Advertisement

ಅಕ್ಕಲಕೋಟ-ಕರ್ನೂಲ್‌ ಹೆದ್ದಾರಿಗೆ ವಿರೋಧ

09:34 AM Jan 20, 2019 | Team Udayavani |

ರಾಯಚೂರು: ನಮಗೆ ಹೆದ್ದಾರಿಯೇ ಬೇಡ ಎಂದು ಬೇಕಾದ್ರೆ ಬರೆದು ಕೊಡಲು ಸಿದ್ಧ. ಆದರೆ, ಬೇಕಾಬಿಟ್ಟಿ ದರಕ್ಕೆ ಭೂಮಿ ಮಾತ್ರ ಕೊಡೆವು ಎಂದು ಕಡ್ಡಿ ತುಂಡು ಮಾಡಿದಂತೆ ಹೇಳುವ ಮೂಲಕ ಭೂ ಮಾಲೀಕರು ಹೆದ್ದಾರಿ ಪ್ರಾಧಿಕಾರಕ್ಕೆ ತಮ್ಮ ನಿಲವು ಸ್ಪಷ್ಟಪಡಿಸಿದರು.

Advertisement

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಅಕ್ಕಲಕೋಟದಿಂದ ಕರ್ನೂಲ್‌ವರೆಗಿನ ಉದ್ದೇಶಿತ ಷಟ್ಪಥ ರಸ್ತೆ ನಿರ್ಮಾಣ ಕುರಿತು ಭೂ ಮಾಲೀಕರಿಗೆ ಆಯೋಜಿಸಿದ್ದ ಸಭೆಯಲ್ಲಿ ಈ ಆಕ್ರೋಶ ವ್ಯಕ್ತವಾಯಿತು. ಆರಂಭದಲ್ಲಿ ಗುತ್ತಿಗೆ ಸಂಸ್ಥೆ ಪ್ರತಿನಿಧಿಗಳು ಯೋಜನೆ ಬಗ್ಗೆ ವಿವರ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಲಬುರಗಿ ವಿಭಾಗದ ಉಪ ವ್ಯವಸ್ಥಾಪಕ ಪ್ರದೀಪ ಹಿರೇಮಠ ಮಾತನಾಡಿ, ಇದು 7,500 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ. ಅಕ್ಕಲಕೋಟೆಯಿಂದ ಕರ್ನೂಲ್‌ಗೆ ಸಂಪರ್ಕ ಕಲ್ಪಿಸಲಿದೆ. ರಾಜ್ಯದಲ್ಲಿ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ರಸ್ತೆ ಮಾರ್ಗ ಹಾದು ಹೋಗಲಿದೆ. ಆರ್‌ವಿ ಅಸೋಸಿಯೇಟ್ ಎಂಬ ಸಂಸ್ಥೆ ಕಾಮಗಾರಿ ನಿರ್ವಹಣೆ ಮಾಡಲಿದೆ. ಜಿಲ್ಲೆಯಲ್ಲಿ ಸುಮಾರು 37 ಕಿ.ಮೀ. ರಸ್ತೆ ಹಾದುಹೋಗಲಿದೆ. ಸುಮಾರು 940 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗುವುದು. 70 ಮೀಟರ್‌ ಅಗಲದ ರಸ್ತೆ ಇದಾಗಿದೆ. ರಾಯಚೂರು ತಾಲೂಕಿನ 17, ದೇವದುರ್ಗ ತಾಲೂಕಿನ 1 ಹಳ್ಳಿ ಯೋಜನೆ ವ್ಯಾಪ್ತಿಗೆ ಒಳಪಡಲಿವೆ ಎಂದು ವಿವರಿಸಿದರು.

ಸ್ವಾಧಿಧೀನಪಡಿಸಿಕೊಂಡ ಭೂಮಿಗೆ ಎಷ್ಟು ಬೆಲೆ ನಿಗದಿ ಮಾಡಿದ್ದೀರಿ ಎಂದು ರೈತರು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಮೂರು ಪಟ್ಟು ಹೆಚ್ಚು ನೀಡಲಾಗುವುದು ಎಂದರು. ಆದರೆ, ಇದನ್ನೊಪ್ಪದ ರೈತರು, ಸರ್ಕಾರ ನಿಗದಿ ಮಾಡಿದ ಬೆಲೆ ತೀರ ಕಡಿಮೆ ಇದೆ. ಅದರಿಂದ ನಮಗೆ ಯಾವುದೇ ಲಾಭವಾಗುವುದಿಲ್ಲ. ಆ ಬೆಲೆಗೆ ಭೂಮಿ ನೀಡಿದರೆ ನಾವು ಭಿಕ್ಷೆ ಬೇಡಬೇಕಾಗುತ್ತದೆ. ನೀವು ಕೊಡುವ ಹಣ ಎಷ್ಟು ದಿನ ಉಳಿಯಲಿದೆ ಎಂದು ಪ್ರಶ್ನಿಸಿದರು.

ಆಗ ಮಧ್ಯ ಪ್ರವೇಶಿಸಿದ ಎಡಿಸಿ ಗೋವಿಂದರೆಡ್ಡಿ, ಇದು ಕೇವಲ ಮಾಹಿತಿ ಸಭೆಯಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಹಾಗೂ ಬೆಲೆ ನಿಗದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು. ಆಗ ನೀವು ಭೂಮಿ ನೀಡುತ್ತೀರೋ ಇಲ್ಲವೋ ಎಂಬುದನ್ನು ತಿಳಿಸಿ ಎಂದರು. ಈ ಮಾತಿಗೆ ಎಲ್ಲ ರೈತರು ಬೇಕಾದ್ರೆ ಈಗಲೇ ಭೂಮಿ ನೀಡುವುದಿಲ್ಲ ಎಂದು ಬರೆದುಕೊಡಲು ಸಿದ್ಧ ಎಂದರು.

Advertisement

ಅಲ್ಲಿಗೆ ಸುಮ್ಮನಾಗದ ರೈತರು, ಈಗಾಗಲೇ ಸಾಕಷ್ಟು ಕೈಗಾರಿಕೆಗಳಿಗೆ ಭೂಮಿ ನೀಡಿ ನಾವು ಮಣ್ಣು ತಿನ್ನುವಂತಾಗಿದೆ. ಇನ್ನೂ ಎಷ್ಟು ದಿನ ಹೀಗೆ ವಂಚನೆಗೆ ಒಳಗಾಗಬೇಕು. ಒಂದೆರಡು ಎಕರೆ ಇರುವ ರೈತರು ಸಿಗುವ ಅಲ್ಪ ಪರಿಹಾರ ಹಣದಿಂದ ಉಳಿದ ಜೀವನ ಕಳೆಯುವುದು ಸಾಧ್ಯವಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಎಡಿಸಿ, ಶೇ.1ರಷ್ಟು ಜನರಿಗೆ ಸಮಸ್ಯೆಯಾಗುತ್ತದೆ ಎಂಬುದು ಸತ್ಯ. ಆದರೆ, ಇದರಿಂದ ಭೂಮಿ ಮೌಲ್ಯ ಹೆಚ್ಚಾಗಲಿದೆ. ಎಲ್ಲ ಭೂಮಿ ಸ್ವಾಧೀನ ಮಾಡಿಕೊಳ್ಳುವುದಿಲ್ಲ. ಅಲ್ಲದೇ, ಇದು ಇನ್ನೂ ಕೇವಲ ಆರಂಭವಾಗಿದೆ. ಈ ಬಗ್ಗೆ ಪ್ರಸ್ತಾವನೆಯೇ ಸಿದ್ಧಗೊಂಡಿಲ್ಲ. ಅದೆಲ್ಲ ಪ್ರಕ್ರಿಯೆ ಮುಗಿಯಲು ತುಂಬಾ ಕಾಲಾವಕಾಶ ಬೇಕಾಗಬಹುದು. ಸಹಾಯಕ ಆಯುಕ್ತರನ್ನು ಭೂಸ್ವಾಧೀನ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ನಿಮಗೆ ಭೂಮಿ ನೀಡಲು ಆಸಕ್ತಿ ಇಲ್ಲದಿದ್ದರೆ, ಪರಿಹಾರ ಹೆಚ್ಚಿಸುವ ಬೇಡಿಕೆ ಇದ್ದರೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬಹುದು ಎಂದು ವಿವರಿಸಿದರು.

180 ಕಿಮೀ ಹೆದ್ದಾರಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಭಾರತಮಾಲಾ ಯೋಜನೆಯಡಿ ಅಕ್ಕಲಕೋಟದಿಂದ ಕರ್ನೂಲ್‌ವರೆಗೆ 180 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಪ್ರಸ್ತಾಪಿತ ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 1000 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ದೇವದುರ್ಗದ ಒಂದು ಮತ್ತು ರಾಯಚೂರು ತಾಲೂಕಿನ 17 ಗ್ರಾಮಗಳಲ್ಲಿ ವ್ಯಾಪ್ತಿಯ 420 ಹೆಕ್ಟೇರ್‌ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಳ್ಳಲು ಯೋಜಿಸಲಾಗಿದೆ.

ಮೂರು ಹೆದ್ದಾರಿ ಸಂಗಮ
ಈ ಹೆದ್ದಾರಿ ದೊಡ್ಡ ಯೋಜನೆಯಾಗಿದ್ದು, ಇದಕ್ಕೆ ಮೂರು ಹೆದ್ದಾರಿಗಳು ಕೂಡಲಿವೆ. ಈಗ ಷಟ್ಪಥ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಇದು ಚೆನ್ನೈ-ಮುಂಬಯಿಗೆ ಸಂಪರ್ಕ ಕಲ್ಪಿಸಲಿದೆ. ಇದಕ್ಕೆ ಚತುಷ್ಪಥ ರಸ್ತೆಗಳಾದ ಬಳ್ಳಾರಿ-ಶಕ್ತಿನಗರ, ಬೆಳಗಾವಿ-ಶಕ್ತಿನಗರ ರಸ್ತೆಗಳು ಕೂಡಲಿವೆ. ಹೀಗಾಗಿ ಶಕ್ತಿನಗರ ಬಳಿಯೇ ಮೂರು ರಸ್ತೆಗಳು ಕೂಡುವ ಸಾಧ್ಯತೆಗಳಿವೆ. ಈ ಷಟ್ಪಥ ರಸ್ತೆಗೆ ಮುಖ್ಯವಾಗಿ 3 ಮೇಜರ್‌ ಸೇತುವೆ, ಎಂಟು ಸಣ್ಣಪುಟ್ಟ ಸೇತುವೆಗಳು ನಿರ್ಮಾಣಗೊಳ್ಳಲಿವೆ.

ಗ್ರೀನ್‌ಫೀಲ್ಡ್‌ ಯೋಜನೆ
ಈ ಯೋಜನೆಗೆ ಕೇಂದ್ರ ಸರ್ಕಾರ ಗ್ರೀನ್‌ ಫೀಲ್ಡ್‌ ಅಲೈನ್‌ಮೆಂಟ್ ಎಂದೇ ಕರೆದಿದೆ. ಈ ಯೋಜನೆಗೆ ಪಡೆಯುವ ಭೂಮಿ ಕೃಷಿಗೆ ಸಂಬಂಧಿಸಿದ್ದಾಗಿರುತ್ತದೆ. ಯಾವುದೇ ಗ್ರಾಮಗಳು, ವಾಣಿಜ್ಯ ಕಟ್ಟಡಗಳಾಗಲಿ, ಮನೆಗಳಾಗಲಿ ತೆರವು ಆಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next