Advertisement

ಬಿಜೆಪಿಯದ್ದು ದ್ವೇಷ ಭಕ್ತಿ ಕಾಂಗ್ರೆಸ್ಸನದ್ದು ದೇಶ ಭಕ್ತಿ: ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

04:09 PM Apr 09, 2022 | Team Udayavani |

ಗಂಗಾವತಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ವೀರಸಾರ್ವಕರ್ ಸೇರಿದಂತೆ ಅನೇಕ ಹಿಂದೂ ಮಹಾಸಭಾ ಮತ್ತು ಸಂಘಪರಿವಾರದ ನಾಯಕರು ಸ್ವಾತಂತ್ರ್ಯ ಚಳುವಳಿಯಲ್ಲಿ ಸೆರೆ ಸಿಕ್ಕಾಗ ಬ್ರಿಟಿಷರಿಗೆ ಕ್ಷಮಾಪಣೆಪತ್ರ ಬರೆದುಕೊಟ್ಟು ಜೈಲಿನಿಂದ ಹೊರಗೆ ಬಂದಿದ್ದಾರೆ.  ಇವರೇಗೆ ದೇಶ ಭಕ್ತರಾಗಲು ಸಾಧ್ಯ ಎಂದು ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರನ್ನು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದರು.

Advertisement

ಅವರು ಶನಿವಾರ ನಗರದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಂಸದ ಎಚ್.ಜಿ.ರಾಮುಲು ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ನಂತರದಲ್ಲಿಯೂ ದೇಶ ಭಕ್ತಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಬದ್ಧ ಆಡಳಿತ ನಡೆಸಿದ ಕೀರ್ತಿ ಹೊಂದಿದೆ. ಬಿಜೆಪಿ ಸಂಘಪರಿವಾರದವರು ಮಾತೆತ್ತಿದರೆ ಸಂವಿಧಾನ ಬದಲಾಯಿಸುತ್ತೇವೆ, ಮುಸಲ್ಮಾನರು ಪಾಕಿಸ್ತಾನಕ್ಕೆ ಓಡಿಸಬೇಕು ಎಂಬ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದರೂ ಮುಖ್ಯಮಂತ್ರಿಗಳು ಕ್ರಮಕೈಗೊಳ್ಳುತ್ತಿಲ್ಲ. ಸಂವಿಧಾನದ ಪೀಠಿಕೆಯಲ್ಲಿ ಹೇಳಿದಂತೆ ಭಾರತೀಯರಾದ ನಾವು ಎಂದು ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಹೀಗೆ ಎಲ್ಲಾ ಸಮುದಾಯದವರು ಎಂಬ ಅರ್ಥವನ್ನು ಬಿಜೆಪಿ ಸಂಘಪರಿವಾರದವರಿಗೆ ಗೊತ್ತಿಲ್ಲ. ಮುಸ್ಲಿಂ ಸಮಾಜದವರನ್ನು ವ್ಯಾಪಾರ ಮಾಡಬೇಡಿ, ಮಾಂಸ ಮಾರಾಟ ಮಾಡಬೇಡಿ, ವಾಹನ ಚಾಲನೆ ಮಾಡಬೇಡಿ ಎಂದು ಬಹಿರಂಗವಾಗಿ ಹೇಳಿದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಕಾರವೆತ್ತುತ್ತಿಲ್ಲ. ಕೇಂದ್ರ ಗೃಹಮಂತ್ರಿ ಗಡಿಪಾರಾದವರು. ರಾಜ್ಯ ಗೃಹ ಮಂತ್ರಿ ಅಜ್ಞಾನೇಂದ್ರರಾಗಿದ್ದು  ಒಂದು ಜಾತಿ ಸಮುದಾಯ ಸಂಘ ಪರಿವಾರದ ಪರವಾದ ಎಜೆಂಟರಂತೆ ಮಾತನಾಡುವುದು ಸಂವಿಧಾನಕ್ಕೆ ವಿರುದ್ಧವಾಗಿದ್ದರೂ ಮುಖ್ಯಮಂತ್ರಿಗಳು ಸಚಿವ ಸಂಪುಟದಿಂದ ಅರಗ ಜ್ಞಾನೇಂದ್ರ ಅವರನ್ನು ಕೈ ಬಿಡುತ್ತಿಲ್ಲ. ರಾಜ್ಯದಲ್ಲಿ ಅಶಾಂತಿ ತಾಂಡವವಾಡುತ್ತಿದೆ. ಬಿಜೆಪಿ ಸಂಘಪರಿವಾರದವರು ಬಹಿರಂಗವಾಗಿ ಮುಸ್ಲಿಂ ಸಮಾಜದವರ ಬಗ್ಗೆ ಪದೇ ಪದೇ ಟೀಕೆಯ ಮಾತನಾಡಿದರೂ ಸಿಎಂ ಮೌನವಹಿಸಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶ್ರೀನಗರದ ಮಸೀದಿಯಲ್ಲಿ ದೇಶ ವಿರೋಧಿ ಘೋಷಣೆ: 13 ಮಂದಿ ಬಂಧನ

ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಮಂತ್ರ: ಬಿಜೆಪಿ ಸರಕಾರದ ಜನ ವಿರೋಧಿ ಆಡಳಿತ ಹಾಗೂ ಸ್ವಜಪಕ್ಷಪಾತದ ವಿರುದ್ಧ ರಾಜ್ಯದ ಜನರು ತಿರುಗಿ ಬಿದ್ದಿದ್ದು ಮುಂಬರುವ ಚುನಾವಣೆಯಲ್ಲಿ ಬುದ್ಧಿ ಕಲಿಸಲಿದ್ದಾರೆ. ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸಲಾಗುತ್ತದೆ. ಕಾಂಗ್ರೆಸ್ ಬಿಟ್ಟು ಹೋದ ಮತ್ತು ತಟಸ್ಥ ನಿಲುವುಳ್ಳ ನಾಯಕರನ್ನು ಕರೆದು ಮಾತನಾಡಿ ಪಕ್ಷದ ಸಂಘಟನೆಗೆ ಒತ್ತು ನೀಡಲಾಗುತ್ತದೆ. ಕೊಪ್ಪಳ, ರಾಯಚೂರು ಮತ್ತು ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹಿರಿಯ ಮುಖಂಡ ಎಚ್.ಜಿ.ರಾಮುಲು ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುತ್ತದೆ. ಈಗಾಗಲೇ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಶೀಘ್ರ ಎಚ್.ಆರ್.ಶ್ರೀನಾಥ, ಕರಿಯಣ್ಣ ಸಂಗಟಿ ಕಾಂಗ್ರೆಸ್ ಮರಳಲಿದ್ದು ಪಕ್ಷಕ್ಕಾಗಿ ಮತ್ತು ಬಿಜೆಪಿ ಭ್ರಷ್ಠಾಚಾರ ನಿಲ್ಲಿಸಲು ಎಲ್ಲರೂ ಕೈ ಜೋಡಿಸಿ ಕೆಲಸ ಮಾಡಲಿದ್ದಾರೆ.

Advertisement

ಮಾಜಿ ಸಂಸದ ಎಚ್.ಜಿ.ರಾಮುಲು, ಮಾಜಿ ಸಚಿವ ಎಂ,ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಕರಿಯಣ್ಣ ಸಂಗಟಿ, ರಘು ಗುಜ್ಜಲ್, ಶೈಲಜಾ ಹಿರೇಮಠ, ಇಲಿಯಾಸ ಬಾಬಾ, ವೀರಭದ್ರಪ್ಪ ನಾಯಕ, ರಜಿಯಾಬೇಗಂ ಮನಿಯಾರ್, ಶೋಭಾ ಸಿಂಗ್, ಹರಿಬಾಬು, ಎಚ್.ಆರ್.ಭರತ್, ಶಂಕರ ಉಂಡಾಳೆ, ಉಸ್ಮಾನ ಬಿಚ್ಚಗತ್ತಿ, ಮರಕುಂಬಿ ತಿರುಮಲ, ಜಿನ್ನಾ ಟೇಲರ್, ಆಯೂಬ್ ಖಾನ್, ಲಿಂಗಪ್ಪ ಜೋಗದ, ವೀರನಗೌಡ, ಹನುಮಂತರಾಯ, ಸಂತೋಷ ಜುಲೈನಗರ, ಅಶೋಕ ಜುಲೈನಗರ ಸೇರಿ ಅನೇಕರಿದ್ದರು.

ಭಾರತ ದೇಶದ ವಿವಿಧ ಸಂಸ್ಕೃತಿ, ಭಾಷೆ ಕಲೆ ಹೊಂದಿದ ದೇಶವಾಗಿದ್ದು ಸಂವಿಧಾನಕ್ಕೆ ವಿರುದ್ಧವಾಗಿ ಬಿಜೆಪಿ ಸಂಘಪರಿವಾರದವರು ತಮ್ಮ ಸಿದ್ದಾಂತ ಹೇರಲು ಅವಕಾಶವಿಲ್ಲ.ದೇಶದಲ್ಲಿ 23 ಸಂವಿಧಾನ ಮಾನ್ಯತೆ ಪಡೆದ ಭಾಷೆಗಳಂತೆ ಹಿಂದಿಯೂ ಒಂದಾಗಿದ್ದು ಅದನ್ನು ಕೇಂದ್ರದ ಗೃಹ ಸಚಿವ ಅಮಿತ್ ಷಾ ಒತ್ತಾಯಪೂರ್ವಕವಾಗಿ ಹೇರಲು ಸಾಧ್ಯವಿಲ್ಲ. ಆಸಕ್ತರು ಕಲಿಯಲು ಯಾರಿಂದಲೂ ಅಭ್ಯಂತರವಿಲ್ಲ. ಕಾಂಗ್ರೆಸ್ ಪಕ್ಷ ಧರ್ಮದ ಹಾದಿಯಲ್ಲಿದ್ದು ಸಮಸ್ತ ಜನರನ್ನು ಜೊತೆಗೆ ಕರೆದುಕೊಂಡು ಹೋಗುವ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿದೆ. ಕಾಂಗ್ರೆಸ್ ನಾಯಕರೆಲ್ಲರೂ ಹಿಂದೂ ಧರ್ಮ ಸಂಸ್ಕೃತಿಯನ್ನು ಆಚರಣೆ ಮಾಡುತ್ತಾರೆ. ಬಿಜೆಪಿ ನಾಯಕರಂತೆ ಸರಕಾರದಲ್ಲಿದ್ದು ಮುಸ್ಲಿಂ ಕ್ರೈಸ್ತ ಸಮಾಜ ಸೇರಿ ಅನ್ಯ ಸಮಾಜ ಮತ್ತು ಅವರ ಆಚಾರ ವಿಚಾರ ಆಹಾರ ಪದ್ಧತಿಗಳನ್ನು ಟೀಕಿಸುವ ಅನೈತಿಕ ಬುದ್ಧಿ ಕಾಂಗ್ರೆಸ್ ನವರಿಲ್ಲ. ಸರಕಾರ ನಡೆಸುವವರು ಎಲ್ಲಾ ಜಾತಿ ಜನಾಂಗದವರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಇದು ಪ್ರಜಾಪ್ರಭುತ್ವ ಹಿಟ್ಲರ್, ಸದ್ದಾಂ ಹುಸೇನ್ ಆಡಳಿತವಲ್ಲ. ಮುಸ್ಲಿಂ ದೇಶಗಳಿಂದ ಆಮದಾಗುವ ಪೆಟ್ರೋಲ್ ಡಿಸೇಲ್‌ನ್ನೂ ಕೂಡ ತಿರಸ್ಕಾರ ಮಾಡಿ ನೋಡೋಣ,-ಬಿ.ಕೆ.ಹರಿಪ್ರಸಾದ ಪರಿಷತ್ ವಿಪಕ್ಷ ನಾಯಕ.

Advertisement

Udayavani is now on Telegram. Click here to join our channel and stay updated with the latest news.

Next