ಹುಬ್ಬಳ್ಳಿ: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ರಾಜ್ಯ ರೈತ ಸಂಘ-ಹಸಿರು ಸೇನೆ ಮತ್ತು ವಿವಿಧ ರೈತ ಪರ ಸಂಘಟನೆಗಳಿಂದ ರಾಜ್ಯವ್ಯಾಪಿ ರಾಷ್ಟ್ರೀಯ ಹೆದ್ದಾರಿ ಬಂದ್ ಕರೆ ಮೇರೆಗೆ ಇಲ್ಲಿನ ಗಬ್ಬೂರು ಬೈಪಾಸ್ ಬಳಿ ಸುಮಾರು ಅರ್ಧ ಗಂಟೆ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಯಿತು.
ಈ ಹಿಂದೆ ಇದ್ದ ಭೂಸ್ವಾಧೀನ ಕಾಯ್ದೆಗೆ ರಾಜ್ಯ ಸಮ್ಮಿಶ್ರ ಸರಕಾರ ತಿದ್ದುಪಡಿ ತರುವ ಮೂಲಕ ರೈತರಿಗೆ ಮರಣ ಶಾಸನ ನಿರ್ಮಿಸುತ್ತಿದೆ. ಈ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು. ರಾಜ್ಯದಲ್ಲಿ ಮಳೆ ಇಲ್ಲದೇ ಭೀಕರ ಬರಗಾಲ ಆವರಿಸಿದೆ. ಜನ, ಜಾನುವಾರುಗಳು ಕುಡಿಯಲು ನೀರಿಲ್ಲದೇ ಪರಿತಪಿಸುವಂತಾಗಿದೆ. ಬರಗಾಲ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳುವಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹೋರಾಟ ನಿರತ ರೈತರನ್ನು ವಶಕ್ಕೆ ಪಡೆದ ಪೊಲೀಸರು ಸಿಎಆರ್ ಮೈದಾನಕ್ಕೆ ಕರೆದ್ಯೊಯ್ದು ನಂತರ ಬಿಡುಗಡೆಗೊಳಿಸಿದರು. ಚಂದ್ರಶೇಖರ ಕಬ್ಬೂರ, ರವಿ ತಿರ್ಲಾಪುರ, ಮಂಜುನಾಥ ಕಾಲವಾಡ, ಕಲ್ಮೇಶ ಲಿಗಾಡೆ, ಮಲ್ಲಪ್ಪ ನೇಸರಗಿ, ಮಂಜು ಕೊಪ್ಪದ, ಶಾರದಾ ಹಿರೇಮಠ, ನೀಲವ್ವ ಹೂಲಿ ಇನ್ನಿತರರು ಪಾಲ್ಗೊಂಡಿದ್ದರು. ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಡಿಸಿಪಿಗಳಾದ ಶಿವಕುಮಾರ ಗುಣಾರೆ, ನಾಗೇಶ ಡಿ.ಎಲ್. ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.