ದಾವಣಗೆರೆ: ಭಾರತ ಉನ್ನತ ಶಿಕ್ಷಣ ಆಯೋಗ ಕಾಯ್ದೆ-2018 ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖೀಲ ಭಾರತ ವಿಶ್ವವಿದ್ಯಾಲಯ ಹಾಗೂ ಕಾಲೇಜು ಶಿಕ್ಷಕರ ಒಕ್ಕೂಟದ ಕರೆಯ ಮೇರೆಗೆ ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಲು ತೀರ್ಮಾನಿಸಿರುವ ಭಾರತ ಉನ್ನತ ಶಿಕ್ಷಣ ಆಯೋಗ ಕಾಯ್ದೆ-2018 ಸರ್ಕಾರದ ಪ್ರತಿಗಾಮಿ ನೀತಿಯಂತೆ ಕಂಡು ಬರುತ್ತಿದೆ. ಕಾಯ್ದೆಯ ಹಲವು ನಿಬಂಧನೆಗಳು ಶಿಕ್ಷಣ ಕ್ಷೇತ್ರಕ್ಕೆ ಮಾರಕವಾಗಿವೆ. ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವ ಹುನ್ನಾರ ಅಡಗಿದೆ ಎಂಬ ಭಾವನೆ ಬರುವಂತಿದೆ. ಹಾಗಾಗಿ ಭಾರತ ಉನ್ನತ ಶಿಕ್ಷಣ ಆಯೋಗ ಕಾಯ್ದೆ-2018 ಹಿಂಪಡೆಯಬೇಕು ಎಂದು ಪ್ರತಿಭಟನಾನಿರತ ಉಪನ್ಯಾಸಕರು ಒತ್ತಾಯಿಸಿದರು.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಉಪನ್ಯಾಸಕರ ಹಲವಾರು ಬೇಡಿಕೆ ಕೇಂದ್ರದ ಮಾನವ ಸಂಪನ್ಮೂಲ ಸಂಶೋಧನಾ ಕೇಂದ್ರ, ವಿಶ್ವವಿದ್ಯಾಲಯ ಧನ ಸಹಾಯ ಆಯೋಗದಲ್ಲಿ ನನೆಗುದಿಗೆ ಬಿದ್ದಿವೆ. ಸರ್ಕಾರ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ವ್ಯವಸ್ಥೆಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬಲಪಡಿಸಬೇಕು.
ಎಚ್‌ಇಎಫ್‌ಎ ಮತ್ತು ಶೈಕ್ಷಣಿಕ ಸ್ವಾಯತ್ತತೆ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. 6ನೇ ವೇತನ ಆಯೋಗದ ಅನುಷ್ಠಾನದಲ್ಲಿ ಆಗಿರುವ ಲೋಪದೋಷ ಸರಿಪಡಿಸುವುದು, 7ನೇ ವೇತನ ಆಯೋಗದ ಅನುಷ್ಠಾನಕ್ಕೆ ಸಂಪೂರ್ಣ ಪ್ರಮಾಣದ ಸಹಾಯಧನ ನೀಡುವುದು, ಹಂಗಾಮಿ, ಅರೆಕಾಲಿಕ, ಗುತ್ತಿಗೆ, ಅತಿಥಿ ಉಪನ್ಯಾಸಕರಿಗೆ ಸಮಾನಾಂತರ ವೇತನ, ಸೇವಾ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ನೂತನ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರೆಸುವುದು, ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿ, ಶಿಕ್ಷಣದ ಖಾಸಗೀಕರಣ ನಿಲ್ಲಿಸಿ, ಜಾತ್ಯತೀತ, ಪ್ರಜಾತಂತ್ರವುಳ್ಳ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.
ಡಾ| ಗಂಗಾಧರ ಹಿರೇಮಠ…, ಪ್ರೊ| ಭೀಮಣ್ಣ ಸುಣಗಾರ್, ಡಾ| ಮಂಜಣ್ಣ ಇತರರು ಪ್ರತಿಭಟನೆಯಲ್ಲಿ ಇದ್ದರು.