ಸಾಗರ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರು ಮಾತನಾಡಿ, ಜಿಲ್ಲೆಯಲ್ಲಿ ಸಕಾಲಿಕ ಮಳೆಯಾಗದೆ ಅನೇಕ ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಗ್ರಾಮೀಣ ಭಾಗದಲ್ಲಿ ಬಿತ್ತನೆ ಕಾರ್ಯ ಸಹ ಕುಂಠಿತಗೊಂಡಿದೆ. ಪ್ರಾಣಿ ಪಕ್ಷಿಗಳು ನೀರು ಇಲ್ಲದೆ ಪರಿತಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗಕ್ಕೆ ಸಮರ್ಪಕ ಕುಡಿಯುವ ನೀರಿನ ಯೋಜನೆ ತಯಾರಿಸಬೇಕಾದ ರಾಜ್ಯ ಸರ್ಕಾರ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಅವೈಜ್ಞಾನಿಕ ಯೋಜನೆ ರೂಪಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಡಿಗೆ ಬೆಳಕು ನೀಡಲು ಈ ಭಾಗದ ಜನರು ಎರಡು ಮೂರು ಬಾರಿ ಮುಳುಗಡೆಯಾಗಿದ್ದು, ತಮ್ಮ ಜಮೀನು, ಮನೆ, ತೋಟವನ್ನು ಕಳೆದುಕೊಂಡು ಇಂದಿಗೂ ನಿರಾಶ್ರಿತರ ಜೀವನ ನಡೆಸುತ್ತಿದ್ದಾರೆ. ಈತನಕ ಮುಳುಗಡೆ ಸಂತ್ರಸ್ತರ ಪೂರ್ಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಮತ್ತೂಮ್ಮೆ ಈ ಭಾಗದ ಜನರ ಬದುಕಿಗೆ ಬರೆ ಎಳೆಯುವ ಕೆಲಸ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.
ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದು ಅವೈಜ್ಞಾನಿಕ ಯೋಜನೆಯಾಗಿದ್ದು, ಇದು ಖಂಡಿತಾ ಸಾಧ್ಯವಿಲ್ಲ. ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಶರಾವತಿ ನದಿ ಪಾತ್ರದ ಪರಿಸರ ನಾಶವಾಗುತ್ತದೆ. ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಪೈಪ್‌ಲೈನ್ ಹಾದು ಹೋಗುವ ಸ್ಥಳಗಳಲ್ಲಿ ಸಾವಿರಾರು ಎಕರೆ ಅರಣ್ಯ ನಾಶವಾಗುವ ಸಾಧ್ಯತೆ ಇದೆ. ಜತೆಗೆ ನೀರು ಮೇಲೆತ್ತಲು ವಿದ್ಯುತ್ ವ್ಯಯವಾಗುತ್ತದೆ ಎಂದು ಪ್ರತಿಭಟನಾನಿರತರು ಹೇಳಿದರು.
ಸರ್ಕಾರ ಯೋಜನೆಯಿಂದಾಗುವ ಅನಾಹುತಗಳನ್ನು ಮೊದಲು ಅಧ್ಯಯನ ನಡೆಸಲಿ. ಯಾವುದೇ ಕಾರಣಕ್ಕೂ ಈ ಯೋಜನೆ ಅನುಷ್ಠಾನಕ್ಕೆ ತರದಂತೆ ನಮ್ಮ ಸಂಘಟನೆ ಒತ್ತಾಯಿಸುತ್ತಿದೆ. ಇದು ಮಲೆನಾಡು ಜನರ ಬದುಕಿಗೆ ಶಾಪವಾಗಿ ಪರಿಣಮಿಸುವ ಎಲ್ಲ ಸಾಧ್ಯತೆ ಇದೆ. ಕೂಡಲೆ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ಪರಮೇಶ್ವರ ದೂಗೂರು, ತಾಲೂಕು ಸಂಚಾಲಕ ನಾಗರಾಜ್, ಪ್ರಮುಖರಾದ ವೆಂಕಟೇಶ್, ಅರ್ಷದ್ ಆಲಿ, ನಿಸಾರ್, ಸರೋಜ, ಹೇಮಾವತಿ, ಶಿವಣ್ಣ, ಚಂದ್ರಣ್ಣ, ಬಾಬಣ್ಣ, ಶಂಕರಪ್ಪ, ಕವಿತಾ, ರಹೀಮ್ ಹಾಜರಿದ್ದರು.