Advertisement

ಹೊಸ ದರ ನೀತಿಗೆ ವಿರೋಧ

10:41 AM Jan 24, 2019 | Team Udayavani |

ಚಿತ್ರದುರ್ಗ: ಕೇಂದ್ರ ಸರ್ಕಾರದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ (ಟ್ರಾಯ್‌) ಫೆಬ್ರವರಿ 1ರಿಂದ ದೇಶಾದ್ಯಂತ ಜಾರಿಗೊಳಿಸಲು ಉದ್ದೇಶಿಸಿರುವ ಕೇಬಲ್‌ ಟಿವಿ ಹೊಸ ದರ ನೀತಿ ವಿರೋಧಿಸಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜ. 24ರಂದು ಕೇಬಲ್‌ ಪ್ರಸಾರ ಬಂದ್‌ ನಡೆಸಲು ತೀರ್ಮಾನಿಸಿದರು.

Advertisement

ಇಡೀ ದಿನ ಮನೆಗಳಲ್ಲಿನ ಟಿವಿ ಸೆಟ್ ಬ್ಲಾಕ್‌ ಔಟ್ ಆಗಲಿವೆ. ಚಿತ್ರದುರ್ಗದ ಚಂದ್ರವಳ್ಳಿಯ ತೋಟದ ಬಳಿ ಸಭೆ ಸೇರಿದ ಜಿಲ್ಲಾ ಕೇಬಲ್‌ ಟಿವಿ ಆಪರೇಟರ್‌ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ರಾಜ್ಯದ ಕೇಬಲ್‌ ಟಿ.ವಿ. ಆಪರೇಟರ್‌ ಸಂಘವು ಕರೆಕೊಟ್ಟಿರುವ ಒಂದು ದಿನದ ಬಂದ್‌ಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವು ರಾಜ್ಯಗಳಲ್ಲಿಯೂ ಕೇಬಲ್‌ ಟಿವಿ ಬಂದ್‌ ಆಗಲಿವೆ ಎಂದು ಸಲಹಾ ಸಮಿತಿಯ ಮಧು ಚಿಕ್ಕಂದವಾಡಿ ಹೇಳಿದರು.

ಯಾವುದೇ ಕಾಯ್ದೆ ನಾಗರಿಕರಿಗೆ ಅನುಕೂಲ ಮಾಡಿಕೊಡುವಂತಿರಬೇಕು. ಆದರೆ ಹೊಸದಾಗಿ ಕೇಂದ್ರ ಸರ್ಕಾರದ ಟ್ರಾಯ್‌ ತರುತ್ತಿರುವ ಕೇಬಲ್‌ ಟಿ.ವಿ ಕಾನೂನುಗಳು ನಾಗರಿಕರಿಗೆ ಹೊರೆಯಾಗುತ್ತಿವೆ. ಪ್ರಸ್ತುತ ಗ್ರಾಮಾಂತರ ಪ್ರದೇಶಗಳಲ್ಲಿ 150 ಹಾಗೂ ನಗರ ಪ್ರದೇಶಗಳಲ್ಲಿ 200 ರೂ.ಮಾಸಿಕ ಹಣಕ್ಕೆ ಸುಮಾರು 300ಕ್ಕೂ ಹೆಚ್ಚು ಚಾನಲ್‌ಗ‌ಳನ್ನು ಕಳೆದ ಹತ್ತಾರು ವರ್ಷಗಳಿಂದ ನೀಡುತ್ತಾ ಬರಲಾಗುತ್ತಿದೆ. ಇದೀಗ ಜಾರಿಗೊಳ್ಳುತ್ತಿರುವ ಕಾನೂನಿನಿಂದ ಪ್ರೇಕ್ಷಕರಿಗೆ ಹೊರೆಬೀಳಲಿದ್ದು ಅವರ ಮನರಂಜನೆ ಹಕ್ಕನ್ನೂ ಕಿತ್ತುಕೊಳ್ಳುವಂತಹ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಹೊಸ ಕಾನೂನಿನ ಅನ್ವಯ ಪ್ರತಿ ಗ್ರಾಹಕರು ಕಡ್ಡಾಯವಾಗಿ ಬೇಸಿಕ್‌ ದರ 130 ರೂ. ಮತ್ತು ಶೇ.18 ರಷ್ಟು ಜಿಎಸ್‌ಟಿ ನೀಡಬೇಕು. ಇದರಲ್ಲಿ ದೂರದರ್ಶನದ ಚಾನಲ್‌ಗ‌ಳು ಸೇರಿದಂತೆ ಉಚಿತವಾಗಿ ಲಭ್ಯವಿರುವ 100 ಚಾನಲ್‌ಗ‌ಳು ದೊರೆಯುತ್ತವೆ. ಇದರಲ್ಲಿ ಜನಪ್ರಿಯ ಚಾನಲ್‌ಗ‌ಳು ಸೇರಿರುವುದಿಲ್ಲ. ಗ್ರಾಹಕರು ತಮಗೆ ಬೇಕಾದ ಜನಪ್ರಿಯ ಚಾನಲ್‌ಗ‌ಳನ್ನು ನೋಡಬೇಕೆಂದರೆ ಸರ್ಕಾರವು ಇದೀಗ ನಿಗದಿಪಡಿಸುತ್ತಿರುವ ಹೆಚ್ಚುವರಿ ಹಣ ಹಾಗೂ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಅಪೇಕ್ಷಿಸುವ ಚಾನೆಲ್‌ ಗಳನ್ನು ಗ್ರಾಹಕರು ತಿಂಗಳೊಂದಕ್ಕೆ ಕನಿಷ್ಠ 900 ರಿಂದ 980 ರೂ.ಗಳನ್ನು ಭರಿಸಬೇಕಾಗುತ್ತದೆ ಎಂದು ತಿಳಿಸಿದರು.

ಈ ಹಣದಲ್ಲಿ ಬಹುತೇಕ ಭಾಗ ಬ್ರಾಡ್‌ಕಾಸ್ಟರ್‌ಗಳಿಗೆ ಮತ್ತು ಎಂ.ಎಸ್‌.ಓ.ಗಳಿಗೆ ಹೋಗಲಿದ್ದು, ತಳಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೇಬಲ್‌ ಆಪರೇಟರ್‌ಗಳಿಗೆ ಅನ್ಯಾಯವಾಗಲಿದೆ. ಟ್ರಾಯ್‌ ನಿರೂಪಿಸಿರುವ ನೀತಿಯಂತೆ ಒಂದೊಂದು ಎಂಎಸ್‌ಓಗಳು ಒಂದೊಂದು ಬಗೆಯ ದರಪಟ್ಟಿ ಜಾರಿಗೆ ತಂದು ಗ್ರಾಹಕರನ್ನು ಗೊಂದಲಕ್ಕೆ ಬೀಳಿಸಿವೆ ಎಂದು ಆತಂಕ ವ್ಯಕ್ತ ಪಡಿಸಿದರು.

Advertisement

ಟ್ರಾಯ್‌ ಗ್ರಾಹಕರು ಆಯ್ಕೆ ಮಾಡಿಕೊಳ್ಳುವ ಚಾನಲ್‌ಗ‌ಳಿಗಷ್ಟೇ ಹಣ ಪಾವತಿ ಮಾಡಬೇಕಾಗಿರುವುದರಿಂದ ಕೇಬಲ್‌ ದರಗಳು ಕಡಿಮೆಯಾಗುತ್ತವೆ ಎಂದೇಳುತ್ತಿದೆ. ಗ್ರಾಮಾಂತರ ಮತ್ತು ಚಿಕ್ಕಪುಟ್ಟ ನಗರ ಪಟ್ಟಣಗಳಲ್ಲಿ ಈಗಿರುವ ದರಗಳಿಗೆ ಹೋಲಿಸಿದರೆ ಸರ್ಕಾರ ನಿಗದಿಪಡಿಸುತ್ತಿರುವ ದರಗಳು ಹೇಗೆ ಕಡಿಮೆಯಾಗುತ್ತವೆ ಎಂಬುದನ್ನು ಟ್ರಾಯ್‌ ವಿವರಿಸಿಬೇಕಾಗಿದೆ ಎಂದರು.

ಕೇಬಲ್‌ ಉದ್ಯಮ ಅಳಿವಿನಂಚಿಗೆ ತಂದು ನಿಲ್ಲಿಸಿರುವ ಕೇಂದ್ರ ಸರ್ಕಾರದ ಹೊಸ ಕಾಯ್ದೆ ಕೈಬಿಟ್ಟು ಮೊದಲಿನ ವ್ಯವಸ್ಥೆ ಉಳಿಸಿಕೊಂಡು ಹೋಗಬೇಕು. ಉದ್ದಿಮೆದಾರರನ್ನು ಪ್ರೋತ್ಸಾಹಿಸಿ ಟ್ರಾಯ್‌ ನಿಬಂಧನೆಗಳನ್ನು ಕೈಬಿಡಬೇಕು. ಇದಕ್ಕೆ ಆಗ್ರಹಿಸಿ ಸಾಂಕೇತಿಕವಾಗಿ ರಾಷ್ಟ್ರದಾದ್ಯಂತ ಕೇಬಲ್‌ ಟಿ.ವಿ. ಬಂದ್‌ ನಡೆಸಲಾಗುತ್ತಿದೆ ಎಂದರು.

ಚಿತ್ರದುರ್ಗದ ಮಹಮದ್‌ ಮನ್ಸೂರ್‌, ಭರಮಸಾಗರದ ಅಶೋಕ್‌, ಚಿಕ್ಕಜಾಜೂರಿನ ಧನಂಜಯ್‌, ಹೊಳಲ್ಕೆರೆಯ ರಾಜು ಇತರರು ಮಾತನಾಡಿದರು. ಜಿಲ್ಲೆಯ ನೂರಾರು ಕೇಬಲ್‌ ಆಪರೇಟರ್‌ಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next