Advertisement

ಜೆಡಿಎಸ್‌ನಲ್ಲಿ ಎರಡೂ ಸ್ಥಾನ ಬಿಟ್ಟು ಕೊಡಲು ವಿರೋಧ

07:20 AM Jun 09, 2019 | Team Udayavani |

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಜೆಡಿಎಸ್‌ನಲ್ಲೂ ಚಟುವಟಿಕೆಗಳು ಗರಿಗೆದರಿವೆ. ಜೆಡಿಎಸ್‌ನ ಎರಡು ಸಚಿವ ಸ್ಥಾನವನ್ನು ಕಾಂಗ್ರೆಸ್‌ ಅಥವಾ ಪಕ್ಷೇತರರಿಗೆ ಬಿಟ್ಟು ಕೊಡಲು ವಿರೋಧವೂ ವ್ಯಕ್ತವಾಗಿದೆ.

Advertisement

ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಪುಟ ವಿಸ್ತರಣೆ ಆಗಲಿ. ಆದರೆ, ಜೆಡಿಎಸ್‌ನ ಒಂದು ಸ್ಥಾನವನ್ನು ಪಕ್ಷೇತರ ಶಾಸಕರಿಗೆ ಬಿಟ್ಟುಕೊಟ್ಟರೆ, ಮತ್ತೂಂದು ಸ್ಥಾನಕ್ಕೆ ಜೆಡಿಎಸ್‌ನವರಿಗೆ ಅವಕಾಶ ಮಾಡಿಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಬಸವರಾಜ ಹೊರಟ್ಟಿ, ಬಿ.ಎಂ.ಫಾರೂಕ್‌, ಸಿರಾ ಸತ್ಯನಾರಾಯಣ, ಎ.ಟಿ.ರಾಮಸ್ವಾಮಿ, ಎಚ್‌.ಕೆ.ಕುಮಾರಸ್ವಾಮಿ, ಕೆ.ಶ್ರೀನಿವಾಸಗೌಡ ಅವರು ಸಚಿವಾಕಾಂಕ್ಷಿಗಳಾಗಿದ್ದಾರೆ. ಎಚ್‌.ವಿಶ್ವನಾಥ್‌ ಅವರನ್ನು ಸಚಿವರನ್ನಾಗಿ ಮಾಡುವಂತೆ ಪಕ್ಷದಲ್ಲೂ ಒತ್ತಡ ಇದೆ ಎಂದು ಹೇಳಲಾಗಿದೆ.

ಇದೇ ವೇಳೆ, ಮೈಸೂರು, ಮಂಡ್ಯ, ತುಮಕೂರಿನಲ್ಲಿ ಲೋಕಸಭೆ ಚುನಾವಣೆ ಹೊಣೆಗಾರಿಕೆ ಹೊತ್ತಿದ್ದವರನ್ನು ಸಂಪುಟದಿಂದ ತೆಗೆದು ಹೊಸಬರಿಗೆ ಅವಕಾಶ ಮಾಡಿಕೊಡಿ ಎಂಬ ಬೇಡಿಕೆಯೂ ಇದೆ. ಆದರೆ, ಸಂಪುಟದಲ್ಲಿ ಹಾಲಿ ಇರುವವರನ್ನು ಕೈ ಬಿಟ್ಟು ಹೊಸಬರನ್ನು ಸೇರ್ಪಡೆ ಮಾಡಿಕೊಳ್ಳುವುದು ಸದ್ಯಕ್ಕೆ ಅನುಮಾನ.

ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲೇ ಎರಡೂವರೆ ವರ್ಷದ ನಂತರ ಪುನಾರಚನೆ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡುವ ಮಾತುಕತೆ ನಡೆದಿದೆ. ಹೀಗಾಗಿ, ಸದ್ಯಕ್ಕೆ ಖಾಲಿ ಇರುವ ಸ್ಥಾನಗಳಿಗೆ ಮಾತ್ರ ಭರ್ತಿಯಾಗಲಿದೆ ಎಂದು ಹೇಳಲಾಗಿದೆ.

Advertisement

ಜೆಡಿಎಸ್‌ನ ಕೋಟಾದಡಿ ಇರುವ ಎರಡು ಸ್ಥಾನಗಳ ಪೈಕಿ ಒಂದರಲ್ಲಾದರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆಯೂ ಇದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಆದರೆ, ಜೆಡಿಎಲ್‌ಪಿ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ತೀರ್ಮಾನ ಕೈಗೊಂಡರೂ ನಾವು ಅದಕ್ಕೆ ಬದ್ಧ ಎಂದು ಹೇಳಿರುವುದರಿಂದ ಕುಮಾರಸ್ವಾಮಿಯವರ ತೀರ್ಮಾನವೇ ಅಂತಿಮ ಎಂದು ಹೇಳಲಾಗಿದೆ.

ಸಂಪುಟ ವಿಸ್ತರಣೆ ದಿನದವರೆಗೂ ನಡೆಯುವ ಬೆಳವಣಿಗೆ ಆಧರಿಸಿ ಜೆಡಿಎಸ್‌ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಸದ್ಯಕ್ಕೆ ಒಂದು ಸ್ಥಾನವನ್ನು ಪಕ್ಷೇತರ ಶಾಸಕರೊಬ್ಬರಿಗೆ ಕೊಡುವ ಬಗ್ಗೆ ತೀರ್ಮಾನವಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next