ಶಿವಮೊಗ್ಗ: ಕೃಷಿ ಕ್ಷೇತ್ರಕ್ಕೆ ಬಂಡವಾಳ ಹೂಡಿಕೆಗಾಗಿ ಭೂ ಸುಧಾರಣೆ ಕಾಯ್ದೆ ಸೆಕ್ಷನ್ 5ಕ್ಕೆ ತಿದ್ದುಪಡಿ ಮಾಡುವುದನ್ನು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಬಲವಾಗಿ ವಿರೋಧಿಸುತ್ತದೆ. ಸರ್ಕಾರ ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಲು ಮುಂದಾಗಬಾರದು ಎಂದು ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಒತ್ತಾಯಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯ್ದೆಯನ್ನು ತಿದ್ದುಪಡಿತರುವುದರ ಮೂಲಕ ರೈತರ ಭೂಮಿಯನ್ನು ಗುತ್ತಿಗೆ ಪಡೆದು, ಅದೇ ಭೂಮಿಯನ್ನು ಕೃಷಿ ಸಂಬಂ ಧಿತ ಸಾಲ ಪಡೆಯಲು ದೊಡ್ಡ ದೊಡ್ಡ ಕಂಪನಿಗಳಿಗೆ ಅವಕಾಶ ಮಾಡುವುದು, ರಾಜ್ಯದಲ್ಲಿ ದೊಡ್ಡ ದೊಡ್ಡ ಭೂ ಮಾಲೀಕರನ್ನು ಸೃಷ್ಟಿ ಮಾಡುವ ಹುನ್ನಾರ ಅಡಗಿದೆ. ಆ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು.
ಗುತ್ತಿಗೆ ಒಡಂಬಡಿಕೆಯೊಂದು ಸಮಸ್ಯೆಗಳಾದರೆ ಅದನ್ನು ಬಗೆಹರಿಸುವುದು ತಾಲೂಕು ತಹಶೀಲ್ದಾರ್ ಅವರಿಗೆ ನೀಡಲಾಗಿದೆ. ಇದರಿಂದ ವ್ಯಾಜ್ಯಗಳು ಹಲವಾರು ವರ್ಷ ತಗಾದೆಗೆ ಒಳಗಾಗಿ ಭೂಮಿ ಹಾಳು ಬೀಳುವ ಸಾಧ್ಯತೆ ಇದೆ. ಅಲ್ಲದೆ ಉತ್ಪಾದನೆ ಕುಂಠಿತವಾಗಿ ಆಹಾರ ಉತ್ಪಾದನೆಯಲ್ಲಿ ಕುಸಿತ ಕಾಣಲಿದೆ ಎಂದರು. ರೈತರು ನ್ಯಾಯಾಲಯ ಖರ್ಚು ಭರಿಸಲಾಗದೆ ಸಾಮಾಜಿಕ ಸಮತೋಲನಕ್ಕೆ ಮತ್ತು ಗ್ರಾಮೀಣ ಬದುಕು ಬಂಡವಾಳ ಶಾಹಿಗಳ ಕಪಿಮುಷ್ಟಿಗೆ ಬೀಳುವ ಸಾಧ್ಯತೆ ದಟ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ವಿಶ್ವ ವಾಣಿಜ್ಯ ಒಪ್ಪಂದ ದಿಂದಾಗಿ ನೇರ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಇರುವುದರಿಂದ ಅದನ್ನು ಬಳಸಿಕೊಂಡು ತನ್ನ ಹಕ್ಕನ್ನು ಬೇಧಿಸಿ, ಭೂಮಿ ಹಕ್ಕು, ಬಿತ್ತನೆ ಬೀಜ, ಆಹಾರ ಸಾರ್ವಭೌಮತ್ವವನ್ನು ನಾಶಮಾಡುವ ಸಂಚು ಇದರಲ್ಲಿ ಅಡಗಿದೆ ಎಂದು ದೂರಿದರು. ನೀತಿ ಆಯೋಗದ ಸಲಹೆಯಂತೆ ಗುತ್ತಿಗೆ ಕೃಷಿಗೆ ಅವಕಾಶ ನೀಡುವುದಕ್ಕಾಗಿ ಕಾನೂನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಇದರಿಂದ ಕೃಷಿ ಉತ್ಪಾದನೆಗೆ ಹೆಚ್ಚಿನ ಬಂಡವಾಳ ಹರಿದು ಬರುತ್ತದೆ ಎಂದು ಕಾನೂನು ಸಚಿವರು ಹೇಳಿಕೆ ನೀಡಿದ್ದಾರೆ. ಹಾಗಾದರೆ ಈಗ ಕೃಷಿ ಉತ್ಪಾದನೆ ಕಡಿಮೆಯಾಗಿದೆಯೇ ಎಂದು ಪ್ರಶ್ನಿಸಿದರು.
ಈ ಒಪ್ಪಂದ ಕಾನೂನಾತ್ಮಕವಾಗುವುದರಿಂದ ಭೂಮಿ ಒಪ್ಪಂದ ರಿಜಿಸ್ಟರ್ ಆಗುತ್ತದೆ. ಒಪ್ಪಂದವನ್ನು ಬ್ಯಾಂಕ್‌ಗಳಿಗೆ ನೀಡಿ ಕಂಪನಿಯು ಕೋಟ್ಯಂತರ ರೂಪಾಯಿ ಸಾಲ ಪಡೆಯಬಹುದು. ಈಗಾಗಲೇ ಬೆಲೆ ಇಲ್ಲದೆ, ರೈತರು ಸಾಲ ಕಟ್ಟಲಾಗದೆ ಭೂಮಿ ಮಾರಾಟ ಮಾಡುವುದು ನಡೆದಿದೆ. ಇದೇ ನಷ್ಟ ಬಹುರಾಷ್ಟ್ರೀಯ ಕಂಪನಿಗಳಿಂದ ಆದಾಗ ಇದಕ್ಕೆ ಪರಿಹಾರ ಏನು? ಕಂಪನಿಗಳು ಮತ್ತು ಅದರ ಮಾಲಿಕರು ರಾತ್ರೋರಾತ್ರಿ ಓಡಿಹೋದರೆ ಭೂಮಿ ಮಾಲೀಕತ್ವವನ್ನು ರೈತರು ವಾಪಸ್ ಪಡೆಯುವುದು ಹೇಗೆ ಎಂದು ಪ್ರಶ್ನಿಸಿದರು. ಭಾರತ ದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಉದ್ಯೋಗ ಮತ್ತು ಆಹಾರ ಭದ್ರತೆ ಒದಗಿಸುತ್ತಿರುವ ಭೂಮಿಯನ್ನು ವಿದೇಶಿ ಕಂಪನಿಗಳಿಗೆ ಕಾನೂನಾತ್ಮಕವಾಗಿ ಹಕ್ಕನ್ನು ನೀಡುವುದು ಸರಿಯಲ್ಲ. ಇದರಿಂದ ಸಾಕಷ್ಟು ಸಮಸ್ಯೆ ತಲೆದೋರುತ್ತದೆ ಎಂದರು.
ದೇಶಿಯ ಕೃಷಿ ಜ್ಞಾನ, ಬಿತ್ತನೆಬೀಜ ಜ್ಞಾನ, ಆಹಾರ ಸಾರ್ವಭೌಮತ್ವವನ್ನು ಹೊಂದಿರುವ ಕೃಷಿ ಆಧಾರಿತ ಆರ್ಥಿಕ ಮುನ್ನಡೆ ಸಾಧಿಸಿದ ದೇಶ ನಮ್ಮದು. ಆದರೆ ಕಾನೂನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಘೋಷಣೆಗೆ ವಿರುದ್ಧ ನಿಲುವು ಇದಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕಾನೂನು ಜಾರಿಗೆ ತರಬಾರದು ಎಂದರು. ರೈತ ಸಂಘದ ಪ್ರಮುಖರಾದ ಯಶವಂತರಾವ್ ಘೋರ್ಪಡೆ, ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.