Advertisement

ತೈಲ ಬೆಲೆ ಏರಿಕೆಗೆ ವಿರೋಧ 

10:55 AM Feb 04, 2018 | Team Udayavani |

ಮಹಾನಗರ: ಇಂಧನ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಹಾಗೂ ಕೇಂದ್ರ ಸರಕಾರ ಜನ ವಿರೋಧಿ ನೀತಿ ಅನುಸರಿಸು
ತ್ತಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ ವತಿಯಿಂದ ಶನಿವಾರ ಮಂಗಳೂರಿನಲ್ಲಿ ‘ಎತ್ತಿನ ಗಾಡಿ’ಯೊಂದಿಗೆ ಸೈಕಲ್‌ ಜಾಥಾ ನಡೆಯಿತು. ನಗರದ ಜ್ಯೋತಿ ಜಂಕ್ಷನ್‌ನಿಂದ ಜಿಲ್ಲಾಧಿಕಾರಿ ಕಚೇರಿ ತನಕ ನಡೆದ ಸೈಕಲ್‌ ಜಾಥಾವನ್ನು ಚಲನಚಿತ್ರ ನಟಿ ಭಾವನಾ, ಶಾಸಕ ಜೆ.ಆರ್‌. ಲೋಬೋ ಉದ್ಘಾಟಿಸಿದರು.

Advertisement

ಶಾಸಕ ಜೆ.ಆರ್‌. ಲೋಬೋ ಅವರು ಮಾತನಾಡಿ, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚುತ್ತಲೇ ಬಂದಿದ್ದು, 3 ತಿಂಗಳಲ್ಲಿ ಗಗನಕ್ಕೇರಿದೆ. ಗ್ಯಾಸ್‌ ಸಬ್ಸಿಡಿಯನ್ನು ಕೂಡ ಹಿಂದೆಗೆಯಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಇದ್ದಾಗ ವಿಪಕ್ಷ ಬಿಜೆಪಿ ಬೀದಿ ಬದಿ ಅಡುಗೆ ಮಾಡಿ ಇಂಧನ ಬೆಲೆ ಏರಿಕೆಯನ್ನು ವಿರೋಧಿ ಸಿತ್ತು. ಆದರೆ ಆಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ 140 ಡಾಲರ್‌ ಇದ್ದು, ಪೆಟ್ರೋಲ್‌ ಬೆಲೆ 50ರಿಂದ 55 ರೂ. ಗಳಷ್ಟಿತ್ತು. ಆದರೂ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದರು.

ಅದೇ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 40 ರೂ.ಗಳಿಗೆ ಕುಸಿದಿದೆ. ಆದರೆ ದೇಶದಲ್ಲಿ ಪೆಟ್ರೋಲ್‌ ಬೆಲೆ 75 ರೂ.ಗಳಿಗೇರಿಸಿದೆ ಎಂದು ಆರೋಪಿಸಿದರು.

ಮೌನಕ್ಕೆ ಶರಣಾದ ಬಿಜೆಪಿ
ಈಗ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿದಾಗ ಬಿಜೆಪಿ ತುಟಿ ಪಿಟಿಕ್ಕೆನ್ನದೆ ಮೌನಕ್ಕೆ ಶರಣಾಗಿದೆ. ಎನ್‌ಡಿಎ ಸರಕಾರ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಹಲವಾರು ಭರವಸೆಗಳನ್ನು ನೀಡಿದ್ದು, ಅವುಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾಗಿದೆ. ಇಂಧನ ತೈಲ ಬೆಲೆ ಏರಿಕೆಯಾದಾಗ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ಜಾಸ್ತಿಯಾಗಿದ್ದು, ಬಡ ಜನರಿಗೆ ಜೀವನ ಸಾಗಿಸುವುದೇ ದುಸ್ತರವಾಗಿದೆ ಎಂದು ಶಾಸಕ ಲೋಬೋ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡುತ್ತಾರೆ; ಆದರೆ ಇನ್ನೊಂದೆಡೆ ಜನರು ಇರುವ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಎನ್‌ಡಿಎ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ಉತ್ತಮ ಆಡಳಿತ ನೀಡುವಲ್ಲಿ ಅದು ಸಂಪೂರ್ಣ ವಿಫಲವಾಗಿದೆ. ಅದು ಅಧಿಕಾರದಿಂದ ಕೆಳಗಿಳಿದು ಉತ್ತಮ ಆಡಳಿತದ ಮೂಲಕ ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಅರ್ಹತೆ ಇರುವವರಿಗೆ ಅವಕಾಶ ನೀಡಲಿ ಎಂದು ಅವರು ಒತ್ತಾಯಿಸಿದರು.

Advertisement

ಜಾಥಾ ಕಾರ್ಯಕ್ರಮದಲ್ಲಿ ಕೆಲವರು ಸೈಕಲ್‌ನಲ್ಲಿ ಸಂಚರಿಸಿದರು. ಮೇಯರ್‌ ಕವಿತಾ ಸನಿಲ್‌ ಅವರೂ ಸೈಕಲ್‌ ಸವಾರಿ ನಡೆಸುತ್ತಾ ಜಾಥಾದಲ್ಲಿ ಭಾಗವಹಿಸಿದ್ದರು. ‘ಹೋರಿ ಗಾಡಿ’ಯನ್ನು ಚಲಾಯಿಸಿ ಇಂಧನ ಬೆಲೆ ಏರಿಕೆಯನ್ನು ಅಣಕಿಸಲಾಯಿತು. ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾದ ಶಾಲೆಟ್‌ ಪಿಂಟೊ, ಜಿ.ಪಂ. ಸದಸ್ಯೆ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಮಮತಾ ಡಿ.ಎಸ್‌.ಗಟ್ಟಿ ಮೊದಲಾದವರು ಸೈಕಲ್‌ ಜಾಥಾದಲ್ಲಿ ಪಾಲ್ಗೊಂಡಿದ್ದರು. ಆಹಾರ ಸಚಿವ ಯು.ಟಿ. ಖಾದರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಕೆಪಿಸಿಸಿ ಕಾರ್ಯದರ್ಶಿ ನಟಿ ಭಾವನಾ, ಲಾವಣ್ಯಾ ಬಲ್ಲಾಳ್‌, ಕೆಪಿಸಿಸಿ ಮಹಿಳಾ ವಿಭಾಗದ ಕಾರ್ಯದರ್ಶಿ ಮಮತಾ ಗಟ್ಟಿ, ಮೇಯರ್‌ ಕವಿತಾ ಸನಿಲ್‌ ಅವರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next