ವಿಧಾನಪರಿಷತ್: ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡದ ಸಚಿವರ ವರ್ತನೆ ಬಗ್ಗೆ ಪ್ರತಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಹುತೇಕ ಸದಸ್ಯರ ಪ್ರಶ್ನೆಗಳಿಗೆ ಮಾಹಿತಿ ಬಂದಿಲ್ಲ, ಪ್ರಶ್ನೆ ಬೇರೆ ಇಲಾಖೆಗೆ ವರ್ಗಾವಣೆಯಾಗಿದೆ
ಎಂದು ಸಭಾಪತಿಯವರು ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಬಿಜೆಪಿಯ ಅಮರನಾಥ ಪಾಟೀಲ್,ಹೈದರಾಬಾದ್ ಕರ್ನಾಟಕ ಭಾಗದಲ್ಲಿ 371ಜೆ ಕಾನೂನು ಜಾರಿಯಾದ ಮೇಲೆ ಎಷ್ಟು ಹುದ್ದೆಗಳು ಸೃಷ್ಠಿಯಾಗಿವೆ.
ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಪ್ರಶ್ನೆ ಕೇಳಿದ್ದರು. ಉತ್ತರ ಬಂದಿಲ್ಲ ಎಂದಾಗ ನೇರವಾಗಿ ಸದನದ ಬಾವಿಗಿಳಿದು ಮುಖ್ಯಮಂತ್ರಿ ಎದುರು ಧರಣಿ ಕುಳಿತರು. ಪ್ರತಿಪಕ್ಷದ ಸದಸ್ಯರು ಅವರಿಗೆ ಬೆಂಬಲ ವ್ಯಕ್ತಪಡಿಸಿ ಸಭಾನಾಯಕರನ್ನು ತರಾಟೆಗೆ ತೆಗೆದುಕೊಂಡರು.
ವಾರ್ತಾ ಇಲಾಖೆಗೆ ಸಂಬಂಧಿಸಿದಂತೆ ಬಿಜೆಪಿಯ ಮಹಾಂತೇಶ್ ಕವಠಗಿ ಮಠ ಕೇಳಿದ ಚುಕ್ಕೆ ಗುರುತಿನ(ಸದನದಲಿ ಉತ್ತರಿಸಬೇಕಾದ) ಪ್ರಶ್ನೆಗೆ ಉತ್ತರ ಬಂದಿಲ್ಲ ಎಂದು ಹೇಳಲಾಗಿತ್ತು. ಜೆಡಿಎಸ್‌ನ ರಮೇಶ್ ಬಾಬು ಅವರ ಅದೇ ರೀತಿಯ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರ ನೀಡಲಾಗಿತ್ತು. ಇದರಿಂದ ಆಕ್ರೋಶಗೊಂಡ ಕೆ.ಎಸ್. ಈಶ್ವರಪ್ಪ ಈ ಸರ್ಕಾರದ ಬಗ್ಗೆ ಅಧಿಕಾರಿಗಳಿಗೆ ಭಯ ಇಲ್ಲ. ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಲು ಆಗುವುದಿಲ್ಲ ಎಂದರೆ, ನಾವು ಸದನಕ್ಕೆ ಯಾಕೆ ಬರಬೇಕು. ರಾಜೀನಾಮೆ ನೀಡಿ ಹೋಗಬೇಕೆ ಎಂದು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಭಾಪತಿ ಡಿ.ಎಚ್. ಶಂಕರ ಮೂರ್ತಿ, ಸರ್ಕಾರ ಸರಿಯಾದ ಸಮಯಕ್ಕೆ ಉತ್ತರ
ಕೊಡುವುದು ಜವಾಬ್ದಾರಿ. ಅಧಿಕಾರಿಗಳಿಂದ ಸರಿಯಾದ ಸಮಯಕ್ಕೆ ಉತ್ತರ ಕೊಡಿಸಲು ಸಭಾ ನಾಯಕರು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಸಭಾ ನಾಯಕ ಎಂ.ಆರ್. ಸೀತಾರಾಂ ಮಾತನಾಡಿ, ಉತ್ತರ ನೀಡುವಲ್ಲಿ ತಾರತಮ್ಯ ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.