Advertisement

ಶುದ್ಧ ಕುಡಿಯುವ ನೀರು ದರ ಹೆಚ್ಚಳಕ್ಕೆ ವಿರೋಧ

10:49 PM Jun 08, 2019 | Team Udayavani |

ಬೆಂಗಳೂರು: ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ಪೂರೈಕೆ ಮಾಡುತ್ತಿರುವ ನೀರಿನ ದರ ಹೆಚ್ಚಳ ಪ್ರಸ್ತಾವಕ್ಕೆ ಕಾಂಗ್ರೆಸ್‌ ಹಿರಿಯ ನಾಯಕ ಎಚ್‌.ಕೆ.ಪಾಟೀಲ್‌ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡರಿಗೆ ಪತ್ರ ಬರೆದಿದ್ದಾರೆ.

Advertisement

ರಾಜ್ಯದ ಬಡ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಸರ್ಕಾರದ ಜವಾಬ್ದಾರಿ. ಅನ್ನಭಾಗ್ಯ ಅಕ್ಕಿ ರೀತಿ ನೀರನ್ನೂ ಕಡಿಮೆ ದರದಲ್ಲಿ ನೀಡಬೇಕು. ಅದಕ್ಕಾಗಿಯೇ ಪ್ರತಿ ಲೀಟರ್‌ ನೀರಿಗೆ 10 ಪೈಸೆಯಂತೆ ನಿಗದಿಪಡಿಸಲಾಗಿತ್ತು. ಆದರೆ, ಇದೀಗ ನೀರಿನ ದರವನ್ನು ಪ್ರತಿ ಲೀಟರ್‌ಗೆ 25 ಪೈಸೆ ಹೆಚ್ಚಿಸಲು ಮುಂದಾಗಿರುವುದು ಸರಿಯಲ್ಲ.

ಇದು ಕಾಂಗ್ರೆಸ್‌ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಜಿಂದಾಲ್‌ಗೆ ಭೂಮಿ ಪರಭಾರೆ ವಿಚಾರದಲ್ಲಿ ಸರ್ಕಾರದ ತೀರ್ಮಾನ ವಿರೋಧಿಸಿದ್ದ ಎಚ್‌.ಕೆ.ಪಾಟೀಲ್‌, ಇದೀಗ ನೀರಿನ ದರ ಹೆಚ್ಚಳಕ್ಕೂ ವಿರೋಧ ವ್ಯಕ್ತಪಡಿಸಿರುವುದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.

ಪತ್ರದಲ್ಲೇನಿದೆ?: ಶುದ್ಧ ಕುಡಿಯುವ ನೀರು ಮಾನವನ ಆರೋಗ್ಯವಂತ ಜೀವನಕ್ಕೆ ಬೇಕಾಗಿರುವ ಮೂಲಭೂತ ಅವಶ್ಯಕತೆ. ಇಂದು ಕುಡಿಯುವ ನೀರು ಬಹುತೇಕ ಕಲುಷಿತಗೊಂಡಿರುವ ಈ ಕಾಲದಲ್ಲಿ ಅಂತರ್ಜಲ ಮಟ್ಟವೂ ತೀವ್ರವಾಗಿ ಕುಸಿದಿದೆ. ಹೀಗಾಗಿ, ಎಲ್ಲರಿಗೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.

ಈ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆಯ ಹೊಸ ವ್ಯವಸ್ಥೆ ರೂಪಿಸುವ ಆಲೋಚನೆಯನ್ನು ಸ್ವಾಗತಿಸುವೆ. ಆದರೆ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ 10 ಪೈಸೆಗೊಂದು ಲೀಟರ್‌ ನೀರು ಪೂರೈಕೆ ಮಾಡುವುದನ್ನು ಬದಲಿಸಿ, 25 ಪೈಸೆಗೊಂದು ಲೀಟರ್‌ ಹಾಗೂ ಕಾಲ ಕಾಲಕ್ಕೆ ಈ ದರ ಪರಿಷ್ಕರಣೆ ಮಾಡುವ ಸರ್ಕಾರದ ನಿಲುವು ಕಾಂಗ್ರೆಸ್‌ ಸಿದ್ಧಾಂತಕ್ಕೆ ತದ್ವಿರುದ್ಧವಾಗಿದೆ. ಹೀಗಾಗಿ, ಶುದ್ಧ ಕುಡಿಯುವ ನೀರಿನ ಪೂರೈಕೆ ದರ ಹೆಚ್ಚಳ ಮಾಡದಿರಲು ಆಗ್ರಹಿಸುವೆ.

Advertisement

ಕಾಂಗ್ರೆಸ್‌ ಬಡವರ ಪಕ್ಷಪಾತಿ ಪಕ್ಷ. ಬಡವರು ಹಸಿವೆಯಿಂದ ಬಳಲಬಾರದೆಂದು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ, ಉಚಿತ ಅಕ್ಕಿ ವಿತರಿಸಿದೆ. ಬಡವರ ಉಪಾಹಾರ, ಊಟಕ್ಕೆ ಅನುಕೂಲವಾಗಲೆಂದು ಇಂದಿರಾ ಕ್ಯಾಂಟೀನ್‌ ತೆರೆದಿದ್ದು, ಕಾಂಗ್ರೆಸ್‌ ಪಕ್ಷದ ನಿಲುವು ಸದಾ ಬಡಜನರ ಪರ ಎಂಬುದನ್ನು ಸ್ಮರಿಸುವೆ.

ಶುದ್ಧ ಕುಡಿಯುವ ನೀರು ಕೇವಲ ದಾಹ ತಣಿಸುವುದಲ್ಲ. ಈ ನೀರಿನ ಸೇವನೆಯಿಂದ ಜಲಮೂಲದಿಂದ ಬರುವ ರೋಗಗಳನ್ನು ತಡೆದು, ಜನರ ಆರೋಗ್ಯ ರಕ್ಷಣೆ ಜತೆಗೆ, ಅವರಲ್ಲಿ ಆರ್ಥಿಕ ಚೈತನ್ಯ ತುಂಬಲು ಬಹಳ ನೆರವಾಗುವುದೆಂಬುದನ್ನು ಮರೆಯಲಾಗದು.

ಬಡವರ ಹಸಿವು ಇಂಗಿಸಲು ಪುಕ್ಕಟೆ ಅಕ್ಕಿ ವಿತರಿಸುವಾಗ, ರಿಯಾಯಿತಿ ದರದಲ್ಲಿ ಆಹಾರ ನೀಡುತ್ತಾ ಅವರ ಆರೋಗ್ಯ ರಕ್ಷಿಸಲು ಮುಂದಾಗಿರುವಾಗ, ಶುದ್ಧ ಕುಡಿಯುವ ನೀರಿನ ದರ ಹೆಚ್ಚಳದ ಚಿಂತನೆಯೇ ನಮ್ಮ ಪಕ್ಷದ ನಿಲುವಿಗೆ ವ್ಯತಿರಿಕ್ತವಾದುದು.

ಆದ್ದರಿಂದ ಶುದ್ಧ ಕುಡಿಯುವ ನೀರಿನ ದರ ಹೆಚ್ಚಿಸುವ ಬದಲು ನಿರ್ವಹಣೆಯ ವೆಚ್ಚದಲ್ಲಿನ ಕೊರತೆಯನ್ನು ಸರ್ಕಾರ ತುಂಬಿಕೊಂಡಲು ಹಾಗೂ ಕುಡಿಯುವ ನೀರು ಬಳಸುವ ಬಡವರಿಗೆ 10 ಪೈಸೆಗೆ ಲೀಟರ್‌ ನೀರು ಪೂರೈಸುವುದನ್ನು ಮುಂದುವರಿಸಲು ಆಗ್ರಹಿಸುವೆ. ಆ ಮೂಲಕ ಬಡವರ ಜೀವನದ ಗುಣಮಟ್ಟ ಉನ್ನತೀಕರಿಸಲು ಈ ಶುದ್ಧ ನೀರಿನ ಉಪಯೋಗಕ್ಕೆ ಪ್ರೋತ್ಸಾಹಿಸಲು ಒತ್ತಾಯಿಸುವೆ.

Advertisement

Udayavani is now on Telegram. Click here to join our channel and stay updated with the latest news.

Next