Advertisement

ರೈಲು ಮಾರ್ಗ ಬದಲಾವಣೆಗೆ ಕಲಬುರಗಿ ವಿರೋಧ

09:26 AM Mar 10, 2022 | Team Udayavani |

ಬೀದರ: ಜಿಲ್ಲೆಯ ಜನರ ಬಹು ನಿರೀಕ್ಷಿತ ಬೀದರ- ಯಶವಂತಪುರ ರೈಲನ್ನು ವಾಯಾ ಕಲಬುರಗಿ ಮಾರ್ಗವಾಗಿ ಸಂಚರಿಸಲು ರೈಲ್ವೆ ಇಲಾಖೆ ನೀಡಿದ ಹಸಿರು ನಿಶಾನೆಗೆ ನೆರೆ ಕಲಬುರಗಿ ಜಿಲ್ಲೆ ವಿರೋಧ ವ್ಯಕ್ತಪಡಿಸಿದೆ.

Advertisement

ಈ ಮಾರ್ಗ ಬದಲಾವಣೆ ಈಗ ಎರಡು ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳ ರಾಜಕೀಯ ಕಿತ್ತಾಟಕ್ಕೆ ವೇದಿಕೆಯಾಗಿದೆ. ದಶಕಗಳ ಹೋರಾಟದ ಫಲವಾಗಿ ಆರಂಭ ಗೊಂಡಿದ್ದ ಬೀದರ-ಯಶವಂತಪುರ ರೈಲು ಸದ್ಯ ಬೀದರನಿಂದ ತೆಲಂಗಾಣದ ವಿಕಾರಾಬಾದ್‌, ಕಲಬುರಗಿ ಜಿಲ್ಲೆಯ ಕೆಲವು ತಾಲೂಕುಗಳ ಮೂಲಕ ಯಶವಂತಪುರ ತಲುಪುತ್ತಿದೆ.

ಆದರೆ, ಈ ರೈಲನ್ನು ಕಲಬುರಗಿ ಜಿಲ್ಲೆ ಮೂಲಕ ಕಾರ್ಯಾಚರಣೆ ನಡೆಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದರಿಂದ ಹುಮನಾಬಾದ, ಕಮಲಾಪುರ, ಶಹಾಬಾದ ತಾಲೂಕುಗಳು, ಕಲಬುರಗಿ ಜಿಲ್ಲೆ ಜನತೆಗೆ ಅನುಕೂಲವಾಗಲಿದೆ. ಜತೆಗೆ ಹೊಸ ರೈಲ್ವೆ ಸೇವೆಗಳಿಗೂ ಈ ಮಾರ್ಗ ತೆರೆದುಕೊಂಡು ವಾಯಾ ಕಲಬುರಗಿ ಮಾರ್ಗವಾಗಿ ಇನ್ನು ಹೆಚ್ಚಿನ ರೈಲುಗಳು ಬೀದರನಿಂದ ಚಲಿಸಲು ಸಾಧ್ಯವಾಗಬಹುದೆಂಬ ನಿರೀಕ್ಷೆ ಜಿಲ್ಲೆಯ ಪ್ರಯಾಣಿಕರದ್ದಾಗಿತ್ತು.

ರೈಲು ಮಾರ್ಗ ಬದಲು, ಪರ-ವಿರೋಧ ಚರ್ಚೆ

ಬೀದರ ಜಿಲ್ಲೆಯ ಜನರ ಒತ್ತಾಸೆಯಂತೆ ಕೇಂದ್ರದ ರಸಾಯನಿಕ-ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರ ಸತತ ಪ್ರಯತ್ನದ ಫಲವಾಗಿ ಬೀದರ-ಯಶವಂತಪುರ ರೈಲು ಮಾರ್ಗ ಬದಲಾವಣೆಗೆ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಹೊಸ ಮಾರ್ಗದ ಮೂಲಕ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಆದರೆ, ಮಾರ್ಗ ಬದಲಾವಣೆಯಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿ, ಸೇಡಂ, ಚಿತ್ತಾಪುರ ತಾಲೂಕಿನ ಜನರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಅಲ್ಲಿನ ಜನ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಕಲಬುರಗಿ ಸಂಸದ ಡಾ| ಉಮೇಶ ಜಾಧವ ಮತ್ತು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ಅವರನ್ನು ಭೇಟಿ ಮಾಡಿ, ಯಾವುದೇ ಕಾರಣಕ್ಕೂ ರೈಲು ಮಾರ್ಗ ಬದಲಾಯಿಸದೇ ಯಥಾಸ್ಥಿತಿ ಕಾಪಾಡಬೇಕೆಂದು ಒತ್ತಡ ಹೇರಿದ್ದಾರೆ. ಬೇಕಾದರೆ ಕಲಬುರಗಿ ಮಾರ್ಗವಾಗಿ ಬೀದರ-ಯಶವಂತಪುರ ಮಧ್ಯೆ ಮತ್ತೊಂದು ಹೊಸ ರೈಲು ಆರಂಭಿಸಲಿ ಎಂದು ಕೇಳಿಕೊಂಡಿದ್ದಾರೆ. ರೈಲು ಮಾರ್ಗ ಬದಲಾವಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಹೆಚ್ಚಿದ್ದು, ಈ ಪ್ರಹಸನ ಇದೀಗ ಬಿಜೆಪಿಯ ಇಬ್ಬರು ಸಂಸದರ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ.

ಮಾರ್ಗ ಬದಲಾವಣೆಯಲ್ಲಿ ಏನಿದೆ?

ಬೀದರ-ಯಶವಂತಪುರ ರೈಲುಗಳು ಕಲಬುರಗಿ ಮಾರ್ಗವಾಗಿ ವಾರದಲ್ಲಿ ನಾಲ್ಕು ದಿನ ಚಲಿಸಲಿದೆ. ರೈಲು ಸಂಖ್ಯೆ: 16571 ರವಿವಾರ, ಸೊಮವಾರ, ಮಂಗಳವಾರ, ಗುರುವಾರ ಯಶವಂತಪುರದಿಂದ ವಾಯಾ ಸುಲಹಳ್ಳಿ, ವಾಡಿ, ಕಲಬುರಗಿ, ತಾಜಸುಲ್ತಾನಪುರ, ಕಮಲಾಪುರ, ಹುಮನಾಬಾದ, ಹಳ್ಳಿಖೇಡ ಮಾರ್ಗವಾಗಿ ಬೀದರಗೆ ತಲುಪಲಿದೆ. ಅದೇ ರೀತಿ ನಂ. 16572 ರೈಲು ಸೊಮವಾರ, ಮಂಗಳವಾರ, ಬುಧವಾರ, ಶುಕ್ರವಾರ ದಿನದಂದು ಬೀದರನಿಂದ ಹೊರಟು ಬಂದ ಮಾರ್ಗವಾಗಿಯೇ ಯಶವಂತಪುರ ತಲುಪಲಿದೆ.

ಬೀದರ-ಯಶವಂತಪುರ ರೈಲು (ವಾಯಾ ಕಲ್ಬುರ್ಗಿ) ಮಾರ್ಗ ಬದಲಾವಣೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ. ಉತ್ತರ ಮತ್ತು ದಕ್ಷಿಣ ಭಾರತ ನಡುವಿನ ದೂರ ಕಡಿಮೆ ಮಾಡುವ ಉದ್ದೇಶದಿಂದ ಬೀದರ-ಕಲಬುರಗಿ ರೈಲು ಮಾರ್ಗ ಮಾಡಲಾಗಿದೆ. ಈ ರೈಲು ಮಾರ್ಗ ಬದಲಾವಣೆ ಜತೆಗೆ ಹೊಸ ರೈಲ್ವೆ ಸೇವೆಗಳು ಲಭ್ಯವಾಗಿ ಬೀದರ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. -ಬಿ.ಜಿ. ಶೆಟಕಾರ, ಅಧ್ಯಕ್ಷ, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಬೀದರ

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next