Advertisement
ಕ್ಷೇತ್ರ ವಂಚಿತ ಹೊಸನಗರ ತಾಲೂಕಿನಿಂದ ಎಪಿಎಂಸಿಯನ್ನು ತೆಗೆದರೆ ರೈತರಿಗೆ ಭಾರೀ ಹಿನ್ನಡೆಯಾಗಲಿದೆ. ಅಲ್ಲದೆ ಮಾರುಕಟ್ಟೆ ವ್ಯವಸ್ಥೆಗೆ ಪರದಾಡಬೇಕಾಗುತ್ತದೆ. ಅಲ್ಲದೆ ಉತ್ತಮ ವಹಿವಾಟು ದಾಖಲಿಸಿದ್ದರೂ ಕೂಡ ಎಪಿಎಂಸಿಯನ್ನು ಮುಚ್ಚುವ ಅಗತ್ಯವಿದೆಯೇ ಎಂಬ ಪ್ರಶ್ನೆ ಕೂಡ ಕೇಳಿ ಬಂದಿದೆ.
Related Articles
Advertisement
ಎಪಿಎಂಸಿ ವಿಲೀನ ಪ್ರಕ್ರಿಯೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪಟ್ಟಣದಲ್ಲಿ ಸಭೆ ನಡೆಸಿದ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿಗಳಾದ ರಾಜನಂದಿನಿ ಮತ್ತು ಕಲಗೋಡು ರತ್ನಾಕರ್ ಮೇ 24 ರಂದು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಬಿಜೆಪಿ ರ್ಕಾರದ ಕ್ರಮವನ್ನು ಖಂಡಿಸಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ತಾಲೂಕು ರೈತಸಂಘ ಖಂಡನೆ
ಸಕಾರಣವಿಲ್ಲದೆ ಎಪಿಎಂಸಿಯನ್ನು ಸಾಗರ ಮಾರುಕಟ್ಟೆಗೆ ಸೇರಿಸುತ್ತಿರುವ ಹಿಂದೆ ಷಡ್ಯಂತ್ರವಿದೆ. ಇದನ್ನು ಸಹಿಸಲಾಗುವುದಿಲ್ಲ. ಸರ್ಕಾರ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಮುಳುಗಡೆ ಸಮಸ್ಯೆ, ಕ್ಷೇತ್ರ ವಂಚಿತ ಹೊಸನಗರಕ್ಕೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಬಾರದು. ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ತಾಲೂಕು ರೈತಸಂಘದ ಅಧ್ಯಕ್ಷ ಜಿ.ವಿ.ರವೀಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೋಧ ಫಾರ್ಮರ್ ಖಂಡನೆ
ಎಪಿಎಂಸಿ ಮೂಲಕ ವ್ಯಾಪಾರ ಆದರೆ ಮಾತ್ರ ಇಲ್ಲಿಯ ರೈತರಿಗೆ ಉತ್ತಮ ಧಾರಣೆ ಜೊತೆಗೆ ನ್ಯಾಯ ಸಿಗುತ್ತದೆ. ಎಪಿಎಂಸಿ ತೆಗೆದಲ್ಲಿ ದಳ್ಳಾಲಿ ಹಾವಳಿ ಹೆಚ್ಚುತ್ತದೆ. ಮಾತ್ರವಲ್ಲ, ಕಳ್ಳ ವ್ಯಾಪಾರಕ್ಕೆ ಕಾರಣವಾಗುತ್ತದೆ. ಅಡಕೆ ಮಾತ್ರವಲ್ಲದೆ ಇತರೆ ಬೆಳೆಗಳಿಗೂ ಎಪಿಎಂಸಿ ನೇರವಾದ ಮಾರುಕಟ್ಟೆಯಾಗಿದೆ. ಹೊಸನಗರ ತಾಲೂಕಿನ ಎಪಿಎಂಸಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿಬೇಕು. ಅದು ಬಿಟ್ಟು ತೆಗೆಯಲು ಹೊರಟಿರುವುದು ಮೂರ್ಖತನ ಮಾತ್ರವಲ್ಲ, ಹಾಸ್ಯಾಸ್ಪದ ಎಂದು ನಿಟ್ಟೂರು ಶೋಧ ಫಾರ್ಮನ ಪುರುಷೋತ್ತಮ ಬೆಳ್ಳಕ್ಕ ಖಂಡಿಸಿದ್ದಾರೆ.
ಆಕ್ಷೇಪಣೆ ಸಲ್ಲಿಕೆ
ಹೊಸನಗರ ಎಪಿಎಂಸಿಯನ್ನು ಸಾಗರ ಮಾರುಕಟ್ಟೆಗೆ ವಿಲೀನಗೊಳಿಸುತ್ತಿರುವುದನ್ನು ಪ್ರಶ್ನಿಸಿ ಆಕ್ಷೇಪಣೆ ಸಲ್ಲಿಸಲು ಬೆಂಗಳೂರಿಗೆ ತೆರಳುತ್ತಿರುವುದಾಗಿ ಸಹಕಾರಿ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ್ ತಿಳಿಸಿದ್ದಾರೆ. ಹಲವು ವರ್ಷಗಳ ಪ್ರಯತ್ನದ ಮೂಲಕ ಅಸ್ವಿತ್ವಕ್ಕೆ ಬಂದಿರುವ ಎಪಿಎಂಸಿ ಹೊಸನಗರ ತಾಲೂಕಿಗೆ ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ವಿಲೀನಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಕಾಣದ ಕೈವಾಡ ಶಂಕೆ
ಇಲ್ಲಿಯ ಎಪಿಎಂಸಿಯನ್ನು ಸಾಗರ ಮಾರುಕಟ್ಟೆಗೆ ವಿಲೀನಗೊಳಿಸುತ್ತಿರುವ ಪ್ರಕ್ರಿಯೆ ಹಿಂದೆ ಕಾಣದ ಕೈಗಳ ಕೈವಾಡವಿದೆ. ವಿಸ್ತೀರ್ಣ ದೊಡ್ಡದಾಗಿರುವ ಮತ್ತು ಬಡ ರೈತಾಪಿ ಕುಟುಂಬಗಳೇ ಹೆಚ್ಚಿರುವ ತಾಲೂಕಿನಿಂದ ಎಪಿಎಂಸಿಯನ್ನು ತೆಗೆಯುವುದು ಸರಿಯಲ್ಲ. ಇದನ್ನು ತಡೆಯಬೇಕಾದ ಅನಿವಾರ್ಯತೆ ಇದೆ ಎಂದು ತಾಪಂ ಮಾಜಿ ಸದಸ್ಯ ಕೋಡೂರು ಚಂದ್ರಮೌಳಿ ಹೇಳಿದ್ದಾರೆ.
ಶಾಸಕರೊಂದಿಗೆ ಸಮಾಲೋಚನೆ
ಹೊಸನಗರಕ್ಕೆ ಎಪಿಎಂಸಿಯನ್ನು ವಿಶೇಷ ಪ್ರಯತ್ನದ ಮೂಲಕ ತರಲಾಗಿತ್ತು. ಮಾತ್ರವಲ್ಲ, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೀಗ ವಿಲೀನದ ಮಾತುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಶಾಸಕ ಹರತಾಳು ಹಾಲಪ್ಪ ಅವರ ಬಳಿ ನಿಯೋಗದೊಂದಿಗೆ ತೆರಳಿ ಸಮಾಲೋಚನೆ ನಡೆಸಲಾಗುವುದು. ಇಲ್ಲಿಯ ಎಪಿಎಂಸಿ ಅಗತ್ಯತೆ ಬಗ್ಗೆ ಮನವರಿಕೆ ಮಾಡಿ ಇಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಆಪ್ಸ್‌ಕೋಸ್ ನಿರ್ದೇಶಕ ಕಲ್ಯಾಣಪ್ಪ ಗೌಡ ತಿಳಿಸಿದ್ದಾರೆ.
ಉಳಿಸಿಕೊಳ್ಳುವ ಪ್ರಯತ್ನ
ಹೊಸನಗರಕ್ಕೆ ಎಪಿಎಂಸಿ ಅಗತ್ಯವಿದೆ. ಸಾಗರದೊಂದಿಗೆ ವಿಲೀನ ಬೇಡ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ ಅವರನ್ನು ಭೇಟಿ ಮಾಡಿ ಸಮಾಲೋಚಿಸುತ್ತೇವೆ. ಜೊತೆಗೆ ಶಾಸಕರು ಮತ್ತು ಸಂಸದರ ಗಮನಕ್ಕೂ ತಂದು ಸರ್ಕಾರದ ಮಟ್ಟದಲ್ಲಿ ಈ ಪ್ರಸ್ತಾಪವನ್ನು ಕೈಬಿಡುವಂತೆ ಮನವಿ ಮಾಡುತ್ತೇವೆ ಎಂದು ಅಂಬೇಡ್ಕರ್ ನಿಗಮದ ನಿರ್ದೇಶಕ ಎನ್.ಆರ್. ದೇವಾನಂದ್ ತಿಳಿಸಿದ್ದಾರೆ.