ಬೆಂಗಳೂರು : ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ನಾಳಿನ(ಶುಕ್ರವಾರ) ಸದನವನ್ನು ರದ್ದು ಮಾಡಿರುವ ರಾಜ್ಯ ಬಿಜೆಪಿ ಸರ್ಕಾರದ ನಿಲುವು ನಾಡವಿರೋಧಿಯಾದುದ್ದು.ಸದನವನ್ನು ಇನ್ನು ಒಂದು ವಾರ ವಿಸ್ತರಿಸಿ, ಜನರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತೇನೆ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಟ್ವೀಟ್ ಮಾಡಿದ್ದಾರೆ.
”ಇನ್ನೂ ಹದಿನೈದು ದಿನ ಚರ್ಚಿಸಿದರೂ ಮುಗಿಯದಷ್ಟು ಜನರ ಸಮಸ್ಯೆಗಳಿವೆ, ಅವೆಲ್ಲವನ್ನೂ ಬದಿಗೊತ್ತಿ ಅಮಿತ್ ಶಾ ಅವರ ಎದುರು ನಡುಬಗ್ಗಿಸಿ ನಿಲ್ಲಲು ಸದನವನ್ನೇ ಮೊಟಕುಗೊಳಿಸಿರುವುದು ಜನತೆಯ ಮೇಲೆ ಬಿಜೆಪಿ ಸರ್ಕಾರಕ್ಕಿರುವ ಅಸಡ್ಡೆಯನ್ನು ತೋರುತ್ತದೆ.” ಎಂದು ಟ್ವೀಟ್ ನಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.
”ಹಳೆಯ ಪಿಂಚಣಿ ಪದ್ಧತಿ ಮರುಜಾರಿ, ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ, ಚಿಕಿತ್ಸೆ ಸಿಗದೆ ತುಮಕೂರಿನಲ್ಲಿ ಬಾಣಂತಿ, ಹಸುಗೂಸಿನನಂತಹ ಹತ್ತಾರು ವಿಷಯಗಳು ಇನ್ನೂ ಚರ್ಚೆಯಾಗಬೇಕಿವೆ. ರಾಜ್ಯ ಸರ್ಕಾರಕ್ಕೆ ಇದ್ಯಾವುದು ಬೇಕಿಲ್ಲ, ಅವರಿಗೆ ಬೇಕಿರುವುದು ಶಾ ಅವರ ಕೃಪಾಕಟಾಕ್ಷ ಮಾತ್ರ ” ಎಂದು ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.