ಗೌರಿಬಿದನೂರು: ಅಧಿಕಾರಿಗಳ ಸಭೆಯಾಗಲಿ, ಜನಾಭಿಪ್ರಾಯವಿಲ್ಲದೇ ಏಕಾಏಕಿ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿ ಅದಕ್ಕೆ ತೊಂಡೇಬಾವಿ, ಡಿ.ಪಾಳ್ಯ, ನಾಮಗೊಂಡ್ಲು ಸೇರಿದಂತೆ ಕೆಲ ಗ್ರಾಮಗಳನ್ನು ಅದಕ್ಕೆ ಸೇರಿಸಿರುವುದು ಅಸಂವಿಧಾನಿಕವಾಗಿದೆ ಎಂದು ತೊಂಡೇಬಾವಿ ಕಾಂಗ್ರೆಸ್ ಮುಖಂಡರಾದ ಜೆ.ಕಾಂತರಾಜ್ ಆಕ್ರೋಶ ವ್ಯಕ್ತಪಡಿಸಿದರು.
ತೊಂಡೇಬಾವಿಯಲ್ಲಿ ರಸ್ತೆ ತಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವಾಗಿಘೋಷಿಸಿರುವುದು ಸ್ವಾಗತಾರ್ಹ. ಆದರೆ ತೊಂಡೇಬಾವಿ ಭಾಗದ ಕೆಲ ಗ್ರಾಪಂಗಳನ್ನು ಸೇರಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಕೆಲ ರಾಜಕೀಯ ವ್ಯಕ್ತಿಗಳು ಸ್ವಹಿತಕ್ಕಾಗಿ ಈ ಭಾಗವನ್ನು ಮಂಚೇನಹಳ್ಳಿ ಭಾಗಕ್ಕೆ ಸೇರಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದು, ಈ ಕೂಡಲೆ ಘೋಷಣೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ತೊಂಡೇಬಾವಿ ಮುಖಂಡರಾದ ಗಿರೀಶ್ ರೆಡ್ಡಿ ಮಾತನಾಡಿ, ಸ್ವಾರ್ಥಕ್ಕಾಗಿ ಕೆಲ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ, ದಿಢೀರ್ ತಾಲೂಕು ಘೋಷಣೆ ಕೇವಲ ರಾಜಕೀಯ ಗಿಮಿಕ್ ಎಂದರು.
ಗ್ರಾಪಂ ಸದಸ್ಯ ಶ್ರೀಧರ್ ರೆಡ್ಡಿ ಮಾತನಾಡಿ, ಅವೈಜಾnನಿಕ ತಾಲೂಕು ಘೋಷಣೆ ಕೈಬಿಡಬೇಕು. ಇಲ್ಲವಾದಲ್ಲಿ ರಂದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಮನವಿ ಪತ್ರವನ್ನು ತಹಶೀಲ್ದಾರ್ ಶ್ರೀನಿವಾಸ್ ಅವರಿಗೆ ನೀಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಬಿ.ಪಿ.ಕೃಷ್ಣಮೂರ್ತಿ, ಕೆ.ಎನ್.ಶಿವಾರೆಡ್ಡಿ, ರಫೀಕ್, ರಾಮಚಂದ್ರಪ್ಪ, ಶಂಕರರೆಡ್ಡಿ, ಭಾಸ್ಕರ್ ರೆಡ್ಡಿ, ವಾಸೀಂ, ಟಿ.ರಾಮಣ್ಣ, ನಾಗರಾಜ, ಅಶ್ವತ್ಥನಾರಾಯಣರೆಡ್ಡಿ ಇದ್ದರು.