Advertisement

ಕೊಲ್ಕೊತ್ತಾದಲ್ಲಿ ಮುಂದುವರಿದ ‘ಹೈ’ ಡ್ರಾಮಾ

03:06 AM Feb 04, 2019 | Team Udayavani |

ಕೊಲ್ಕೊತ್ತಾ: ಕೊಲ್ಕೊತ್ತಾ ಪೊಲೀಸರು ಮತ್ತು ಸಿ.ಬಿ.ಐ. ನಡುವಿನ ಅನಿರೀಕ್ಷಿತ ತಿಕ್ಕಾಟ ಇದೀಗ ಸ್ಪಷ್ಟ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿರುವ ಕೊಲ್ಕೊತ್ತಾ ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಬಂದ ಸಿ.ಬಿ.ಐ. ಅಧಿಕಾರಗಳನ್ನೇ ಕೊಲ್ಕೊತ್ತಾ ಪೊಲೀಸರು ವಶಕ್ಕೆ ಪಡೆದುಕೊಂಡ ಪ್ರಕರಣ ಮತ್ತು ಆ ಬಳಿಕ, ಕೇಂದ್ರದ ಸೇಡಿನ ರಾಜಕಾರಣ ನಡೆಯನ್ನು ವಿರೋಧಿಸಿ ಪಶ್ಚಿಮಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ದಿಢೀರ್ ಧರಣ ಇದೀಗ ಸಂಪೂರ್ಣ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ.

Advertisement

ಮಮತಾ ಅವರಿಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿರುವ ವಿರೋಧ ಪಕ್ಷಗಳ ನಾಯಕರು ನರೇಂದ್ರ ಮೋದಿ ನೇತೃತ್ವದ ಕೆಂದ್ರ ಸರಕಾರದ ನಡೆಯನ್ನು ಖಂಡಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ, ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ಮತ್ತು ಡಿ.ಎಂ.ಕೆ. ನಾಯಕ ಎಂ.ಕೆ. ಸ್ಟಾಲಿನ್ ಮುಂತಾದವರು ಮಮತಾ ಅವರ ಹೋರಾಟಕ್ಕೆ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಲು ಬಿ.ಜೆ.ಪಿ.ಯು ದೇಶದಲ್ಲಿ ನಾಗರಿಕ ದಂಗೆಗೆ ಪ್ರೇರಣೆ ನೀಡುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ. ಇನ್ನೊಂದೆಡೆ ಬಿಜೆಪಿ ಮತ್ತು ಮಮತಾ ಬ್ಯಾನರ್ಜಿ ಇಬ್ಬರೂ ನಾಟಕ ಮಾಡುತ್ತಿದ್ದಾರೆ ಮತ್ತು ಆ ಮೂಲಕ ಬಂಗಾಲದ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಸಿ.ಪಿ.ಐ. (ಎಂ) ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next