Advertisement

ಕೊಪ್ಪಳಕರವಾಡಿಯಲ್ಲಿ ಕ್ವಾರಂಟೈನ್‌ ಕೇಂದ್ರಕ್ಕೆ ವಿರೋಧ

08:29 AM May 18, 2020 | Lakshmi GovindaRaj |

ಕುಮಟಾ: ಜನವಸತಿ ಪ್ರದೇಶವಾದ ಪಟ್ಟಣದ ಕೊಪ್ಪಳಕರವಾಡಿಯ ದೇವರಾಜ ಅರಸು ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್‌ ಕೇಂದ್ರ ತೆರೆದಿರುವುದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.  ಕೊರೊನಾ ಹರಡುವುದನ್ನು ತಡೆಯಲು ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಪರ ಜಿಲ್ಲೆ ಅಥವಾ ರಾಜ್ಯಗಳಿಂದ ಆಗಮಿಸುವವರು 14 ದಿನ ಕ್ವಾರಂಟೈನ್‌ನಲ್ಲಿರುವುದು  ಕಡ್ಡಾಯವಾಗಿದೆ.

Advertisement

ಅದರಂತೆ ತಾಲೂಕು ಆಡಳಿತ ಸರ್ಕಾರಿ  ಕಟ್ಟಡಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಟ್ಟಡಗಳನ್ನು ಕ್ವಾರಂಟೈನ್‌ ಕೇಂದ್ರವನ್ನಾಗಿಸಿದೆ. ಅದರಂತೆ ಪಟ್ಟಣದ ಕೊಪ್ಪಳಕರವಾಡಿಯ ದೇವರಾಜ ಅರಸು ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ  ನಿಲಯದಲ್ಲಿ ತೆರೆಯಲಾದ  ಕ್ವಾರಂಟೈನ್‌ ಕೇಂದ್ರಕ್ಕೆ ಸ್ಥಳೀಯರ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕೊಪ್ಪಳಕರವಾಡಿಯ ವಸತಿ ನಿಲಯವು ಜನವಸತಿ ಪ್ರದೇಶದಲ್ಲಿದೆ.

ಸರಿ ಸುಮಾರು 500 ಮನೆಗಳಿವೆ. 2 ಸಾವಿರಕ್ಕೂ ಅಧಿಕ  ಜನಸಂಖ್ಯೆಯಿದೆ. ಇಂಥ ಪ್ರದೇಶದಲ್ಲಿ ಕ್ವಾರಂಟೈನ್‌ ಕೇಂದ್ರ ಸ್ಥಾಪಿಸುವ ಮೊದಲು ಸ್ಥಳೀಯರ ಅಭಿಪ್ರಾಯ ಕೇಳಲಿಲ್ಲ. ಈ ಭಾಗದಲ್ಲಿ ಬಹುತೇಕರು ಬಡ ಮತ್ತು ಹಿಂದುಳಿದ ವರ್ಗದವರಾಗಿದ್ದಾರೆ. ದಿನನಿತ್ಯ ದುಡಿದು ಜೀವನ ಸಾಗಿಸುವ ಈ ಭಾಗದ ಜನರು ಇತ್ತೀಚೆಗಷ್ಟೆ  ಕೆಲಸಕ್ಕೆ ಹೋಗಲು ಆರಂಭಿಸಿದ್ದಾರೆ. ಕ್ವಾರಂಟೈನ್‌ ಕೇಂದ್ರದಲ್ಲಿರುವವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ, ಸ್ಥಳೀಯರಲ್ಲಿ ಆತಂಕ ಉಂಟಾಗುತ್ತದೆ.

ಅಲ್ಲದೇ ಈ ಭಾಗವನ್ನು ಸೀಲ್‌ಡೌನ್‌ ಮಾಡುವುದರಿಂದ ಸ್ಥಳೀಯರು ಕೆಲಸಕ್ಕೆ  ಹೋಗಲಾಗದೇ ತೀವ್ರ ಸಂಕಷ್ಟಕ್ಕೊಳಗಾಗುತ್ತಾರೆ. ಹಾಗಾಗಿ ಕ್ವಾರಂಟೈನ್‌ ಕೇಂದ್ರವನ್ನು ಗ್ರಾಮೀಣ ಭಾಗದಲ್ಲಿ ಅಥವಾ ಜನವಸತಿ ಪ್ರದೇಶದಿಂದ ದೂರದಲ್ಲಿ ಸ್ಥಾಪಿಸುವುದು ಉತ್ತಮ ಎಂಬ ಅಭಿಪ್ರಾಯವನ್ನು ಕೊಪ್ಪಳಕರವಾಡಿಯ  ಸ್ಥಳೀಯರಾದ ರಾಜು ನಾಯ್ಕ ಸೇರಿದಂತೆ ಇತರರು ವ್ಯಕ್ತಪಡಿಸಿದರು. ಕ್ವಾರಂಟೈನ್‌ ಕೇಂದ್ರವನ್ನು ಶೀಘ್ರದಲ್ಲೇ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next