Advertisement

Politics: ಮೇಲ್ವರ್ಗದವರಿಂದ ಜಾತಿಗಣತಿ ವಿರೋಧ- ಖರ್ಗೆ

09:45 PM Dec 12, 2023 | Pranav MS |

ಹೊಸದಿಲ್ಲಿ: ಕರ್ನಾಟಕದಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಧೋರಣೆ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಮೇಲ್ವರ್ಗದ ಎಲ್ಲರೂ ಜಾತಿಗಣತಿಗೆ ವಿರುದ್ಧ” ಎಂದು ಅವರು ಹೇಳಿದ್ದಾರೆ.

Advertisement

ರಾಜ್ಯಸಭೆಯಲ್ಲಿ ಸೋಮವಾರ ಜಮ್ಮು – ಕಾಶ್ಮೀರ ಪುನರ್‌ ವಿಂಗಡಣೆ ಮಸೂದೆ ಚರ್ಚೆ ವೇಳೆ ಈ ವಿಚಾರ ಪ್ರಸ್ತಾವವಾಯಿತು. ಬಿಜೆಪಿ ರಾಜ್ಯಸಭಾ ಸದಸ್ಯ ಸುಶೀಲ್‌ ಕುಮಾರ್‌ ಮೋದಿ ಅವರು ರಾಷ್ಟ್ರವ್ಯಾಪಿ ಜಾತಿಗಣತಿ ವಿಚಾರ ಉಲ್ಲೇಖೀಸುತ್ತ, “ಕರ್ನಾಟಕ ಸರಕಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರೇ ಜಾತಿ ಗಣತಿ ವರದಿ ಬಿಡುಗಡೆ ಮಾಡದಂತೆ ಸಹಿ ಹಾಕಿದ್ದಾರೆ” ಎಂದರು.

ಅದಕ್ಕೆ ಕೂಡಲೇ ಎದ್ದುನಿಂತು ಉತ್ತರಿಸಿದ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, “ನಮ್ಮ ಡಿಸಿಎಂ ಜಾತಿಗಣತಿಯನ್ನು ವಿರೋಧಿಸುತ್ತಾರೆ ಎಂದು ಸುಶೀಲ್‌ ಮೋದಿ ಹೇಳಿದ್ದಾರೆ. ಬಿಜೆಪಿಯವರು ವಿರೋಧಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಅವರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ” ಎಂದರು.

ಖರ್ಗೆ ಮಾತು ಪೂರ್ತಿಯಾಗುತ್ತಿದ್ದಂತೆ ಎದ್ದು ನಿಂತ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಜಾತಿಗಣತಿ ವರದಿ ಸ್ವೀಕಾರ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್‌ ನಾಯಕರಲ್ಲೇ ಭಿನ್ನಮತ ಇದೆ. ವರದಿ ಬಿಡುಗಡೆ ಮಾಡಿದರೆ ಅದನ್ನು ವಿರೋಧಿಸುವುದಾಗಿ ಸರಕಾರವನ್ನು ಡಿಸಿಎಂ ಡಿಕೆಶಿ ಎಚ್ಚರಿಸಿದ್ದಾರೆ. ಖರ್ಗೆಯವರಿಗೂ ಅವರು ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷರನ್ನು ಕೆಣಕಿದರು.

ಅದಕ್ಕೆ ತಿರುಗೇಟು ನೀಡಿದ ಖರ್ಗೆ, “ಎಲ್ಲ ಮೇಲ್ವರ್ಗದ ಜನರು ಉದ್ದೇಶಪೂರ್ವಕವಾಗಿಯೇ ಆಂತರಿಕವಾಗಿ ಜಾತಿಗಣತಿಗೆ ವಿರೋಧವಾಗಿದ್ದಾರೆ. ಅದರಲ್ಲಿ ನೀವೂ ಇದ್ದೀರಿ, ಅವರೂ ಇದ್ದಾರೆ” ಎಂದರು.

Advertisement

ಮುಂದುವರಿದು ಮಾತನಾಡಿದ ಸುಶೀಲ್‌ ಮೋದಿ, ಖರ್ಗೆಯವರಿಗೆ ಧೈರ್ಯವಿದ್ದರೆ ಒಂದು ತಿಂಗಳ ಅವಧಿಯಲ್ಲಿ ಕರ್ನಾಟಕದ ಜಾತಿಗಣತಿ ವರದಿ ಬಿಡುಗಡೆ ಮಾಡುವ ಬಗ್ಗೆ ಇಲ್ಲಿ ಘೋಷಿಸಲಿ ಎಂದು ಸವಾಲು ಹಾಕಿದರು.

ಒಕ್ಕಲಿಗ ಸಂಘದ ವತಿಯಿಂದ ಇತ್ತೀಚೆಗೆ ನಡೆದಿದ್ದ ಸಭೆಯಲ್ಲಿ ಜಾತಿಗಣತಿಗೆ ವಿರೋಧ ವ್ಯಕ್ತವಾಗಿತ್ತು. ಅದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಕ್ಕಲಿಗರ ಸಂಘದ ವತಿಯಿಂದ ಸಲ್ಲಿಸಲಾಗಿದ್ದ ಮನವಿ ಪತ್ರಕ್ಕೆ ಡಿ.ಕೆ. ಶಿವಕುಮಾರ್‌ ಕೂಡ ಸಹಿ ಹಾಕಿದ್ದರು.

ನಾನು ಜಾತಿಗಣತಿಗೆ ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ. ಸಮೀಕ್ಷೆ ವೈಜ್ಞಾನಿಕ ಹಾಗೂ ವ್ಯವಸ್ಥಿತವಾಗಿ ನಡೆಯಬೇಕು ಎಂಬುದಷ್ಟೇ ನಮ್ಮ ಅಭಿಮತ. ನಾನು ಕೂಡ ಇತರ ಹಿಂದುಳಿದ ವರ್ಗದ ಸಮುದಾಯದ ನಾಯಕ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ನಾನು ಎಲ್ಲ ವರ್ಗದ ಜನರನ್ನು ಸಮಾನವಾಗಿ ನೋಡಬೇಕು
– ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next