಾರಿಲ್ಲ.-ಎಂ. ಚಂದ್ರಪ್ಪ, ಕೋರಮಂಗಲ ವಾರ್ಡ್ ಸದಸ್ಯ ಬೈಸಿಕಲ್ ನಿಲುಗಡೆಗಾಗಿ ಗುರುತಿಸಿದ ಜಾಗಗಳ ಬಗ್ಗೆ ಕೆಲವು ಆಕ್ಷೇಪಣೆಗಳು ಬಂದಿದ್ದರಿಂದ ಮರುಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು. ನಂತರವೂ ಆಕ್ಷೇಪಣೆಗಳು ಪುನರಾವರ್ತನೆಯಾದರೆ, ಮುಖ್ಯ ಕಾರ್ಯದರ್ಶಿಗಳ ಹಂತದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
-ವಿ. ಪೊನ್ನುರಾಜ್, ಡಿಯುಎಲ್‌ಟಿ ಆಯುಕ್ತ * ವಿಜಯಕುಮಾರ್ ಚಂದರಗಿ