Advertisement

Election: ಒಂದೇ ಚುನಾವಣೆಗೆ ವಿರೋಧ- ಕೇಂದ್ರದ ಉದ್ದೇಶಿತ ಯತ್ನಕ್ಕೆ CWC ಸಭೆ ಆಕ್ರೋಶ

01:01 AM Sep 17, 2023 | Team Udayavani |

ಹೈದರಾಬಾದ್‌/ಭೋಪಾಲ: “ಒಂದು ದೇಶ; ಒಂದು ಚುನಾವಣೆ’ ಪ್ರಸ್ತಾವ ವನ್ನು ಕಾಂಗ್ರೆಸ್‌ ಕಟುವಾಗಿ ಟೀಕಿಸಿದೆ. ಸೆ. 18ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇದನ್ನು ಖಂಡತುಂಡವಾಗಿ ವಿರೋಧಿಸಲು ಹೈದರಾಬಾದ್‌ನಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ತೀರ್ಮಾನಿಸಲಾಗಿದೆ.

Advertisement

ಜತೆಗೆ ಮುಖ್ಯ ಚುನಾವಣ ಆಯುಕ್ತರು ಮತ್ತು ಇತರ ಚುನಾವಣ ಆಯುಕ್ತರ ನೇಮಕಕ್ಕಾಗಿ ಮಂಡಿಸಲು ಉದ್ದೇಶಿಸಲಾಗಿರುವ ಮಸೂದೆ ಯನ್ನೂ ವಿರೋಧಿಸಲು ಕಾಂಗ್ರೆಸ್‌ ನಿರ್ಧರಿಸಿದೆ. “ಒಂದು ದೇಶ; ಒಂದು ಚುನಾವಣೆ’ ಪ್ರಸ್ತಾವ ಸಂವಿಧಾನದ ಮೇಲೆ ನಡೆಸುವ ದಾಳಿ ಎಂದು ಟೀಕಿಸಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಪುನಾರಚಿಸ ಲಾಗಿರುವ ಸಿಡಬ್ಲ್ಯುಸಿಯ ಮೊದಲ ಸಭೆ ಶನಿವಾರ ಹೈದರಾಬಾದ್‌ನಲ್ಲಿ ನಡೆಯಿತು. ಈ ಸಂದರ್ಭ ದೇಶದ ಹಾಲಿ ರಾಜಕೀಯ, ಆರ್ಥಿಕ, ಸಾಮಾಜಿಕ, ಮಣಿಪುರ ಬಿಕ್ಕಟ್ಟು ಸಹಿತ ಆಂತರಿಕ ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಸಲಾಗಿದೆ.

ಸಭೆಯ ಬಳಿಕ ಮಾತನಾಡಿದ ಮಾಜಿ ಸಚಿವ ಪಿ. ಚಿದಂಬರಂ, ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಚುನಾವಣ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ ಮಸೂದೆ ಅಂಗೀಕಾರ ಗೊಂಡರೆ ಚುನಾವಣ ಆಯೋಗದ ಸ್ವತಂತ್ರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಲಿದೆ. ಹೀಗಾಗಿ ಕಾಂಗ್ರೆಸ್‌ ಮಸೂದೆಯನ್ನು ವಿರೋಧಿಸಲಿದೆ ಎಂದರು.

ದೇಶದ ಅರ್ಥವ್ಯವಸ್ಥೆ ಪತನಗೊಳ್ಳಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವೇ ಕಾರಣ. ಹೀಗಾಗಿ ತನ್ನ ವೈಫ‌ಲ್ಯಗಳನ್ನು ಮುಚ್ಚಿ ಹಾಕಲು ಚುನಾ ವಣೆಯ ವಿಚಾರವನ್ನು ಮುನ್ನೆಲೆಗೆ ತಂದಿದೆ ಎಂದು ಚಿದಂಬರಂ ಹೇಳಿದರು.

Advertisement

ಹಿಂಸೆಗೆ ಕುಮ್ಮಕ್ಕು
ಸಭೆಯ ಆರಂಭದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶದ ಆಂತರಿಕ ಪರಿಸ್ಥಿತಿ ಗಂಭೀರವಾಗಿದೆ. ಮಣಿಪುರದಲ್ಲಿ ಹಿಂಸಾಚಾರ ಸಹಿತ ಪ್ರಮುಖ ಘಟನೆಗಳಿಗೆ ಬಿಜೆಪಿ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು. ಸಂಸತ್ತಿನ ವಿಶೇಷ ಅಧಿವೇಶನವನ್ನು ಟೀಕಿಸಿದ ಖರ್ಗೆ, ಕೇಂದ್ರ ಸರಕಾರವು ವಿಪಕ್ಷಗಳು ಇಲ್ಲದೆಯೇ ಅಧಿವೇಶನ ನಡೆಸಲು ಮುಂದಾಗಿದೆ ಎಂದು ದೂರಿದ್ದಾರೆ. ದೇಶದಲ್ಲಿ ಕೂಡಲೇ ಜನಗಣತಿಯ ಜತೆಗೆ ಜಾತಿ ಗಣತಿಯನ್ನೂ ಕೇಂದ್ರ ಸರಕಾರ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಮಣಿಪುರದಲ್ಲಿ ಆರಂಭವಾದ ಹಿಂಸಾಚಾರದ ಕಿಡಿ ಹರಿಯಾಣದ ನೂಹ್‌ವರೆಗೆ ಹಬ್ಬಲು ಮೋದಿ ಸರಕಾರವೇ ಕಾರಣ ಎಂದು ಆರೋಪಿಸಿದರು.

ಒಗ್ಗಟ್ಟು ಮುಖ್ಯ
ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ವಿಪಕ್ಷಗಳ ಒಕ್ಕೂಟಕ್ಕೆ ಒಗ್ಗಟ್ಟು ಪ್ರಧಾನ ಎಂದು ಪ್ರತಿಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next