ಕುಮಟಾ: ಕಳೆದ ಕೆಲ ವರ್ಷಗಳ ಹಿಂದೆ ಅಕೇಶಿಯಾ ನೆಡತೋಪು ಬೆಳೆಸುವುದನ್ನು ನಿಷೇಧಿಸಿದ ಅರಣ್ಯ ಇಲಾಖೆಯು ಈಗ ಪುನಃ ಅಕೇಶಿಯಾ ಸಸಿ ನೆಡಲಾರಂಭಿಸಿದೆ. ಮಣ್ಣಿನ ಫಲವತ್ತತೆ ಹಾಗೂ ತೇವಾಂಶ ಹೀರಿಕೊಳ್ಳುವ ಮತ್ತು ಪರಿಸರಕ್ಕೆ ಮಾರಕವಾದ ಅಕೇಶಿಯಾ ಸಸಿಗಳನ್ನು ಮೂರೂರು ಗುಡ್ಡದಲ್ಲಿ ನೆಡಬಾರದು ಎಂಬ ಬಗ್ಗೆ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ತಾಲೂಕಿನ ಮೂರೂರು ಗುಡ್ಡದ 25 ಹೆಕ್ಟೇರ್ ಖಾಲಿ ಪ್ರದೇಶದಲ್ಲಿ ಪರಿಸರಕ್ಕೆ ಹಾನಿಕರವಾದ ಅಕೇಶಿಯಾ ಸಸಿ ನೆಡಲು ಅರಣ್ಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಅಕೇಶಿಯಾದಿಂದ ಸಮೃದ್ಧ ಕಾಡು ನಾಶವಾಗುತ್ತದೆ. ಅಲ್ಲದೇ ಗಿಡಗಳ ಎಲೆ ಉದುರಿ ಕಾಡಿನ ಸಮೀಪದ ಜಮೀನುಗಳು ಫಲವತ್ತತೆ ಕಳೆದುಕೊಳ್ಳುತ್ತವೆ. ತೆರೆದ ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದು ರೈತಾಪಿ ವರ್ಗವು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪರಿಸರಕ್ಕೆ ಪೂರಕವಾದ ವೈವಿಧ್ಯಮಯ ಹಣ್ಣಿನ ಗಿಡಗಳು, ಔಷಧಿ ಸಸ್ಯಗಳು, ಸಾಂಪ್ರದಾಯಿಕ ಬೆಟ್ಟದ ಮರ ಬೆಳೆಸಲು ಇಲಾಖೆ ಮುಂದಾಗಬೇಕು. ಇದರಿಂದ ವನ್ಯ ಜೀವಿಗಳು ಕೃಷಿ ಜಮೀನಿಗೆ ಲಗ್ಗೆ ಇಡುವುದು ಕಡಿಮೆಯಾಗುತ್ತದೆ. ಪರಿಸರ ಇಲಾಖೆ ಅಕೇಶಿಯಾ ಮತ್ತು ನೀಲಗಿರಿಯಂತಹ ಗಿಡ ನೆಡಬಾರದು ಎಂದು ಆದೇಶಿಸಿದ್ದರೂ ಅರಣ್ಯ ಇಲಾಖೆಯವರು ರೈತರ ಮತ್ತು ಪರಿಸರದ ಮೇಲೆ ದಬ್ಟಾಳಿಕೆ ನಡೆಸುತ್ತಿದ್ದಾರೆ. ಸಂಬಂಧಿಸಿದ ಮೇಲಧಿಕಾರಿಗಳು ಸ್ಥಳ ಪರಿಶೀಲಿಸಿ, ಕೂಡಲೇ ಕಾಡು ಜಾತಿ ಮರಗಳನ್ನು ಮೂರೂರು ಗುಡ್ಡದ ಅರಣ್ಯ ಪ್ರದೇಶದಲ್ಲಿ ನೆಡುವಂತೆ ಸೂಚನೆ ನೀಡುವ ಮೂಲಕ ಸಹಜ ಅರಣ್ಯ ವೃದ್ಧಿಗೆ ಅವಕಾಶ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಅಕೇಶಿಯಾ ಕೈಬಿಡಿ: ಅಕೇಶಿಯಾದಿಂದ ಅಂತರ್ಜಲ ಮಟ್ಟ ಕುಸಿಯುವುದರ ಜೊತೆಗೆ ಹಸುಗಳಿಗೆ ಮೇವಿನ ಕೊರತೆ ಉಂಟಾಗುತ್ತದೆ. ಅಕೇಶಿಯಾ ನೆಡುತೋಪಿನಲ್ಲಿ ಇನ್ನಿತರ ಸಸ್ಯಗಳು ಬೆಳೆಯುವುದಿಲ್ಲ. ಇದರಿಂದ ಅರಣ್ಯ ಪ್ರದೇಶಗಳು ಕಡಿಮೆಯಾಗುತ್ತದೆ. ಮೂರೂರು ಗುಡ್ಡದ ಮೇಲೆ ನೆಡುತ್ತಿರುವ ಅಕೇಶಿಯಾವನ್ನು ಕೂಡಲೇ ಕೈಬಿಟ್ಟು, ಹಣ್ಣಿನ ಹಾಗೂ ಇತರೇ ಕಾಡು ಜಾತಿಯ ಮರಗಳನ್ನು ನೆಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.
ಸರ್ಕಾರ ಅಕೇಶಿಯಾ ನಿಷೇಧಿಸಿಲ್ಲ: ಸರ್ಕಾರ ಅಕೇಶಿಯಾ ನಿಷೇಧಿಸಿಲ್ಲ. ಅಕೇಶಿಯಾ ನೆಡತೋಪಿಗೆ ಸರ್ಕಾರ ನಿಷೇಧ ಹೇರಿದೆ ಎಂಬ ಕೆಲ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ಕಲ್ಲು ಜಾಗದಲ್ಲಿ ಇತರೆ ಸಸ್ಯಗಳು ಬೆಳೆಯುವುದಿಲ್ಲ. ಅಂತಹ ಸ್ಥಳಗಳಲ್ಲಿ ಅಕೇಶಿಯಾವನ್ನು ನೆಡಲಾಗುತ್ತಿದೆ. ಉತ್ತಮ ಗುಣಮಟ್ಟದ ಮಣ್ಣಿನ ಪ್ರದೇಶಗಳಲ್ಲಿ ಉತ್ತಮ ಜಾತಿಯ ಸಸ್ಯಗಳನ್ನು ನೆಡಲಾಗುತ್ತದೆ. ಸರ್ಕಾರ ಹಾಗೂ ಮೇಲಧಿಕಾರಿಗಳ ಆದೇಶದನ್ವಯ ಮೂರೂರು ಗುಡ್ಡದಲ್ಲಿ ಅಕೇಶಿಯಾ ನೆಡತೋಪು ನಿರ್ಮಿಸಲಾಗುತ್ತಿದೆ ಎಂದು ಕುಮಟಾ ವಲಯಾರಣ್ಯಾಧಿಕಾರಿ ಪ್ರವೀಣ ನಾಯಕ ತಿಳಿಸಿದ್ದಾರೆ.
ಮೂರೂರು ಗುಡ್ಡ ಅತೀ ಹೆಚ್ಚು ಪ್ರದೇಶ ಕಲ್ಲು ಅರೆಯಿಂದ ಕೂಡಿದೆ. ಅಂತಹ ಸ್ಥಳಗಳಲ್ಲಿ ಅಕೇಶಿಯಾ ಸಸಿ ನೆಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತೇವಾಂಶ ಕೂಡಿರುವ ಮಣ್ಣಿನಲ್ಲಿ ಹಣ್ಣು ಹಾಗೂ ಕಾಡು ಜಾತಿಯ ಸಸಿಗಳನ್ನು ನೆಡಲಾಗುತ್ತದೆ.
– ಪ್ರವೀಣ ನಾಯಕ, ಆರ್ಎಫ್ಒ ಕುಮಟಾ
ಅಕೇಶಿಯಾ ನೆಡತೋಪು ನಿರ್ಮಿಸುವುದರಿಂದ ಕೃಷಿ ಭೂಮಿಯ ಮೇಲೆ ತೀವ್ರ ತರದ ಪರಿಣಾಮ ಬೀರುತ್ತದೆ. ಅಲ್ಲದೇ, ಬಂಜರು ಭೂಮಿ ಮತಷ್ಟು ಅಧಿಕವಾಗುತ್ತದೆ. ಮೂರೂರು ಗುಡ್ಡದಲ್ಲಿ ಆರಂಭಿಸಲಾದ ಅಕೇಶಿಯಾ ನೆಡತೋಪಿನ ಕಾರ್ಯವನ್ನು ಅರಣ್ಯ ಇಲಾಖೆ ಕೂಡಲೇ ಕೈಬಿಡಬೇಕು.
–ಪ್ರಸನ್ನ ಹೆಗಡೆ, ರೈತ