Advertisement
ರಾಜ್ಯದಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸುಮಾರು 6.98 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದು, 36 ಲಕ್ಷ ಪತ್ರಿಕೆಗಳ ಮೌಲ್ಯಮಾಪನ ನಡೆಯಬೇಕಿದೆ. ವಾರ್ಷಿಕ ಪರೀಕ್ಷೆ-1 ಪೂರ್ಣಗೊಳಿಸಿ ಮೌಲ್ಯಮಾಪನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ನಡೆಸಿ ವಾರ್ಷಿಕ ಪರೀಕ್ಷೆ-2ಕ್ಕೆ ತಯಾರಿ ನಡೆಸುವುದು ಮತ್ತು ಚುನಾವಣ ಪ್ರಕ್ರಿಯೆಯಲ್ಲಿ ಉಪನ್ಯಾಸಕರು ಪಾಲ್ಗೊಳ್ಳುವುದರಿಂದ ಚುನಾವಣ ಕೆಲಸಗಳು ಆರಂಭಗೊಳ್ಳುವ ಮುಂಚಿತವಾಗಿ ಮೌಲ್ಯಮಾಪನ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂಬುದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ)ಯ ಆಶಯ. ಅದ ರಂತೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ಮತ್ತು ಐಚ್ಛಿಕ ಕನ್ನಡ ವಿಷಯಗಳ ಮೌಲ್ಯಮಾಪನಕ್ಕೆ ಉಪ ಮುಖ್ಯ ಮೌಲ್ಯಮಾಪಕರು ಮಾ. 23ರಂದು ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ಕೆಎಸ್‌ಇಎಬಿ ಸೂಚಿಸಿದೆ.
ಕೆಎಸ್‌ಇಎಬಿಯ ಎಪ್ರಿಲ್ 8ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವ ಗುರಿ ಇಟ್ಟುಕೊಂಡಿದೆ. ಹಾಗೆಯೇ ಎಪ್ರಿಲ್ 24ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಅನ್ನು ಪ್ರಾರಂಭಿಸುವ ಕರಡು ವೇಳಾಪಟ್ಟಿ ಸಿದ್ಧವಾಗಿತ್ತು. ಆದರೆ ಎಪ್ರಿಲ್ 26ಕ್ಕೆ ರಾಜ್ಯದಲ್ಲಿ ಮೊದಲ ಸುತ್ತಿನ ಚುನಾವಣೆ ನಡೆಯಲಿರುವುದರಿಂದ ಕರಡು ವೇಳಾಪಟ್ಟಿ ಬದಲಾವಣೆ ಅನಿವಾರ್ಯತೆಯಿದೆ. ವಾರ್ಷಿಕ ಪರೀಕ್ಷೆ-2 ಪ್ರಾರಂಭದ ದಿನಾಂಕ ಮುಂದೂಡುವ ಸಾಧ್ಯತೆಯಿರುವುದರಿಂದ ಮೌಲ್ಯಮಾಪನವನ್ನು ಸ್ವಲ್ಪ ತಡ ಮಾಡಿ, ಫಲಿತಾಂಶದ ದಿನವನ್ನು ಸ್ವಲ್ಪ ಮುಂದೂಡುವ ಬಗ್ಗೆಯೂ ಚರ್ಚೆ ನಡೆದಿದೆ.
Related Articles
ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಯನ್ನು ಕೆಎಸ್‌ಇಎಬಿಯಿಂದ ಹಿಂದೆಗೆದುಕೊಂಡು ಪದವಿಪೂರ್ವ ಶಿಕ್ಷಣ ಇಲಾಖೆಗೆ ನೀಡಬೇಕು. ಪಪೂ ಕಾಲೇಜಿನ ಉಪ ನಿರ್ದೇಶಕರ ಜವಾಬ್ದಾರಿಯನ್ನು ಜಿಪಂ ಸಿಇಒಗಳಿಂದ ಹಿಂಪಡೆದುಕೊಳ್ಳಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಉಪನ್ಯಾಸಕರ ಸಂಘ ಚಿಂತನೆ ನಡೆಸಿತ್ತು. ಈಗ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಮೌಲ್ಯಮಾಪನ ಬಹಿಷ್ಕಾರದ ತೀರ್ಮಾನದಿಂದ ಹಿಂದೆ ಸರಿಯಲು ಸಂಘ ನಿರ್ಧರಿಸಿದೆ.
Advertisement
ಮಾ.23ರಂದು ಮೊದಲ ಹಂತ ಮತ್ತು ಮಾ. 25ರಂದು ಎರಡನೇ ಹಂತದ ಮೌಲ್ಯಮಾಪನ ಆರಂಭಗೊಳ್ಳಲಿದೆ. ಪರೀಕ್ಷಾ ಕೇಂದ್ರ ಮತ್ತು ಮೌಲ್ಯಮಾಪಕರ ಸಂಖ್ಯೆ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಆದಷ್ಟು ತ್ವರಿತವಾಗಿ ಫಲಿತಾಂಶ ನೀಡುವುದು ನಮ್ಮ ಉದ್ದೇಶ.-ಎಚ್.ಎನ್.ಗೋಪಾಲಕೃಷ್ಣ, ನಿರ್ದೇಶಕ, ಕೆಎಸ್‌ಇಎಬಿ -ಎನ್.ಎಸ್.ರಾಕೇಶ್