ಕೊಪ್ಪಳ: ರಾಜ್ಯ ಸರ್ಕಾರ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಸೋಮವಾರ ತಾಲೂಕಿನ ಹಿಟ್ನಾಳ ಟೋಲ್ಗೇಟ್, ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು ರೈತರ ಅನುಮತಿ ಪಡೆಯದೇ ಭೂಮಿ ಸ್ವಾಧಿಧೀನ ಮಾಡಿಕೊಳ್ಳುವ ಪ್ರಯತ್ನ ನಡೆಸಿದೆ. ಭೂ ಸ್ವಾಧಿಧೀನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರಿಗೆ ಭೂಮಿಯ ಮೇಲೆ ಹಕ್ಕು ಇಲ್ಲದಂತೆ ಮಾಡಲು ಮುಂದಾಗಿದೆ. ಭೂಮಿ ನಂಬಿ ಜೀವನ ನಡೆಸುವ ಅನ್ನದಾತನಿಗೆ ಇಡಿಗಂಟು ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಇದರಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದೆ. ಕೂಡಲೇ ಭೂ ಸ್ವಾಧೀನ ಕಾಯ್ದೆಗೆ ಪುನರ್ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಹಿಟ್ನಾಳ ಟೋಲ್ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ-63 ಬಳಿ ಬೆಳಗ್ಗೆ 7ಕ್ಕೆ ಹೆದ್ದಾರಿ ಬಂದ್ ಮಾಡಿದ ರೈತ ಸಂಘಟನೆಗಳ ಮುಖಂಡರು ರಾಜ್ಯ ಸರ್ಕಾರ ಭೂ ಸ್ವಾಧೀನ ಕಾಯ್ದೆಗೆ ತಂದಿರುವ ತಿದ್ದುಪಡಿ ವಿರುದ್ಧ ಗುಡುಗಿದರು. ಅಲ್ಲದೇ ಈ ಹಿಂದೆ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಬಳಿಕ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೈತರ ಹಿತಾಸಕ್ತಿ ಕಾಪಾಡದೇ ಸರ್ಕಾರ ಏಕಾಏಕಿ ರೈತರ ಅನುಮತಿ ಪಡೆಯದೇ ಸ್ವಾಧೀನಕ್ಕೆ ಕಾಯ್ದೆ ತಂದು ಸುಗ್ರಿವಾಜ್ಞೆ ಮೂಲಕ ಎಲ್ಲ ರಾಜ್ಯಗಳಲ್ಲಿ ಕಾಯ್ದೆ ಜಾರಿಗೆ ಪ್ರಯತ್ನಿಸಿದ್ದರು. ನಿರಂತರ ಹೋರಾಟದ ಫಲವಾಗಿ ಆಯಾ ರಾಜ್ಯಗಳಿಗೆ ಈ ಕಾಯ್ದೆ ಜಾರಿ ಕುರಿತಂತೆ ನಿರ್ಧಾರ ಮಾಡಲಾಗಿತ್ತು. ರಾಜ್ಯ ಸರ್ಕಾರವೂ ಈ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಈ ಬಗ್ಗೆ ಕೂಡಲೇ ಮೈತ್ರಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮಣ್ಣಿನ ಮಕ್ಕಳು ಎನ್ನುವ ಸರ್ಕಾರ ರೈತರಿಗೆ ಇಡಿಗಂಟು ಕೊಡದೇ ಅವರ ಹಿತ ಕಾಯಬೇಕು ಎಂದು ಒತ್ತಾಯಿಸಿತು.
ಈ ಮೊದಲು ಭೂ ಸ್ವಾಧೀನದಲ್ಲಿ ರೈತರು ಶೇ. 90ರಷ್ಟು ಒಪ್ಪಿಗೆ ಸೂಚಿಸಿದರೆ ಮಾತ್ರ ಸ್ವಾಧೀನ ಮಾಡಿಕೊಳ್ಳುವ ಅವಕಾಶವಿತ್ತು. ಅಲ್ಲದೇ, ಅದಕ್ಕೆ ಮಾರುಕಟ್ಟೆಯ ನಾಲ್ಕರಷ್ಟು ಮೌಲ್ಯ ಕೊಡಬೇಕಿತ್ತು. ಈಗ ಕಾಯ್ದೆಯಿಂದಾಗಿ ಜಿಲ್ಲಾಧಿಕಾರಿ ಸುಪ್ರೀಂ ಆಗಿದ್ದಾರೆ. ಇಡಿಗಂಟು ಕೊಟ್ಟು ಭೂಮಿ ಸ್ವಾಧೀನಕ್ಕೆ ಅಧಿಕಾರ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಹೆದ್ದಾರಿ ಬಂದ್ ಮಾಡಿ ಸರ್ಕಾರದ ವಿರುದ್ಧ ಗುಡುಗಿದರಲ್ಲದೇ, ಸ್ಥಳದಲ್ಲೇ ಅಡುಗೆ ಸಿದ್ಧಪಡಿಸಿ ಊಟ ಮಾಡಿ ಪ್ರತಿಭಟನೆ ಮುಂದುವರಿಸಿದರು. ಮಧ್ಯಾಹ್ನದವರೆಗೂ ಧರಣಿ ನಡೆಸಿದ ಬಳಿಕ ಧರಣಿ ವಾಪಾಸ್ ಪಡೆದರು. ರೈತರ ಧರಣಿಯಿಂದಾಗಿ ಹೆದ್ದಾರಿ ಬಂದ್ ಆಗಿ ವಾಹನಗಳಿಲ್ಲದೇ ಬಿಕೋ ಎನ್ನುವಂತಿತ್ತು.
ರೈತ ಸಂಘಟನೆ ಮುಖಂಡರಾದ ಹನುಮಂತಪ್ಪ ಹೊಳೆಯಾಚೆ, ನಜೀರಸಾಬ್ ಮೂಲಿಮನಿ, ಶರಣಯ್ಯ ಮಳ್ಳೂರಮಠ, ಶಿವಣ್ಣ ಭೀಮನೂರು, ವೀರೇಶ ಅಳ್ಳಳ್ಳಿ, ವೀರೇಶ ಯಲಿಗಾರ, ರುದ್ರಪ್ಪ, ಉಸ್ಮಾನ್ ನಾಲಬಂದ್ ಹಾಗೂ ಇತರರು ಪಾಲ್ಗೊಂಡಿದ್ದರು.